ಸಾರಾಂಶ
ದ.ಕ. ಲೋಕಸಭೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಿಲ್ಲವ ಮತದಾರರ ಪ್ರಾಬಲ್ಯವೇ ಹೆಚ್ಚು. ಈ ಕಾರಣದಿಂದಲೇ ಬಿಲ್ಲವರ ಮತ ಸೆಳೆಯಲು ಎರಡೂ ಪಕ್ಷದವರು ‘ಕಾರ್ಯಾಚರಣೆ’ಯಲ್ಲಿ ನಿರತರಾಗಿದ್ದಾರೆ. 2ನೇ ಅತಿ ಹೆಚ್ಚು ಮತದಾರರಿರೋದು ಮುಸ್ಲಿಮರು. ನಂತರ ಕ್ರಿಶ್ಚಿಯನ್, ಬಂಟರು, ಎಸ್ಸಿ-ಎಸ್ಟಿ, ಒಕ್ಕಲಿಗ ಮತದಾರರು ಕೂಡ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ.
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜಾತಿ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಓಟು ಸೆಳೆಯುವ ಇತರ ಅಂಶಗಳ ಜತೆಗೆ ಜಾತಿ ಆಧಾರದಲ್ಲೂ ಓಲೈಕೆಯ ಪ್ರಯತ್ನವನ್ನು ಇಲ್ಲಿನ ಪ್ರಬಲ ಪಕ್ಷಗಳಾದ ಬಿಜೆಪಿ- ಕಾಂಗ್ರೆಸ್ ನಡೆಸುತ್ತಿವೆ.
ದ.ಕ. ಲೋಕಸಭೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಿಲ್ಲವ ಮತದಾರರ ಪ್ರಾಬಲ್ಯವೇ ಹೆಚ್ಚು. ಈ ಕಾರಣದಿಂದಲೇ ಬಿಲ್ಲವರ ಮತ ಸೆಳೆಯಲು ಎರಡೂ ಪಕ್ಷದವರು ‘ಕಾರ್ಯಾಚರಣೆ’ಯಲ್ಲಿ ನಿರತರಾಗಿದ್ದಾರೆ. 2ನೇ ಅತಿ ಹೆಚ್ಚು ಮತದಾರರಿರೋದು ಮುಸ್ಲಿಮರು. ನಂತರ ಕ್ರಿಶ್ಚಿಯನ್, ಬಂಟರು, ಎಸ್ಸಿ-ಎಸ್ಟಿ, ಒಕ್ಕಲಿಗ ಮತದಾರರು ಕೂಡ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಎರಡೂ ಪಕ್ಷದವರು ಜಾತಿ ಲೆಕ್ಕವನ್ನು ಈಗಾಗಲೇ ಕಲೆ ಹಾಕಿ ಅದಕ್ಕೆ ತಕ್ಕಂತೆ ಕಾರ್ಯಯೋಜನೆ ರೂಪಿಸುತ್ತಿದ್ದಾರೆ ಎನ್ನುವುದು ಸತ್ಯ!ಯಾವ ಸಮುದಾಯ ಎಷ್ಟು?:
ಪಕ್ಷಗಳ ಲೆಕ್ಕಾಚಾರದ (ಬೂತ್ ಮಟ್ಟದಿಂದ ಕಲೆಹಾಕಿದ ಲೆಕ್ಕ) ಪ್ರಕಾರ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ 4.50 ಲಕ್ಷಕ್ಕೂ ಅಧಿಕ ಬಿಲ್ಲವ ಮತದಾರರಿದ್ದಾರೆ. ಮುಸ್ಲಿಂ ಮತದಾರರು ಸುಮಾರು 4 ಲಕ್ಷದವರೆಗೆ ಇದ್ದಾರೆ. 2 ಲಕ್ಷದಷ್ಟು ಎಸ್ಸಿ ಎಸ್ಟಿ ಸಮುದಾಯದವರಿದ್ದರೆ, ಬಂಟರು ಸುಮಾರು 1.50 ಲಕ್ಷ, ಒಕ್ಕಲಿಗರು 1.60 ಲಕ್ಷ, ಕ್ರಿಶ್ಚಿಯನ್ನರು 1.50 ಲಕ್ಷ, ಉಳಿದಂತೆ ಬ್ರಾಹ್ಮಣರು, ಜೈನರು, ಇತರ ಸಣ್ಣ ಸಮುದಾಯಗಳು ಸೇರಿ ಒಟ್ಟು 17.96 ಲಕ್ಷ (ಮಾ.15ಕ್ಕೆ ಅನ್ವಯಿಸಿ) ಮತದಾರರು ಕ್ಷೇತ್ರದಲ್ಲಿದ್ದಾರೆ.