2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಭೋವಿ ಸಮುದಾಯ ಭವನ ನಿರ್ಮಾಣ: ಸಚಿವ ಬಿ. ನಾಗೇಂದ್ರ

| Published : Jan 16 2024, 01:51 AM IST

2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಭೋವಿ ಸಮುದಾಯ ಭವನ ನಿರ್ಮಾಣ: ಸಚಿವ ಬಿ. ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಭೋವಿ ಸಮುದಾಯ ಶೈಕ್ಷಣಿಕ, ರಾಜಕೀಯವಾಗಿ ಸದೃಢರಾಗಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಭವಿಷ್ಯ ರೂಪಿಸಬೇಕು.

ಬಳ್ಳಾರಿ: ಅಂದಾಜು ₹2 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತವಾದ ಭೋವಿ ಸಮುದಾಯ ಭವನವನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ನಗರದ ಡಾ. ರಾಜ್‍ಕುಮಾರ್ ರಸ್ತೆಯ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ 852ನೇ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭೋಮಿ ಸಮುದಾಯದವರಿಗೆ ಕಲ್ಲು, ಬಂಡೆ ಒಡೆಯಲು ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸಂಗನಕಲ್ಲು, ಬಂಡಿಹಟ್ಟಿ ಇತರೆ ಪ್ರದೇಶಗಳನ್ನು ಗುರುತಿಸಿ ಸರ್ಕಾರ ನಿಯಮಗಳ ಪ್ರಕಾರ ಅಧಿಕೃತವಾಗಿ ಹಾಗೂ ಮಿತಿಯಾಗಿ ಕಲ್ಲುಬಂಡೆ ಒಡೆಯಲು ಅವಕಾಶ ಕಲ್ಪಿಸಲಾಗುವುದು ಎಂದರು. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಭೋವಿ ಸಮುದಾಯ ಶೈಕ್ಷಣಿಕ, ರಾಜಕೀಯವಾಗಿ ಸದೃಢರಾಗಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಭವಿಷ್ಯ ರೂಪಿಸಬೇಕು ಎಂದು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅವರು ವಿಶೇಷ ಉಪನ್ಯಾಸ ನೀಡಿ, ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. ಶಿವಯೋಗಿ ಸಿದ್ದರಾಮೇಶ್ವರರು ಶ್ರೇಷ್ಠ ವಚನಕಾರರಾಗಿದ್ದರು ಎಂದರು. ಮೇಯರ್ ಬಿ. ಶ್ವೇತಾ ಅವರು ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಪಿಎಚ್‌ಡಿ ಪಡೆದ ಭೋವಿ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಕವಿತಾ ಗಂಗೂರು ಮತ್ತು ತಂಡದಿಂದ ವಚನಗಳನ್ನು ಪಸ್ತುತಪಡಿಸಿದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮ ಮುನ್ನ ಶಿವಯೋಗಿ ಸಿದ್ಧರಾಮೇಶ್ವರ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ನಗರದ ಕನಕ ದುರ್ಗಮ್ಮ ದೇವಸ್ಥಾನ ಆವರಣದಿಂದ ಮೆರವಣಿಗೆ ಶುರುಗೊಂಡಿತು.

ಮೇಯರ್ ಬಿ. ಶ್ವೇತಾ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷೆ ರಾಂಡೋಲ್, ಹಗಲುವೇಷಧಾರಿಗಳ ನೃತ್ಯ ಪ್ರದರ್ಶನ ಸೇರಿದಂತೆ ನಾನಾ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.