ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಅಪಾರ: ಜಿಪಂ ಸಿಇಒ

| Published : Mar 08 2024, 01:54 AM IST

ಸಾರಾಂಶ

ಕ್ರೀಡಾ ಕ್ಷೇತ್ರದಲ್ಲಿಯೂ ಸ್ತ್ರೀಯರು ಹೆಚ್ಚಾಗಿ ಸಾಧನೆ ಮಾಡಲಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅಭಿಮತ ವ್ಯಕ್ತಪಡಿಸಿದರು. ರಾಯಚೂರಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಹೇಳಿದರು.

ಸ್ಥಳೀಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಮಹಿಳಾ, ಯುವತಿಯರ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ವಲಯದಲ್ಲಿಯೂ ಮಹಿಳೆಯರು ಮುಂದೆ ಬರುತ್ತಿದ್ದು, ಇದೇ ರೀತಿ ಕ್ರೀಡಾ ಕ್ಷೇತ್ರದಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಧನೆ ಮಾಡಬೇಕು. ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ವೃದ್ಧಿಸುತ್ತದೆ ಆದ್ದರಿಂದ ಮುಖ್ಯವಾಗಿ ಮಹಿಳೆಯರು ತಮ್ಮ ಆರೋಗ್ಯದ ಕಾಳಜಿ ವಹಿಸಿದಾಗ ಇಡೀ ಸಮಾಜದ ಕಾಳಜಿ ವಹಿಸಿದಂತಾಗುತ್ತದೆ ಎಂದರು.

ಮಹಿಳೆಯರು ಎದುರಿಸುವ ಅನೇಕ ಸವಾಲುಗಳನ್ನು ಎದುರಿಸಲು ಸರ್ಕಾರದಿಂದ ಸಹಕಾರ ನೀಡಲಾಗುವುದು. ಕ್ರೀಡೆಯ ಜೊತೆಗೆ ಮಹಿಳೆಯರು ಮತದಾನ ಮಾಡಲು ಮುಂದಾಗಬೇಕು. ಮತದಾನವು ದೇಶದ ಪ್ರಜೆಗಳಿಗೆ ನೀಡಲಾದ ವಿಶೇಷ ಅಧಿಕಾರವಾಗಿದೆ. ಅದನ್ನು ಪ್ರತಿಯೊಬ್ಬರು ಚಲಾಯಿಸಬೇಕು ಎಂದು ತಿಳಿಸಿದರು.

ಇತರೆ ದೇಶಗಳಲ್ಲಿ ಸಂವಿಧಾನ ಜಾರಿಯಾದ ನಂತರ ಕಲವು ವರ್ಷಗಳ ನಂತರ ಮಹಿಳೆಯರಿಗೆ ಮತದಾನ ಮಾಡುವ ಅವಕಾಶ ನೀಡಲಾಯಿತು. ಆದರೆ ಭಾರತದಲ್ಲಿ ಸಂವಿಧಾನ ಜಾರಿಯಾದ ದಿನದಿಂದಲೇ ಮಹಿಳೆಯರು ಕೂಡ ಸಮಾನವಾಗಿ ಮತದಾನ ಮಾಡುವ ಕಾನೂನನ್ನು ಜಾರಿಗೆ ತರಲಾಯಿತು ಎಂದು ತಿಳಿಸಿದರು.

ಮಹಿಳೆಯರು ತಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಳಜಿಯಿಂದ ನೋಡಿಕೊಳ್ಳಬೇಕು. ಮಹಿಳೆಯರ ಆರೋಗ್ಯ ಸ್ಥಿರವಾಗಿದ್ದರೆ ಇಡೀ ಸಮಾಜದ ಆರೋಗ್ಯ ಸ್ಥಿರವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್‌ ತುಕಾರಾಮ ಪಾಂಡ್ವೆ ಶಾಟ್‌ಪುಟ್ ಎಸೆಯುವ ಮೂಲಕ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಾದ ಚೇತನಕುಮಾರ, ಡಾ. ಬಿ.ವೈ ವಾಲ್ಮೀಕಿ, ಈರೇಶ ನಾಯಕ, ಶರಣಮ್ಮ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಮಹಾಂತೇಶ ಬಿರಾದಾರ, ಶ್ರೀದೇವಿ, ಈರಮ್ಮ, ವಿವಿಧ ತಾಲೂಕುಗಳ ಶಿಶು ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.