ಪದವಿಗಳು ಮೊದಲ ಕೆಲಸ ಪಡೆಯಲು ಸಹಾಯ ಮಾಡಬಹುದು. ಆದರೆ ದೀರ್ಘಕಾಲದ ಯಶಸ್ಸು ನಮ್ಮೊಳಗಿನ ವ್ಯಕ್ತಿತ್ವ, ಮೌಲ್ಯ ಮತ್ತು ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಕೇವಲ ಹಣ ಸಂಪಾದಿಸುವುದು ಅಥವಾ ಉದ್ಯೋಗ ಪಡೆಯುವುದು ಶಿಕ್ಷಣದ ನಿಜವಾದ ಉದ್ದೇಶವಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹೆಚ್ಚುತ್ತಿರುವ ಕಾರಣ ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಅಂತಹ ಸಾಂಪ್ರದಾಯಿಕ ಎಂಜಿನಿಯರಿಂಗ್ ವಿಭಾಗಗಳು ಭರ್ಜರಿಯಾಗಿ ಮರುಜೀವ ಪಡೆಯಲಿವೆ ಎಂದು ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ಕುಲಪತಿ ಡಾ.ಎ.ಎನ್. ಸಂತೋಷ್ ಕುಮಾರ್ ತಿಳಿಸಿದರು.ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ವಿದ್ಯುತ್ 2026- ವಾರ್ಷಿಕ ಸಾಂಸ್ಕೃತಿಕ ಹಬ್ಬವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ದಶಕದಲ್ಲಿ ಕೇವಲ ಐಟಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಈಗ ಕೋರ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪರಿಣಿತರ ಕೊರತೆ ಉಂಟಾಗಿದೆ ಎಂದರು.
ಎಐ, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ಕ್ಷೇತ್ರಗಳು ಭವಿಷ್ಯದಲ್ಲಿ ದೊಡ್ಡ ಅವಕಾಶಗಳನ್ನು ಸೃಷ್ಟಿಸಲಿವೆ. ಎಐ ಬಂದ ತಕ್ಷಣ ಉದ್ಯೋಗಗಳು ನಾಶವಾಗುವುದಿಲ್ಲ ಎಂದರು.ಪದವಿಗಳು ಮೊದಲ ಕೆಲಸ ಪಡೆಯಲು ಸಹಾಯ ಮಾಡಬಹುದು. ಆದರೆ ದೀರ್ಘಕಾಲದ ಯಶಸ್ಸು ನಮ್ಮೊಳಗಿನ ವ್ಯಕ್ತಿತ್ವ, ಮೌಲ್ಯ ಮತ್ತು ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಕೇವಲ ಹಣ ಸಂಪಾದಿಸುವುದು ಅಥವಾ ಉದ್ಯೋಗ ಪಡೆಯುವುದು ಶಿಕ್ಷಣದ ನಿಜವಾದ ಉದ್ದೇಶವಲ್ಲ. ಮಾನವ ನಡವಳಿಕೆ ತಿದ್ದಿ ಉತ್ತಮ ವ್ಯಕ್ತಿತ್ವ ರೂಪಿಸುವುದೇ ಶಿಕ್ಷಣದ ಗುರಿ ಎಂದರು.
ಸಮಾಜವು ಬಾಲ್ಯದಿಂದಲೇ ಅಂಕಗಳು ಮತ್ತು ಸಂಬಳವೇ ಯಶಸ್ಸಿನ ಮಾಪನ ಎಂದು ನಂಬಿಸುತ್ತದೆ. ಆದರೆ, ಆರ್ಥಿಕ ಬೆಳವಣಿಗೆಯ ಜೊತೆಗೆ ಸಮಾಜವನ್ನು ಅರ್ಥಮಾಡಿಕೊಳ್ಳುವ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಗುಣಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಸೋಷಿಯಲ್ ಮೀಡಿಯಾ ಮಾಹಿತಿಗಳನ್ನು ನೋಡಿ ತಕ್ಷಣ ಯಾವುದೇ ನಿರ್ಧಾರಕ್ಕೆ ಬರಬೇಡಿ. ವಿಮರ್ಶಾತ್ಮಕವಾಗಿ ಯೋಚಿಸಿ ಪೂರ್ಣ ಮಾಹಿತಿ ಪಡೆದ ನಂತರವೇ ಅಭಿಪ್ರಾಯ ರೂಪಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.ಇಂದಿನ ಕಂಪನಿಗಳು ತಾಂತ್ರಿಕ ಜ್ಞಾನಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ನಡವಳಿಕೆ ಮತ್ತು ಮನೋಭಾವ ಗಮನಿಸುತ್ತವೆ. ತಾಂತ್ರಿಕ ತರಬೇತಿಯನ್ನು ಕೆಲವೇ ತಿಂಗಳುಗಳಲ್ಲಿ ನೀಡಬಹುದು. ಆದರೆ, ವ್ಯಕ್ತಿಯ ಗುಣ ಮತ್ತು ನಡವಳಿಕೆಯನ್ನು ಬದಲಾಯಿಸುವುದು ಕಷ್ಟ ಎಂದರು.
ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಸದಾಶಿವೇಗೌಡ ಮಾತನಾಡಿ, ಸಂಸ್ಕೃತಿಯು ಸಮಾಜದ ಆತ್ಮವಾಗಿದ್ದು, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್ ಮೊದಲಾದವರು ಇದ್ದರು.