ಶೋಷಿತರ ಸಮಾವೇಶ ಮಾಡಿ ಅಲ್ಪಸಂಖ್ಯಾತರಿಗೆ ಅನುದಾನ: ಕೆ.ಎಸ್.ನವೀನ್

| Published : Apr 01 2024, 12:54 AM IST

ಶೋಷಿತರ ಸಮಾವೇಶ ಮಾಡಿ ಅಲ್ಪಸಂಖ್ಯಾತರಿಗೆ ಅನುದಾನ: ಕೆ.ಎಸ್.ನವೀನ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಹೆಜ್ಜೆಗೂ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಎಸ್ಸಿಗಳನ್ನು ಧಮನ ಮಾಡುವ ಕೆಲಸ ಮಾಡುತ್ತಿದೆ. ಇದರ ಕರಾಳ ಮುಖವನ್ನು ಬಯಲು ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ ನಡೆಸಿ ನಂತರ ಅಲ್ಪಸಂಖ್ಯಾತರಿಗೆ ಅನುದಾನ ಬಿಡುಗಡೆ ಮಾಡಿದರೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಆರೋಪಿಸಿದರು.

ಪಕ್ಷದ ಪ್ರಚಾರ ಸಮಿತಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಹೆಜ್ಜೆಗೂ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಎಸ್ಸಿಗಳನ್ನು ಧಮನ ಮಾಡುವ ಕೆಲಸ ಮಾಡುತ್ತಿದೆ. ಇದರ ಕರಾಳ ಮುಖವನ್ನು ಬಯಲು ಮಾಡುತ್ತೇವೆ. ಎಸ್ಸಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಾಕತ್ತಿದ್ದರೆ ಸರಿಪಡಿಸಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ 5 ಎಸ್ಸಿ ಮೀಸಲು ಕ್ಷೇತ್ರಗಳಿವೆ. ಅವುಗಳಲ್ಲಿ 2 ಎಡಗೈ, 1 ಬೋವಿ, 1 ಲಂಬಾಣಿ ಹಾಗೂ 1 ಛಲವಾದಿ ಸಮುದಾಯಕ್ಕೆ ಎಂದು ಹಂಚಿಕೆ ಮಾಡಲಾಗಿದೆ. ಕೋಲಾರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿರುವುದರಿಂದ ಅಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಭೋವಿ ಸಮುದಾಯದವರಿಗೆ ಟಿಕೆಟ್ ನೀಡಲಾಗಿದೆ. ಎಂ.ಚಂದ್ರಪ್ಪರವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಬಗ್ಗೆ ವಿಶೇಷ ಗೌರವವಿದೆ. ಆದರೆ ಬಿಜೆಪಿಗೂ ಹಾಗೂ ಅವರಿಗೆ ಯಾವುದೇ ಸಂಬಂಧ ಇಲ್ಲದ ಕೆಲವು ನಾಯಕರುಗಳು ಚಂದ್ರಪ್ಪರವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಗೋವಿಂದ ಕಾರಜೋಳ ಅವರು ಮೊದಲ ಬಾರಿಗೆ ನಗರಕ್ಕೆ ಆಗಮಿಸುವ ಸಂದರ್ಭದಲ್ಲಿ ಮಸಿ ಎರೆಚುವ, ಮೊಟ್ಟೆ ಹೊಡೆಯುವ, ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಪ್ರಯತ್ನ ಮಾಡಲಾಗಿದೆ. ಐದು ಬಾರಿ ಶಾಸಕರಾಗಿ, ಉಪ ಮುಖ್ಯಮಂತ್ರಿಯಾಗಿದಂತಹ ಕಾರಜೋಳ ರವರಿಗೆ ಮಸಿ ಬಳಿಯಲು ಮೊಟ್ಟೆ ಎಸೆಯಲು ಸಿದ್ಧತೆ ಮಾಡಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ. ಇಂತಹ ನಡೆಯನ್ನು ಬಿಜೆಪಿ ಯಶಸ್ವಿಯಾಗಿ ಎದುರಿಸುತ್ತದೆ ಎಂದರು.

