ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ದೇಶದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. 70ರ ಗಡಿ ದಾಟಿದ್ದರೂ, ಸಬಲೀಕರಣ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ನಾಗೇಶ್ ಶಿಕ್ಷಣ ಸಂಸ್ಥೆಯ ಸಿಇಒ ಡಾ. ಭಾರತಿ ನಾಗೇಶ್ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀ ಆದಿಚುಂಚನಗಿರಿ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದಲಾಗದ ಪರಿಸ್ಥಿತಿ: ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ ಶೇ.೯ರಷ್ಟಿದ್ದ ಮಹಿಳಾ ಸಾಕ್ಷರತೆ ಇಂದು ಶೇ.೭೦ಕ್ಕೆ ಏರಿದೆ. ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರೂ ಲಕ್ಷಾಂತರ ಹೆಣ್ಣುಮಕ್ಕಳಿಗೆ ಇಂದಿಗೂ ಶಾಲೆಯ ಬಾಗಿಲು ತೆರೆದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ, ಭ್ರೂಣ ಹತ್ಯೆ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ಸಾಗಾಟದಂತಹ ಕೃತ್ಯಗಳು ಅವಿಶ್ರಾಂತವಾಗಿ ನಡೆಯುತ್ತಲೇ ಇವೆ. ಕೆಲಸ ಮಾಡುವ ಸ್ಥಳಗಳಲ್ಲಿ ತಾರತಮ್ಯ ಮತ್ತು ಅಭದ್ರತೆ ಮಹಿಳೆಯನ್ನು ಕಾಡುತ್ತಿದೆ. ಮಧ್ಯರಾತ್ರಿಯಲ್ಲಿ ಮಹಿಳೆ ನಿರ್ಭೀತಿಯಿಂದ ಓಡಾಡಬೇಕೆಂಬ ಗಾಂಧೀಜಿಯವರ ಕನಸು ಇಂದಿಗೂ ನನಸಾಗಿಲ್ಲ ಎಂದು ವಿಷಾದಿಸಿದರು.ಜಾಲತಾಣಗಳ ಅತಿಯಾದ ಬಳಕೆ:
ಇಂದಿನ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಕುಗ್ಗುತ್ತಿದೆ. ಜಂಕ್ ಫುಡ್ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹ ಇದಕ್ಕೆ ಕಾರಣವಿರಬಹುದು. ಮುಂದಿನ ೨೦ ವರ್ಷಗಳಲ್ಲಿ ಮಾನವ ಶಕ್ತಿಯ ಬದಲು ರೋಬೋಟ್‌ಗಳ ಬಳಕೆ ಹೆಚ್ಚಾಗುವ ಭೀತಿ ಇದೆ. ಜಾಲತಾಣಗಳಲ್ಲಿ ಅಶ್ಲೀಲತೆ ಮತ್ತು ದೌರ್ಜನ್ಯದ ವಿಚಾರಗಳ ಪ್ರಸಾರಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಹೆಣ್ಣುಮಕ್ಕಳು ನೈತಿಕತೆ ಮತ್ತು ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳದೆ ಛಲದಿಂದ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಾಧಕಿಯರು ಪ್ರೇರಣೆಯಾಗಲಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಕೆ. ಮಂಜುನಾಥ್ ಮಾತನಾಡಿ, ಮಹಿಳಾ ಶಕ್ತಿಯೇ ಸಮಾಜದ ಶಕ್ತಿಯಾಗಿದೆ. ಸಾಲುಮರದ ತಿಮ್ಮಕ್ಕ, ಸುಧಾ ಮೂರ್ತಿಯವರಂತಹ ಸಾಧಕಿಯರನ್ನು ಮಾದರಿಯಾಗಿರಿಸಿಕೊಂಡು ವಿದ್ಯಾರ್ಥಿನಿಯರು ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ವೇದಿಕೆಯಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಪ್ರವೀಣ್ ಕುಮಾರ್, ಡಾ. ನಿರೂಪಮ, ಗ್ರಂಥಪಾಲಕಿ ಕವಿತಾ ಎಸ್.ಎಂ., ಪ್ರಜ್ವಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.