ಸಾರಾಂಶ
ಕಾವೇರಿ ರೀತಿ ಕೃಷ್ಣಾ, ಭೀಮಾ, ಘಟಪ್ರಭ, ಮಲಪ್ರಭ ಮತ್ತು ದೋಣಿ ನದಿಗಳು ಕೂಡ ಕೈಗಾರಿಕೆಗಳಿಂದ ಬರುತ್ತಿರುವ ತ್ಯಾಜ್ಯ ಮತ್ತು ಗೃಹ ಬಳಕೆ ತ್ಯಾಜ್ಯಗಳಿಂದ ದೊಡ್ಡ ಮಟ್ಟದ ಜಲಮಾಲಿನ್ಯಕ್ಕೆ ತುತ್ತಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಕಳವಳ
ಬಾಗಲಕೋಟೆ : ಕಾವೇರಿ ರೀತಿ ಕೃಷ್ಣಾ, ಭೀಮಾ, ಘಟಪ್ರಭ, ಮಲಪ್ರಭ ಮತ್ತು ದೋಣಿ ನದಿಗಳು ಕೂಡ ಕೈಗಾರಿಕೆಗಳಿಂದ ಬರುತ್ತಿರುವ ತ್ಯಾಜ್ಯ ಮತ್ತು ಗೃಹ ಬಳಕೆ ತ್ಯಾಜ್ಯಗಳಿಂದ ದೊಡ್ಡ ಮಟ್ಟದ ಜಲಮಾಲಿನ್ಯಕ್ಕೆ ತುತ್ತಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಸಂಯುಕ್ತಾಶ್ರಯದಲ್ಲಿ ಬಾಗಲಕೋಟೆಯಲ್ಲಿ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನರೇಂದ್ರಸ್ವಾಮಿ ಅವರು, ಸರ್ಕಾರ, ಸ್ಥಳೀಯ ಆಡಳಿತ ಮತ್ತು ಸಾರ್ವಜನಿಕರು ತ್ಯಾಜ್ಯ ಸಂಸ್ಕರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕೈಗಾರಿಕೆಗಳಿಂದ ತಾಜ್ಯ
ಕಾವೇರಿ ಸೇರಿದಂತೆ ರಾಜ್ಯದ ಕೃಷ್ಣಾ, ಭೀಮಾ, ಘಟಪ್ರಭ, ಮಲಪ್ರಭ ಮತ್ತು ದೋಣಿ ನದಿಗಳಿಗೆ ಈ ಭಾಗದ ಸಕ್ಕರೆ, ಸಿಮೆಂಟ್, ಎಥನಾಲ್, ಕ್ರಷರ್ ಮತ್ತಿತರ ಕೈಗಾರಿಕೆಗಳಿಂದ ತಾಜ್ಯವನ್ನು ಬಿಡಲಾಗುತ್ತಿದೆ. ತ್ಯಾಜ್ಯ ಸಂಸ್ಕರಿಸದೆ ನದಿಗಳಿಗೆ ಬಿಡುತ್ತಿರುವ ಪ್ರಕರಣಗಳು ಗೊತ್ತಾದರೆ ಸಾರ್ವಜನಿಕರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡಬೇಕು ಎಂದರು.