ಯಡಿಯೂರಪ್ಪನವರು ನಮಗೆ ಮೋಸ ಮಾಡಿದರು ಎಂದು ಶಾಸಕ ಎಂ.ಚಂದ್ರಪ್ಪ ಆರೋಪಿಸಿದ್ದಾರೆ. ಬ್ಲಾಕ್ ಮೇಲ್ ಮೂಲಕ ಹೆದರಿಸುವ ಅವಶ್ಯಕತೆ ಯಡಿಯೂರಪ್ಪನವರಿಗೆ ಇಲ್ಲ. ಯಡಿಯೂರಪ್ಪ ಅವರ ಆಶೀರ್ವಾದದಿಂದ ನೀವು ಹೊಳಲ್ಕೆರೆಯಲ್ಲಿ ಗೆದ್ದಿದ್ದೀರಿ. ಭೋವಿ ಸಮುದಾಯಕ್ಕೆ ಅನ್ಯಾಯ ಆಗಿದ್ದರೆ ನಿಮ್ಮ ಮಗನಿಂದ ಧ್ವನಿ ಎತ್ತಿಸಬೇಡಿ. ಇವತ್ತಿಂದ ಯಾರಾದರೂ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರೆ ಅಂಥವರ ವಿರುದ್ಧ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಲಿದೆ. ಏಪ್ರಿಲ್ 12ರಂದು ಹೊಳಲ್ಕೆರೆಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ 50 ಸಾವಿರ ಜನ ಸೇರಿಸಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದು ಶಾಸಕ ಎಂ.ಚಂದ್ರಪ್ಪ ಅವರಿಗೆ ನೇರವಾಗಿ ಟಾಂಗ್ ನೀಡಿದರು

ಚಿತ್ರದುರ್ಗ ಲೋಕಸಭೆ ಎಸ್ಸಿ ಮೀಸಲು ಕ್ಷೇತ್ರವಾದ ತಕ್ಷಣ ಭೋವಿ ಸಮುದಾಯದ ಜನಾರ್ಧನಸ್ವಾಮಿ ಅವರಿಗೆ ಟಿಕೇಟ್ ಕೊಡಲಾಗಿತ್ತು. ಹೊಳಲ್ಕೆರೆ ಮೀಸಲು ಕ್ಷೇತ್ರವಾದ ವರ್ಷದಿಂದ ಈವರೆಗೆ ಬಿಜೆಪಿ ಭೋವಿ ಸಮುದಾಯದ ಚಂದ್ರಪ್ಪ ಅವರಿಗೆ ಟಿಕೆಟ್ ನೀಡುತ್ತಿದೆ. ಹೊಸದುರ್ಗ ಸಾಮಾನ್ಯ ಕ್ಷೇತ್ರದಲ್ಲಿ ಗೂಳಿಹಟ್ಟಿ ಶೇಖರ್ ಅವರಿಗೆ ಟಿಕೆಟ್ ಕೊಟ್ಟಿದೆ. ಗೂಳಿಹಟ್ಟಿಗೆ ಟಿಕೇಟ್ ಕೈ ತಪ್ಪಿದಾಗ ಚಂದ್ರಪ್ಪ ಯಾಕೆ ದನಿ ಎತ್ತಲಿಲ್ಲ ಎಂದು ನವೀನ್ ಪ್ರಶ್ನೆ ಮಾಡಿದರು.

ಹೊಳಲ್ಕೆರೆಯಲ್ಲಿ ಅತೀ ಹೆಚ್ಚು ಲಿಂಗಾಯತ ಮತದಾರರಿದ್ದಾರೆ. ಚಂದ್ರಪ್ಪ ಅವರ ನಡವಳಿಕೆಯಿಂದ ಅಲ್ಲಿನ ಜನ ಬೇಸರವಾಗಿದ್ದಾರೆ. ಜನರ ಮುಂದೆ ಯಡಿಯೂರಪ್ಪ ಕುತ್ತಿಗೆ ಕೊಯ್ದರು ಎಂದು ಹೇಳಿ, ಮಾಧ್ಯಮಗಳ ಮುಂದೆ ತಂದೆ ಸಮಾನ ಎನ್ನುತ್ತಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಹೊಳಲ್ಕೆರೆ ಕ್ಷೇತ್ರದ ಜನ ನೋವಿನಲ್ಲಿದ್ದಾರೆ. ಈಗಲೂ ಚಂದ್ರಪ್ಪ ಅವರ ಕೈಯಲ್ಲೇ ನಿರ್ಧಾರ ಇದೆ. ತಮ್ಮ ಪಟ್ಟು ಸಡಿಲಿಸಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲಿ ಎಂದು ನವೀನ್ ಸಲಹೆ ಮಾಡಿದರು.

ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಜಿ.ಟಿ.ಸುರೇಶ್, ಸಂಪತ್, ಎಸ್.ಆರ್.ಗಿರೀಶ್, ಛಲವಾದಿ ತಿಪ್ಪೇಸ್ವಾಮಿ, ನವೀನ್ ಸುದ್ದಿಗೋಷ್ಠಿಯಲ್ಲಿದ್ದರು.