ಪುಷ್ಪ ಕೃಷಿಯಲ್ಲಿ ಕೀಟನಾಶಕ ಬಳಕೆ ನಿಯಂತ್ರಣ ಅಗತ್ಯ

| Published : Oct 23 2023, 12:15 AM IST

ಪುಷ್ಪ ಕೃಷಿಯಲ್ಲಿ ಕೀಟನಾಶಕ ಬಳಕೆ ನಿಯಂತ್ರಣ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ರೈತರು ಉತ್ಪಾದನಾ ವೆಚ್ಚದ ಬಹುಪಾಲು ಸಸ್ಯ ಸಂರಕ್ಷಣೆಗೆ ವಿನಿಯೋಗಿಸುತ್ತಿದ್ದಾರೆ. ಹಾಗಾಗಿ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕಡೆಗೆ ಒತ್ತು ಕೊಡುವುದು ಮುಖ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಜಿ.ಎಂ.ದರ್ಶಿನಿ ಹೇಳಿದರು.
ದೊಡ್ಡಬಳ್ಳಾಪುರ: ರೈತರು ಉತ್ಪಾದನಾ ವೆಚ್ಚದ ಬಹುಪಾಲು ಸಸ್ಯ ಸಂರಕ್ಷಣೆಗೆ ವಿನಿಯೋಗಿಸುತ್ತಿದ್ದಾರೆ. ಹಾಗಾಗಿ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕಡೆಗೆ ಒತ್ತು ಕೊಡುವುದು ಮುಖ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಜಿ.ಎಂ.ದರ್ಶಿನಿ ಹೇಳಿದರು. ತಾಲೂಕಿನ ಚಿಕ್ಕರಾಯಪ್ಪನಹಳ್ಳಿ ಗ್ರಾಮದಲ್ಲಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ನಡೆದ ಸೇವಂತಿಗೆ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಸಮಗ್ರ ಹತೋಟಿ ಕ್ರಮಗಳು ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು. ಸೇವಂತಿಗೆ ಬೆಳೆಯಲ್ಲಿ ಬೇರುಕೊಳೆ ರೋಗ ತಡೆಯಲು ಜೈವಿಕ ರೋಗ ನಿಯಂತ್ರಣಗ- ಳಾದ ಟ್ರೈಕೋಡರ್ಮಾ ಮತ್ತು ಸೂಡೊಮೊನಾಸ್ ಅನ್ನು ಕೊಟ್ಟಿಗೆ ಗೊಬ್ಬರದ ಜೊತೆ ಬೆರೆಸಿ ಕೊಡುವ ಮೂಲಕ ನಿಯಂತ್ರಿಸಲು ಸಾಧ್ಯವಿದೆ. ಸೇವೆಂತಿಗೆ ಹೂವಿನ ಗಿಡಗಳ ಬೆಳೆವಣಿಗೆಯ ಸಂದರ್ಭದಲ್ಲಿ ಅತಿ ಹೆಚ್ಚಿನ ಹಸಿರು ಎಲೆಗಳಿಂದ ಕೂಡಿರುವುದರಿಂದ ರಸ ಹೀರುವ ಕೀಟಗಳ ಹತೋಟಿ ಮುಖ್ಯ ಎಂದು ತಿಳಿಸಿದರು. ಇವುಗಳ ನಿಯಂತ್ರಣಕ್ಕೆ ಹಳದಿ ಮತ್ತು ನೀಲಿ ಅಂಟು ಬಲೆಗಳ ಬಳಕೆ ಮಾಡಬೇಕು. ಅಗತ್ಯ ಕಂಡು ಬಂದಾಗ ಮಾತ್ರ ಕೀಟನಾಶಕಗಳ ಬಳಕೆಯಿಂದ ಪರಿ ಣಾಮಕಾರಿಯಾಗಿ ಸಸ್ಯ ಸಂರಕ್ಷಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ಹೂವುಗಳ ಮೊಗ್ಗು ಸರಿಯಾಗಿ ಮೂಡಲು ಅಡ್ಡಿಯಾಗಲಿದೆ ಎಂದು ತಿಳಿಸಿದರು. ಬೆಳೆ ಶರೀರ ಕ್ರಿಯಾಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಎಚ್.ವಿ.ರಾಮೇಗೌಡ ಮಾತನಾಡಿ, ಬೆಳೆಗಳಲ್ಲಿ ಸಸ್ಯ ಪ್ರಚೋದಕಗಳ ಬಳಕೆ ಮತ್ತು ಉಪಯೋಗಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದರಿಂದ ರೋಗ ಮತ್ತು ಕೀಟಗಳನ್ನು ಕಡಿಮೆ ಖರ್ಚಿನಲ್ಲಿ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದರು. ಸೇವಂತಿಗೆ ಬೆಳೆಗಾರ ವೆಂಕಟೇಶ್ ಮಾತನಾಡಿ, ಸೇವಂತಿಗೆ ಹೂ ಬೆಳೆಯುವಲ್ಲಿ ಗೊಬ್ಬರ ಪೋಲಾಗದಂತೆ ಹೊದಿಕೆ, ಹನಿ ನೀರಾವರಿ ಸೇರಿದಂತೆ ಆಧುನಿಕ ಕೃಷಿ ತಂತ್ರಜ್ಞಾನ ಕ್ರಮಗಳನ್ನು ಅಳವಡಿಕೆ ಮಾಡಿಕೊಂಡಿರುವುದರಿಂದ ಕಾರ್ಮಿಕರ ಸಂಖ್ಯೆ, ಗೊಬ್ಬರ, ಕೀಟಾನಾಶ ಎಲ್ಲವು ಸಹ ಕಡಿಮೆಯಾಗಿವೆ ಎಂದರು. ಜೈವಿಕ ರೋಗನಾಶಕಗಳ ಬಳಕೆಯಿಂದ ಸೊರಗು ರೋಗದ ಬಾಧೆ ತಡೆಗಟ್ಟಲು ಸಹಕಾರಿಯಾಗಿದೆ. ಸೇವಂತಿಗೆ ಬೆಳೆಯಲ್ಲಿ ಸೊರಗು, ಬೇರುಕೊಳ ರೋಗವನ್ನು ತಡೆದರೆ ಉತ್ತಮ ಗುಣಮಟ್ಟದ ಹೂ ಹಾಗೂ ಇಳುವರಿಯನ್ನು ಪಡೆಯಲು ಸಾಧ್ಯವಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಚಿಕ್ಕರಾಯಪ್ಪನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಹೂ ಬೆಳೆಗಾರರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು. 22ಕೆಡಿಬಿಪಿ4- ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕರಾಯಪ್ಪನಹಳ್ಳಿ ಗ್ರಾಮದಲ್ಲಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಸೇವಂತಿಗೆ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಸಮಗ್ರ ಹತೋಟಿ ಕ್ರಮಗಳು ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ನಡೆಯಿತು.