ಐತಿಹಾಸಿಕ ದಸರಾ ಉತ್ಸವಕ್ಕೆ ಕ್ಷಣಗಣನೆ: ಕೊಡಗಿಗೆ ಪ್ರವಾಸಿಗರ ದಂಡು
KannadaprabhaNewsNetwork | Published : Oct 23 2023, 12:15 AM IST
ಐತಿಹಾಸಿಕ ದಸರಾ ಉತ್ಸವಕ್ಕೆ ಕ್ಷಣಗಣನೆ: ಕೊಡಗಿಗೆ ಪ್ರವಾಸಿಗರ ದಂಡು
ಸಾರಾಂಶ
ಅ.24ರ ವಿಜಯದಶಮಿಯಂದು ರಾತ್ರಿ ಹತ್ತು ಗಂಟೆಯಿಂದ ದಸರಾ ಉತ್ಸವ ಆರಂಭಗೊಳ್ಳಲಿದ್ದು, ದಶಮಂಟಪಗಳ ವೈಭವದ ಶೋಭಾಯಾತ್ರೆ ನಡೆಯಲಿದೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರವಾಸಿಗರ ದಂಡೇ ಮಂಜಿನ ನಗರಿಗೆ ಹರಿದುಬಂದಿದೆ. ದಶಮಂಟಪಗಳ ಶೋಭಾಯಾತ್ರೆಗೆ ಅಂತಿಮ ಸಿದ್ಧತೆಗಳು ಮಾಡಲಾಗುತ್ತಿದ್ದು, ಸಾವಿರಾರು ಮಂದಿ ದಸರಾ ಉತ್ಸವಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಅ.24ರ ವಿಜಯದಶಮಿಯಂದು ರಾತ್ರಿ ಹತ್ತು ಗಂಟೆಯಿಂದ ದಸರಾ ಉತ್ಸವ ಆರಂಭಗೊಳ್ಳಲಿದ್ದು, ದಶಮಂಟಪಗಳ ವೈಭವದ ಶೋಭಾಯಾತ್ರೆ ನಡೆಯಲಿದೆ. ಈಗಾಗಲೇ ಮಂಟಪಗಳ ಕೆಲಸ ಅಂತಿಮ ಹಂತ ತಲುಪಿದ್ದು, ಕಲಾಕೃತಿಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೆ ಡಿಜೆ, ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿದೆ. ದಶಮಂಟಪಗಳಾದ ಮಡಿಕೇರಿಯ ಪೇಟೆ ಶ್ರೀ ರಾಮ ಮಂದಿರ, ಚೌಡೇಶ್ವರಿ, ಕೋದಂಡ ರಾಮ, ಕೋಟೆ ಮಹಾ ಗಣಪತಿ, ದೇಚೂರು ರಾಮ ಮಂದಿರ, ಕಂಚಿ ಕಾಮಾಕ್ಷಿ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕರವಲೆ ಭಗವತಿ ದೇವಾಲಯಗಳ ಮಂಟಪಗಳು ಮಂಗಳವಾರ ರಾತ್ರಿ ಪ್ರದರ್ಶನ ನೀಡಲು ಸಜ್ಜಾಗುತ್ತಿವೆ. ಮಡಿಕೇರಿಯಲ್ಲಿ ಮಂಗಳವಾರ ರಾತ್ರಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ರಸ್ತೆಯುದ್ದಕ್ಕೂ ಜನರೇ ಕಂಡುಬರಲಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್‌ನಲ್ಲಿ ತೊಡಗಿದೆ. ನಗರದ ಪ್ರಮುಖ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಂಗಳವಾರ ರಾತ್ರಿಯಿಂದ ಬೆಳಗ್ಗೆ 5 ಗಂಟೆ ವರೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಇಲ್ಲಿಯೂ ಸಾವಿರಾರು ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಜನರು ಆಗಮಿಸುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳ ಬದಿಯಲ್ಲಿ ವಿವಿಧ ವಸ್ತುಗಳು, ತಿಂಡಿ ತಿನಿಸುಗಳ ಅಂಗಡಿಗಳು ಆರಂಭವಾಗಿದೆ. ಕರ್ಕಶ ಶಬ್ದ ಉಂಟು ಮಾಡುವ ಪೀಪಿ ಹಾಗೂ ಭದ್ರತೆಯ ಹಿನ್ನೆಲೆಯಲ್ಲಿ ಮುಖವಾಡ ಮಾರಾಟ ನಿಷೇಧಿಸಲಾಗಿದೆ. ದಶಮಂಟಪಗಳ ಶೋಭಾಯಾತ್ರೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ ದೇವಾಲಯ ಸಮಿತಿಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಅತಿ ಹೆಚ್ಚು ಪ್ರದರ್ಶನ ನೀಡಿದ ಮಂಟಪಕ್ಕೆ ಮಡಿಕೇರಿ ದಸರಾ ಸಮಿತಿಯಿಂದ ಇದೇ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಬುಧವಾರ ಮುಂಜಾನೆ ದಶಮಂಟಪಗಳು ಹಾಗೂ ನಾಲ್ಕು ಶಕ್ತಿ ದೇವತೆಗಳ ಕರಗಗಳು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಮುಕ್ತಾಯಗೊಳ್ಳಲಿದೆ. ನಿಯಮ ಪಾಲನೆಯಾಗುತ್ತದೆಯೇ? ಮಂಟಪಗಳಲ್ಲಿ ಅಬ್ಬರದ ಡಿಜೆ ಬಳಸಬಾರದು ಎಂದು ವಕೀಲ ಅಮೃತೇಶ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ದಶಮಂಟಪ ಸಮಿತಿ ಕೂಡ ಅಬ್ಬರದ ಧ್ವನಿವರ್ಧಕ ಮಾಡದಂತೆ ಹತ್ತು ಮಂಟಪಗಳ ಸಮಿತಿಗೆ ಸೂಚನೆ ನೀಡಿದೆ. ಅಲ್ಲದೆ ಮಂಟಪಗಳಲ್ಲಿ ಲೇಸರ್ ಲೈಟ್, ಸುಡುಮದ್ದು, ಕ್ರೇನ್ ಬಳಸಬಾರದು ಎಂದು ಸೂಚನೆ ನೀಡಿದೆ. ಆದರೆ ಇದು ಎಷ್ಟರ ಮಟ್ಟಿಗೆ ಪಾಲನೆಯಾಗಲಿದೆ ಎಂದು ಕಾದು ನೋಡಬೇಕಿದೆ. ಮಂಟಪಗಳ ಶೋಭಾಯಾತ್ರೆ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ದಶಮಂಟಪಗಳ ಶೋಭಾಯಾತ್ರೆ. ಒಂದೊಂದು ಮಂಟಪಗಳು ಕೂಡಾ ವಿವಿಧ ಬಗೆಯ ದೇವರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸುತ್ತದೆ. ಎರಡು ಟ್ರ್ಯಾಕ್ಟರ್‌ಗಳಲ್ಲಿ ದೇವರ ಹಾಗೂ ಅಸುರರ ಕಲಾಕೃತಿಗಳೊಂದಿಗೆ ಧ್ವನಿವರ್ಧಕ, ಲೈಟಿಂಗ್‌ನೊಂದಿಗೆ ಪ್ರದರ್ಶನವನ್ನು ನೀಡುತ್ತದೆ. ಇದಕ್ಕಾಗಿ ಲಕ್ಷಾಂತರ ರುಪಾಯಿ ಹಣವನ್ನು ಖರ್ಚು ಮಾಡಿವೆ. ಪ್ರಶಸ್ತಿ ಕೂಡ ದೊರಕುವ ಹಿನ್ನೆಲೆಯಲ್ಲಿ ಮಂಟಪಗಳಿಗೆ ಪೈಪೋಟಿ ಜೋರಾಗಿದೆ. ಇದರಿಂದ ಮಂಟಪ ಪ್ರದರ್ಶನ ವಿಭಿನ್ನ ರೀತಿಯಲ್ಲಿ ಝಗಮಗಿಸಲಿದೆ. ಈಗಾಗಲೇ ಮಂಟಪದ ತೀರ್ಪುಗಾರಿಕೆಯ ಸ್ಥಳವನ್ನು ದಶಮಂಟಪ ಸಮಿತಿ ನಿಗದಿ ಮಾಡಿದೆ. ಮಂಟಪದ ಸಮೀಪ ಎಚ್ಚರ ಇರಲಿ ದಸರಾ ಮಂಟಪದ ಪ್ರದರ್ಶನ ವೇಳೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಜಾಗೃತೆಯಿಂದ ಇದ್ದರೆ ಉತ್ತಮ. ಮಡಿಕೇರಿ ನಗರ ಪುಟ್ಟ ರಸ್ತೆಯಿಂದ ಕೂಡಿದೆ. ಮಂಟಪ ಪ್ರದರ್ಶನ ವೇಳೆ ಸಾಕಷ್ಟು ನೂಕು ನುಗ್ಗಲು ಉಂಟಾಗಲಿದೆ. ರಸ್ತೆಯಲ್ಲಿ ನಡೆಯಲೂ ಕೂಡ ಜಾಗವಿಲ್ಲದಂತಹ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಎಚ್ಚರ ವಹಿಸಬೇಕಾಗಿದೆ. ಕೆಲವು ಕಡೆಗಳಲ್ಲಿ ಪ್ರದರ್ಶನ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿಗೆ ಹೆಚ್ಚಿನ ಪ್ರವಾಸಿಗರು ದಸರಾ ಹಿನ್ನೆಲೆಯಲ್ಲಿ ಮಂಜಿನ ನಗರಿ ಮಡಿಕೇರಿಗೆ ಭಾನುವಾರ ಪ್ರವಾಸಿಗರ ದಂಡೇ ಹರಿದುಬಂದಿದೆ. ಪ್ರವಾಸಿಗರ ಆಗಮನ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಹರಸಾಹಸಪಡುವಂತಾಯಿತು. ಉತ್ತರ ಭಾರತ ಹಾಗೂ ತಮಿಳುನಾಡಿನ ಹೆಚ್ಚಿನ ಪ್ರವಾಸಿಗರು ಕಂಡುಬಂದರು. ಪ್ರವಾಸಿ ತಾಣ ರಾಜಾಸೀಟು ಸೇರಿದಂತೆ ಹಲವು ಕಡೆ ಪ್ರವಾಸಿಗರು ಕಿಕ್ಕಿರಿದು ಸೇರಿದ್ದರು. ಮಂಗಳವಾರ ದಸರಾಗೆ ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೇರಿ ಕಡೆಗೆ ಪ್ರವಾಸಿಗರು ಆಗಮಿಸಲಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಹೋಂಸ್ಟೇ, ರೆಸಾರ್ಟ್‌ಗಳು ಬಹುತೇಕ ಹೌಸ್‌ಫುಲ್ ಆಗಿವೆ.