ಸಾರಾಂಶ
ಮೌಲ್ಯ ಜೀವನ ಉಪನ್ಯಾಸಕನ್ನಡಪ್ರಭ ವಾರ್ತೆ ಆಲೂರು
ಧ್ಯಾನದ ಜತೆಗೆ ಸತತ ಓದು-ಬರಹಗಳ ಅಭ್ಯಾಸ ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಹಾಗೂ ಯೋಗ ಗುರು ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.ಅವರು ಆಲೂರು ತಾಲೂಕು ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ಹಾಗೂ ಭೈರಾಪುರ ಶಾಲೆಯ ಬುಲ್ ಬುಲ್ಸ್ ಶಾಖೆ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ ಮೌಲ್ಯ ಜೀವನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಿನಿಮಾ ಹಾಡುಗಳನ್ನು, ಕುಟುಂಬ ಹಾಗೂ ಸುತ್ತಮುತ್ತಲಿನ ಸದಸ್ಯರನ್ನು, ಪರಿಕರಗಳನ್ನು, ಪಶು-ಪಕ್ಷಿಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಅವೆಲ್ಲವನ್ನೂ ನಿತ್ಯವೂ ಪುನರಾವರ್ತನೆ ಆಗುವುದರಿಂದ ಯಾವುದೇ ವಿಷಯವನ್ನು ಓದುವಾಗ ಅಥವಾ ಬರೆಯುವಾಗ ಏಕಾಗ್ರತೆ ಹಾಗೂ ಗ್ರಹಿಕೆ, ಅಳವಡಿಸಿಕೊಳ್ಳುವಿಕೆ ಬಹಳ ಮುಖ್ಯ. ಮಕ್ಕಳು ಕೇವಲ ಅಂಕಗಳಿಗಾಗಿ ಓದದೇ ಬದುಕಿನ ಭವಿಷ್ಯದ ಮೌಲ್ಯಗಳ ವರ್ಧನೆಗಾಗಿ ಓದಬೇಕು. ಮಕ್ಕಳಿಗೆ ಸಂಸ್ಕಾರ ಬಹಳ ಮುಖ್ಯ. ಸತತ ಅಧ್ಯಯನ ಮತ್ತು ಅಧ್ಯಾಪನಗಳು ಮಕ್ಕಳಲ್ಲಿ ಸಂಸ್ಕಾರ ಬೆಳೆಸುತ್ತವೆ ಎಂದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಖಜಾಂಚಿ ಆರ್. ಎಸ್. ರಮೇಶ್ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ಈ ಮಕ್ಕಳಿಗೆ ಉತ್ತಮ ಸಂಸ್ಕಾರ ಭರಿತ ಶಿಕ್ಷಣ ದೊರೆಯಬೇಕಾಗಿದೆ. ಈ ನಿಟ್ಟಿನಲ್ಲಿ ಹಲವಾರು ಮೌಲಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪಠ್ಯ ಹಾಗೂ ಪಠ್ಯೇತರ ಚಟವಟಿಕೆಗಳಿಗೆ ಪೂರಕವಾದ ಕ್ರೀಡೆ, ಯೋಗ, ಪ್ರತಿಭಾ ಕಾರಂಜಿ, ಗಣಿತ ಮೇಳ, ವಿಜ್ಞಾನ ಮೇಳ, ಇಂಗ್ಲೀಷ್ ಫೆಸ್ಟ್ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗುತ್ತವೆ ಎಂದರು.
ಮುಖ್ಯ ಶಿಕ್ಷಕಿ ಎಲಿಜಬೆಥ್ ಮಾತನಾಡಿ, ಸಿನಿಮಾ, ಧಾರಾವಾಹಿ, ಇತರೆ ವಿಷಯಗಳನ್ನು ನೆನಪಿಟ್ಟುಕೊಳ್ಳುವಂತೆ ಪಠ್ಯದ ವಿಷಯಗಳನ್ನು ನೆನಪಿಟ್ಟುಕೊಳ್ಳುವುದರಲ್ಲಿ ಮಕ್ಕಳು ವಿಫಲವಾಗುತ್ತಾರೆ. ಈ ದಿನ ಓದಿದ ವಿಷಯ ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳಲು ಹೇಗೆ ಓದಬೇಕು, ಯಾವ ತಂತ್ರಾಂಶಗಳನ್ನು ಬಳಸಿಕೊಳ್ಳಬೇಕು ಎಂದರು.ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಸಹ ಶಿಕ್ಷಕರಾದ ನಾಗರತ್ನ, ಜ್ಯೋತಿ ಅಮೃತೇಶ್ ಹಾಜರಿದ್ದರು.
ಮಕ್ಕಳಿಗಾಗಿ ಮೌಲ್ಯ ಜೀವನ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಹಾಗೂ ಯೋಗ ಗುರು ಸುರೇಶ್ ಗುರೂಜಿ ಮಾತನಾಡಿದರು.