ಸಾರಾಂಶ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೈಗಾರಿಕೆಗಳು, ಬಂದರು, ನಗರೀಕರಣ ಇತ್ಯಾದಿ ಕಾರಣಗಳಿಂದಾಗಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹಲವು ರೀತಿಯ ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸಲು ಎಲ್ಲ ತಾಂತ್ರಿಕ ಸಹಾಯ ಒದಗಿಸಲು ಬದ್ಧ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಮತ್ತು ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಹೇಳಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಥಾಪನೆಗೊಂಡು 50 ವರ್ಷಗಳಾದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಇತ್ತೀಚಿನ ಅಧ್ಯಯನದ ಪ್ರಕಾರ ನೀರಿನಲ್ಲೂ ಪ್ಲಾಸ್ಟಿಕ್ ಇರುವುದು ಕಂಡುಬಂದಿದೆ. ಏಕಬಳಕೆ ಪ್ಲಾಸ್ಟಿಕ್‌ನ್ನು ಈಗಾಗಲೇ ನಿಷೇಧಿಸಲಾಗಿದೆ. ಈ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾದರೆ ಜನರು, ವಿವಿಧ ಸಂಸ್ಥೆಗಳ ಸದಸ್ಯರು ಕೈಜೋಡಿಸಬೇಕು. ದ.ಕ.ದಲ್ಲಿ ನೀರು ಪೂರೈಕೆಯಾಗುವ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಿಂದ ಪ್ರತಿ ತಿಂಗಳೂ ನೀರಿನ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ ಎಂದು ನರೇಂದ್ರ ಸ್ವಾಮಿ ತಿಳಿಸಿದರು.ದೀಪಾವಳಿಗೆ ಹಸಿರು ಪಟಾಕಿ ಬಳಸಿ: ಕರಾವಳಿಯಲ್ಲಿ ಗಣೇಶ ಹಬ್ಬದ ಸಂದರ್ಭ ಶೇ.90ರಷ್ಟು ಮಣ್ಣಿನ ಗಣಪತಿ ಮೂರ್ತಿ ಬಳಕೆ ಮಾಡುತ್ತಿರುವುದು ಶ್ಲಾಘನೀಯ. ಇದೇ ರೀತಿ ಮುಂಬರುವ ದೀಪಾವಳಿ ಸಮಯದಲ್ಲೂ ಜನತೆ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಕರೆ ನೀಡಿದರು. ನಿಷೇಧಿತ ಪಟಾಕಿಗಳ ಸಾಗಾಟ ತಡೆಗೆ ಗಡಿ ಪ್ರದೇಶಗಳಲ್ಲಿ ಮಂಡಳಿ ನಿಗಾ ವಹಿಸುತ್ತಿದೆ ಎಂದರು.ದ.ಕ. ತ್ಯಾಜ್ಯ ನಿರ್ವಹಣೆಗೆ ಶ್ಲಾಘನೆ: ಎಲ್ಲ 223 ಗ್ರಾಮ ಪಂಚಾಯಿತಿಗಳ ಒಣತ್ಯಾಜ್ಯ ನಿರ್ವಹಣೆ ಮಾಡಲು 4 ಘನತ್ಯಾಜ್ಯ ಘಟಕಗಳಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ದ.ಕ. ಹೊಂದಿದೆ. ಈ ಘಟಕಗಳಿಂದ ಸುಮಾರು 1.7 ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಅವರು ಶ್ಲಾಘಿಸಿದರು.ಕೊಲ್ಲೂರು ಸ್ನಾನಘಟ್ಟ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನದ ಮೂಲಕ 0.5 ಟನ್ ತ್ಯಾಜ್ಯ ಸಂಗ್ರಹಿಸಲಾಗಿದ್ದರೆ, ಮಲ್ಪೆ ಬೀಚ್‌ನಲ್ಲಿ 2.5 ಟನ್, ಕಾಪು ಬೀಚ್‌ನಲ್ಲಿ 1.8 ಟನ್ ಸಂಗ್ರಹಿಸಲಾಗಿದೆ. ಸ್ವಚ್ಛತಾ ಅಭಿಯಾನ ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.ಇಂದಿರಾ ಗಾಂಧಿ ಆಶಯ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆ ಮಾಡುವ ಮೂಲಕ ದೇಶದ ಭವಿಷ್ಯವು ಮಾಲಿನ್ಯ ಮುಕ್ತವಾಗಿರಬೇಕು ಎಂದು ಬಯಸಿದ್ದರು. ಅವರ ಆಶಯವನ್ನು ರಾಜ್ಯದೆಲ್ಲೆಡೆ ಪಸರಿಸುವ ಕಾರ್ಯ ಮಾಡಲಾಗುತ್ತಿದೆ. ನ.19ರಂದು ಇಂದಿರಾ ಗಾಂಧಿ ಜನ್ಮದಿನದಂದೇ ಈ ಅಮೃತ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ನರೇಂದ್ರ ಸ್ವಾಮಿ ಹೇಳಿದರು.
