ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ಅಧಿಕಾರ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡುತ್ತಿದೆ. ಆದರೆ ಅವರ ಸಾಧನೆ ಏನು ಎಂಬುದನ್ನು ನಾವು ಈಗಾಗಲೇ ರಾಜ್ಯಾದ್ಯಂತ ಜನರ ಎದುರು ಜನಾಕ್ರೋಶ ಯಾತ್ರೆಯ ಮೂಲಕ ತೋರಿಸಿದ್ದೇವೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಮುಖಂಡರೆಲ್ಲ ಸೇರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯ ಕುರಿತು ಬಿಜೆಪಿ ಪ್ರಕಟಿಸಿದ ಕರ್ನಾಟಕ ಲೂಟಿ-ಕಾಂಗ್ರೆಸ್ ಡ್ಯೂಟಿ ಎಂಬ ಪೋಸ್ಟರ್ ಬಿಡುಗಡೆಗೊಳಲಾಯಿತು.
ಈ ವೇಳೆ ಮಾತನಾಡಿದ ಅವರು, ಇದು ವಸೂಲಿ ಸರ್ಕಾರ, ಬೆಲೆ ಏರಿಕೆಯನ್ನು ಗ್ಯಾರಂಟಿಯಾಗಿ ಕೊಟ್ಟಿದೆ. ಜಾತಿ, ಧರ್ಮಗಳ ಮಧ್ಯೆ ಒಡೆದಾಳುವ ನೀತಿ ಇರುವ ಸಮಾಜ ವಿರೋಧಿ ಸರ್ಕಾರ ಇದು. ಭ್ರಷ್ಟಾಚಾರದಲ್ಲಿ ದೇಶದಲ್ಲೇ ಮೊದಲ ಸ್ಥಾನ ಇರುವ ಸರ್ಕಾರ. ಇದು ಪಕ್ಕಾ ರೈತ ವಿರೋಧಿ ಸರ್ಕಾರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಹಣ ಲೂಟಿ ಮಾಡುವ ಕೆಲಸ ಮಾಡಿದ್ದರು. ಇದಕ್ಕೆ ಉದಾಹರಣೆ ಎಂದರೆ ವಾಲ್ಮಿಕಿ ನಿಗಮದ ಹಗರಣ, ಸಿದ್ರಾಮಯ್ಯನವರು ಸ್ವತಃ ಮೂಡಾ ಹಗರಣದಲ್ಲಿ ಸಿಕ್ಕಿಹಾಕಿಕೊಂಡವರು ಎಂದು ವಾಗ್ದಾಳಿ ನಡೆಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಇಟ್ಟಂಗಿಹಾಳದಲ್ಲಿ 70 ಎಕರೆ ಜಾಗವನ್ನು ಫುಡ್ ಪಾರ್ಕ್‌ಗೆ ನೀಡಿದೆ. ಇದುವರೆಗೂ ಅಲ್ಲಿ ಏನು ಮಾಡಿಲ್ಲ. ವಿಜಯಪುರದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದರೂ ಅವರನ್ನು ಕರೆದು ಸಭೆ ಮಾಡಿದ್ದಾರಾ?. ಕುಡಿಯುವ ನೀರು ಪೂರೈಕೆ ಗುತ್ತಿಗೆದಾರರಿಗೆ ಕಳೆದ ಎರಡು ವರ್ಷಗಳಿಂದ ಹಣ ಕೊಟ್ಟಿಲ್ಲ ಎಂದು ದೂರಿದರು.
ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಎರಡು ವರ್ಷ ಪೂರೈಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ ಆಯೋಜನೆ ಮಾಡುವಲ್ಲಿ ಸಕ್ರೀಯವಾಗಿದೆ. ಸಾಧನಾ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಎಂಟು ಪ್ರಶ್ನೆಗಳನ್ನು ಕೇಳಿದರು.ಖಾರವಾದ ಪ್ರಶ್ನೆಗಳ ಮೂಲಕ ಉಮೇಶ ಕಾರಜೋಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರ ಯಾವ ಸಾಧನೆಯನ್ನೂ ಮಾಡಿಲ್ಲ, ಆದರೆ ಕೋಟಿ ಕೋಟಿ ಖರ್ಚು ಮಾಡಿ ಸಾಧನಾ ಸಮಾವೇಶ ಮಾಡಿ ತನ್ನ ಬೆನ್ನು ಚಪ್ಪರಿಸಿಕೊಳ್ಳುತ್ತಿದೆ. ಮೊದಲು ತನ್ನ ಸಾಧನೆ ಏನು ಎಂಬುದನ್ನು ಸರ್ಕಾರ ಬಹಿರಂಗ ಪಡಿಸಲಿ ಎಂದು ಕಾರಜೋಳ ಮತ್ತೊಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಈರಣ್ಣ ರಾವೂರ, ವಿಜಯ ಜೋಶಿ ಇತರರು ಉಪಸ್ಥಿತರಿದ್ದರು.ಬಾಕ್ಸ್‌ರಾಜ್ಯ ಸರ್ಕಾರಕ್ಕೆ ಪ್ರಶ್ನೆಗಳು-ಸಿಎಂ ಹಾಗೂ ಡಿಸಿಎಂ ಸಮನ್ವಯ ಸಾಧಿಸದೇ ಇರುವುದು ಸಾಧನೆಯೇ?.-ದುಬಾರಿ ಜೀವನದ ಗ್ಯಾರಂಟಿ ನೀಡಿರುವುದು ಸಾಧನೆಯೇ? -ಹೆಮ್ಮೆಯ ಸೈನಿಕರು ಹಾಗೂ ದೇಶದ ಬಗ್ಗೆ ಕಾಂಗ್ರೆಸ್ ನಾಯಕರು ಅವಮಾನಕಾರಿ ಹೇಳಿಕೆ ನೀಡಿರುವುದು ಸಾಧನೆಯೇ? -ವಿವಿಧ ಹಗರಣಗಳನ್ನು ನಡೆಸಿರುವುದು ಸಾಧನೆಯೇ? -ಮಹಿಳೆಯರ ಅಸುರಕ್ಷತೆ ಹಾಗೂ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದು ಸಾಧನೆಯೇ? -ತಪ್ಪು ಜಾತಿ ಲೆಕ್ಕ ಹೇಳಿ ಎಸ್.ಸಿ.-ಎಸ್‌ಟಿ ಸಮುದಾಯಗಳಿಗೆ ಮೋಸ ಮಾಡಿದ್ದು ಸಾಧನೆಯೇ? -ಕರ್ನಾಟಕವನ್ನು ಅತೀ ಹೆಚ್ಚು ಸಾಲಗಾರ ರಾಜ್ಯವನ್ನಾಗಿ ರೂಪಿಸಿದ್ದು ಸಾಧನೆಯೇ? -ಗ್ರೇಟರ್ ಬೆಂಗಳೂರು ಯೋಜನೆಯನ್ನು ಗಟಾರ್ ಬೆಂಗಳೂರು ಆಗಿಸಿದ್ದು ಸಾಧನೆಯೇ?