ಕೃಷ್ಣಾ ನದಿ ನೀರನ್ನು ವಿಜಯಪುರ ಜಿಲ್ಲೆಯಲ್ಲಿ ಎರಡು ಕಡೆ ಮತ್ತು ಭೀಮಾ ನದಿ ನೀರನ್ನು ಒಂದು ಕಡೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬಾಗಲಕೋಟೆಯಲ್ಲಿ ಎರಡು ಕಡೆ ಘಟಪ್ರಭಾ, ಎರಡು ಕಡೆ ಮಲಪ್ರಭಾ ಮತ್ತೊಂದು ಕಡೆ ಕೃಷ್ಣಾ ನದಿ ನೀರನ್ನು ಪರೀಕ್ಷೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಸಕ್ಕರೆ ಮತ್ತು ಡಿಸ್ಟಿಲರಿ ಕೈಗಾರಿಕೆಗಳು ಹೆಚ್ಚಾಗಿವೆ
ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಯಲ್ಲಿ ಕಬ್ಬು ಪ್ರಮುಖ ಬೆಳೆಯಾಗಿರುವುದರಿಂದ ಸಕ್ಕರೆ ಮತ್ತು ಡಿಸ್ಟಿಲರಿ ಕೈಗಾರಿಕೆಗಳು ಹೆಚ್ಚಾಗಿವೆ. ಸಕ್ಕರೆ ಉತ್ಪಾದನೆಯ ಪ್ರಮುಖ ತ್ಯಾಜ್ಯವಾದ ಕಬ್ಬಿಣ ಸಿಪ್ಪೆ (ಬಗ್ಯಾಸ್) ಪರ್ಯಾಯ ಇಂಧನವಾಗಿದ್ದು ಇದರಿಂದ ಕಲ್ಲಿದ್ದಿಲಿನ ಬಳಕೆಯನ್ನು ಕಮ್ಮಿ ಮಾಡಬಹುದಾಗಿದೆ. ಸಕ್ಕರೆ ಉದ್ಯಮದ ಮತ್ತೊಂದು ತ್ಯಾಜ್ಯವಾದ ಕಾಕಂಬಿ (ಮೊಲ್ಯಾಸಿಸ್) ಈಗ ಸಂಪೂರ್ಣವಾಗಿ ಎಥೆನಾಲ್ ತಯಾರಿಕೆಯಲ್ಲಿ ಬಳಕೆಯಾಗುತ್ತಿದೆ. ಈ ಭಾಗದ ಹೆಚ್ಚಿನ ಕೈಗಾರಿಕೆಗಳು ಮಲ್ಯಾಸಸ್ ಮತ್ತು ಕಾಳು ಆಧಾರಿತ ಡಿಸ್ಟಿಲರಿ ಘಟಕಗಳನ್ನು ಹೊಂದಿದ್ದು ಅವುಗಳಲ್ಲಿ ಹಲವಾರು ಪರಿಸರಕ್ಕೆ ಹಾನಿಕಾರಕ ಬೆಳವಣಿಗೆಗಳು ಆಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆದರು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 50 ವರ್ಷ ಪೂರೈಸಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದು ಸುವರ್ಣ ಮಹೋತ್ಸವದ ಗುರಿಯಾಗಿದೆ. ಇಂದಿರಾ ಗಾಂಧಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪನೆ ಮಾಡಿರುವುದು ಮಾತ್ರವಲ್ಲ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದರು. ಆ ಕಾಯಿದೆಗಳನ್ನು ಜನರಿಗೆ ತಿಳಿಸಲು ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇಂದಿರಾ ಗಾಂಧಿ 1972ರಲ್ಲಿ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿ ರಚಿಸಿದರು. ಅದೇ ವರ್ಷ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ - 1972 ಅನ್ನು ಜಾರಿಗೆ ತಂದರು. 1973ರಲ್ಲಿ ಅಳಿವಿನಂಚಿನಲ್ಲಿರುವ ಹುಲಿಗಳನ್ನು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಪ್ರಾಜೆಕ್ಟ್ ಟೈಗರ್ ಎಂಬ ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ರೂಪಿಸಿದರು. 1974ರಲ್ಲಿ ಜಲ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದರು. ಅದೇ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದರು. 1981ರಲ್ಲಿ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ ಜಾರಿಗೆ ತಂದರು. ಈ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ವೇಳೆ ಇಂದಿರಾ ಗಾಂಧಿ ಅವರನ್ನು ಸ್ಮರಿಸಲಾಗುತ್ತಿದ ಎಂದು ನರೇಂದ್ರಸ್ವಾಮಿ ಹೇಳಿದರು.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))