ರಾಜ್ಯದ ಇತರೆಡೆಗಳಿಗೆ ಹೋಲಿಸಿದರೆ ವೈವಿಧ್ಯಮಯ ಜಾತಿ ಸಮುದಾಯಗಳಿರುವುದು ಕರಾವಳಿಯಲ್ಲಿ. ಬಿಲ್ಲವರು, ಮುಸ್ಲಿಮರನ್ನು ಹೊರತುಪಡಿಸಿದರೂ ನಾಲ್ಕೈದು ಇತರ ಸಮುದಾಯದವರು ಕೂಡ ಇಲ್ಲಿ ಉತ್ತಮ ‘ಪ್ರಾಬಲ್ಯ’ ಹೊಂದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಕೇವಲ ಜಾತಿ ಸಮೀಕರಣವೊಂದೇ ಮುಖ್ಯ ಆಗಲ್ಲ ಎನ್ನುವುದು ಪಕ್ಷಗಳಿಗೂ ಗೊತ್ತು. ಆದ್ದರಿಂದ ಜಾತಿ ಸೆಲೆಯೊಂದಿಗೆ ಮತ ಸೆಳೆಯುವ ಇತರ ಅಂಶಗಳ ಕಡೆಗೂ ಪಕ್ಷಗಳು ಗಮನ ನೆಟ್ಟಿವೆ. ಅಭಿವೃದ್ಧಿ, ಹಿಂದುತ್ವ, ಸಾಮಾಜಿಕ ನ್ಯಾಯ, ಧರ್ಮ ಈ ಎಲ್ಲ ವಿಚಾರಗಳೂ ಮುನ್ನೆಲೆಗೆ ಬಂದಿವೆ. ಆದರೆ ಮತದಾರರ ಒಲವು ಹೇಗಿದೆ ಎನ್ನುವುದು ಮಾತ್ರ ನಿಗೂಢ.ಈ ಬಾರಿ ಬಿಲ್ಲವರ ಚಿತ್ತ ಎತ್ತ?
ಬಿಲ್ಲವ ಮತದಾರರು ಅತಿ ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಸಹಜವಾಗಿ ಸೋಲು- ಗೆಲುವಿನ ಲೆಕ್ಕಾಚಾರ ಈ ಪ್ರಬಲ ಸಮುದಾಯದ ಬೆಂಬಲದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ದ.ಕ. ಲೋಕಸಭೆ ಕ್ಷೇತ್ರದಲ್ಲಿ ಕಳೆದ ನಾಲ್ಕೂವರೆ ದಶಕಗಳಲ್ಲಿ ಬಿಲ್ಲವ ಅಭ್ಯರ್ಥಿ ಕಣದಲ್ಲಿದ್ದಾಗ ಗೆದ್ದಿದ್ದಾರೆ, ಹಾಗೆಯೇ ಸೋತ ಇತಿಹಾಸವೂ ಇದೆ. 1977ರಿಂದ ಜನಾರ್ದನ ಪೂಜಾರಿ ಸತತವಾಗಿ ನಾಲ್ಕು ಬಾರಿ ಗೆದ್ದು ದಾಖಲೆ ಬರೆದಂತೆಯೇ, ಐದು ಬಾರಿ ಅವರನ್ನು ಮತದಾರರು ಸೋಲಿಸಿದ್ದಾರೆ. ಬಿಲ್ಲವ ಸಮುದಾಯ ಹಿಂದುತ್ವದೆಡೆಗೆ ವಾಲಿದ ಬಳಿಕ ತನ್ನದೇ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಪೂಜಾರಿ ವಿಫಲರಾದರು ಎನ್ನುವುದನ್ನು ಹಿರಿಯ ಕಾಂಗ್ರೆಸಿಗರು ಈಗಲೂ ಹೇಳುತ್ತಾರೆ. ಇದೀಗ ಹಲವು ವರ್ಷಗಳ ಬಳಿಕ ಬಿಲ್ಲವ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಹೊಸ ತಂತ್ರಗಾರಿಕೆಯ ದಾಳವನ್ನು ಮುಂದಿರಿಸಿದೆ. ಆದರೆ ಹಿಂದುತ್ವ ಹಾಗೂ ಬಿಜೆಪಿಯೆಡೆಗೆ ಸಾಗಿಹೋಗಿರುವ ಬಿಲ್ಲವ ಮತದಾರರು ಈ ಚುನಾವಣೆಯಲ್ಲಿ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕಲಿದ್ದಾರೆಯೇ ಅಥವಾ ಈ ಹಿಂದಿನಂತೆ ಹಿಂದುತ್ವವನ್ನೇ ಅಪ್ಪಿಕೊಳ್ಳಲಿದ್ದಾರೆಯೇ ಕಾದು ನೋಡಬೇಕು.