ಕೊಳಚೆ ನೀರಿಗೆ ಮುಕ್ತಿ ಅಗತ್ಯ:ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮಂಗಳೂರು ನಗರದಲ್ಲಿ ಕೊಳಚೆ ನೀರು ಮಳೆನೀರಿನ ಕಾಲುವೆಗಳಲ್ಲಿ ಹರಿಯುತ್ತಿರುವುದರಿಂದ ಮಾಲಿನ್ಯದ ಪ್ರಮಾಣ ಹೆಚ್ಚಿದೆ. ನಗರದಲ್ಲಿ 10-12 ಲಕ್ಷ ಜನಸಂಖ್ಯೆಯಿದೆ. ಆದರೆ ಇಲ್ಲಿನ ಬಹುತೇಕ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ತೆರೆದ ಬಾವಿಗಳ ಮಾಲಿನ್ಯವನ್ನು ತಪ್ಪಿಸಬೇಕಾದರೆ ಕೊಳಚೆ ನೀರನ್ನು ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡುವ ಅಗತ್ಯವಿದೆ ಎಂದರು.ಪರಿಸರ ರಕ್ಷಕರಿಗೆ ಸನ್ಮಾನ: ಇದೇ ಸಂದರ್ಭ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ದ.ಕ. ಜಿಲ್ಲೆಯ ಜಯಪ್ರಕಾಶ್ ಎಕ್ಕೂರು, ಜೀತ್ ಮಿಲನ್ ರೋಚ್, ನಿತಿನ್ ವಾಸ್, ಉಡುಪಿ ಜಿಲ್ಲೆಯ ಪಂಚವರ್ಣ ಯುವಕ ಮಂಡಲ, ಡಾ.ಎಚ್.ಎನ್. ಉದಯಶಂಕರ್ ಮತ್ತು ರತ್ನಾಕರ್ ಸಾಮಂತ್ ಅವರನ್ನು ಸನ್ಮಾನಿಸಲಾಯಿತು.ಶಾಸಕ ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಸ್. ಲಿಂಗರಾಜು, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಾಲೆಟ್ ಪಿಂಟೊ, ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಂಡಳಿ ಸದಸ್ಯ ಮರಿಸ್ವಾಮಿ ಗೌಡ, ದ.ಕ. ಪರಿಸರ ಅಧಿಕಾರಿ ಲಕ್ಷ್ಮೀಕಾಂತ್, ಮುಖಂಡರಾದ ಪಿಯೂಶ್ ರೊಡ್ರಿಗಸ್, ಅಪ್ಪಿ, ನವಾಝ್, ಭಾಸ್ಕರ ಕೆ. ಮತ್ತಿತರರು ಇದ್ದರು.ಡಿಸಿಎಫ್ ಆಂಟನಿ ಮರಿಯಪ್ಪ ಸ್ವಾಗತಿಸಿದರು. ಉಪ ಪರಿಸರ ಅಧಿಕಾರಿ ಮಹೇಶ್ವರಿ ಇದ್ದರು. ಅರ್.ಜೆ.ಪ್ರಸನ್ನ ನಿರೂಪಿಸಿದರು.ಅರ್ಬನ್ ಇಕೋ ಪಾರ್ಕ್‌ಗೆ ಬಾಕಿ 13 ಕೋಟಿ ಮಂಜೂರು: ಭಂಡಾರಿ ಮನವಿಪಿಲಿಕುಳ ನಿಸರ್ಗಧಾಮದಲ್ಲಿ ಅರ್ಬನ್ ಇಕೋ ಪಾರ್ಕ್ ಯೋಜನೆ ಪೂರ್ಣಗೊಳಿಸಲು ಬಾಕಿ ಇರುವ 13 ಕೋಟಿ ರು.ಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಒತ್ತಾಯಿಸಿದರು.2014ರಲ್ಲಿ ಅರ್ಬನ್ ಇಕೋ ಪಾರ್ಕ್ ಸ್ಥಾಪಿಸಲು ಒಟ್ಟು 18 ಕೋಟಿ ರು. ಮಂಜೂರಾಗಿದ್ದು, ಅದರಲ್ಲಿ ಆರಂಭದಲ್ಲಿ 5 ಕೋಟಿ ರು. ಬಿಡುಗಡೆಯಾಗಿತ್ತು. ಬಾಕಿ ಉಳಿದ 13 ಕೋಟಿ ರು. ಬಿಡುಗಡೆ ಮಾಡಿದರೆ ಯೋಜನೆ ಮುಂದುವರಿಸಲು ಅನುಕೂಲವಾಗಲಿದೆ ಎಂದರು. ಇದಲ್ಲದೆ, ಜಿಲ್ಲೆಯ ಪರಿಸರ ಸಂರಕ್ಷಣೆಗಾಗಿ ಶ್ರೇಷ್ಠತಾ ಕೇಂದ್ರವನ್ನು ಮಂಜೂರು ಮಾಡುವಂತೆಯೂ ಅವರು ನರೇಂದ್ರ ಸ್ವಾಮಿ ಅವರಿಗೆ ಮನವಿ ಮಾಡಿದರು.ರೀಲ್ಸ್ ಮಾಡಿ ಬಹುಮಾನ ಗೆಲ್ಲಿ!
ಕೆಎಸ್‌ಪಿಸಿಬಿ ಸುವರ್ಣ ಮಹೋತ್ಸವದ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತು 60 ಸೆಕೆಂಡುಗಳ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಭಾಗವಹಿಸುವವರು ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಬೇಕು ಮತ್ತು ಅದನ್ನು ಕೆಎಸ್‌ಪಿಸಿಬಿ ಸಾಮಾಜಿಕ ಮಾಧ್ಯಮ ಘಟಕಕ್ಕೆ ಟ್ಯಾಗ್ ಮಾಡಬೇಕು. ವಿಜೇತರಿಗೆ ಕ್ರಮವಾಗಿ 50 ಸಾವಿರ ರು., 25 ಸಾವಿರ ರು. ಮತ್ತು 10 ಸಾವಿರ ರು. ನೀಡಲಾಗುತ್ತದೆ.