ಗುರು ತೋರಿದ ದಾರಿಯಲ್ಲಿ ಜೀವನದ ತೇರು ಎಳೆಯಿರಿ

| Published : May 20 2025, 01:17 AM IST

ಸಾರಾಂಶ

ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವು ಯುಗಯೋಗಿ, ಜಗದ್ಗುರು ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸಂಸ್ಮರಣಾರ್ಥ ನಡೆಸಿಕೊಂಡು ಬರುತ್ತಿರುವ ಗುರು ತೋರಿದ ದಾರಿ ತಿಂಗಳ ಮಾಮನ ತೇರಿನ 128ನೇ ಹುಣ್ಣಿಮೆಯ ಕಾರ್ಯಕ್ರಮದ ಅಂಗವಾಗಿ 7 ದಿನಗಳ ಕಾಲ ನಡೆದ ಆಧ್ಯಾತ್ಮಿಕ ಚಿಂತನ ಶಿಬಿರದ ಸಮಾರೋಪ ಸಮಾರಂಭವು ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಜರುಗಿತು. ಗುರು ತೋರುವ ಸನ್ಮಾರ್ಗದಲ್ಲಿ ನಡೆದು, ನಮ್ಮಲ್ಲಿ ಮೂಡುವ ಜ್ಞಾನವನ್ನು ಪಸರಿಸುವ ಕೆಲಸ ಮಾಡಿಕೊಂಡು ಹೋದಾಗ ಮಾತ್ರ ಈ ಬದುಕಿಗೆ ಅರ್ಥ ಸಿಗಲಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವು ಯುಗಯೋಗಿ, ಜಗದ್ಗುರು ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸಂಸ್ಮರಣಾರ್ಥ ನಡೆಸಿಕೊಂಡು ಬರುತ್ತಿರುವ ಗುರು ತೋರಿದ ದಾರಿ ತಿಂಗಳ ಮಾಮನ ತೇರಿನ 128ನೇ ಹುಣ್ಣಿಮೆಯ ಕಾರ್ಯಕ್ರಮದ ಅಂಗವಾಗಿ 7 ದಿನಗಳ ಕಾಲ ನಡೆದ ಆಧ್ಯಾತ್ಮಿಕ ಚಿಂತನ ಶಿಬಿರದ ಸಮಾರೋಪ ಸಮಾರಂಭವು ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಜರುಗಿತು.

ಮಹಾರಾಷ್ಟ್ರದ ಸಂಸ್ಕೃತ ವಿದ್ಯಾ ಸಾಹಿತ್ಯ ಪ್ರವೀಣರಾದ ವಿದ್ವಾನ್ ಶ್ರೀ ರಾಮಚಂದ್ರ ಶಾಸ್ತ್ರಿಗಳು ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಗುರು ತೋರಿದ ದಾರಿಯಲ್ಲಿ ನಮ್ಮ ಜೀವನವೆಂಬ ತೇರನ್ನು ನಡೆಸಿದರೆ ಯಾವುದೇ ವಿಘ್ನಗಳು ಎದುರಾಗಲಾರವು ಎಂಬುದನ್ನು ಯಾರು ಮರೆಯಬಾರದು, ಗುರುವಿನ ಸತ್ಸಂಗ ನಮ್ಮನ್ನು ಪರಮಾತ್ಮನೆಡೆಗೆ ಕರೆದೊಯ್ಯುತ್ತದೆ ಎಂದರು. ಗುರುವಿಗೆ, ಗುರುತ್ವಕ್ಕೆ ಇರುವ ಶಕ್ತಿಯನ್ನು ಯಾರು ಅಲಕ್ಷ್ಯ ಮಾಡಬಾರದು. ಮನಸ್ಸಿನಲ್ಲಿ ಗುರುವಿನ ಬಗೆಗೆ ಪೂಜ್ಯ ಭಾವನೆ ಮೂಡಿಸಿಕೊಂಡು, ಗುರು ತೋರುವ ಸನ್ಮಾರ್ಗದಲ್ಲಿ ನಡೆದು, ನಮ್ಮಲ್ಲಿ ಮೂಡುವ ಜ್ಞಾನವನ್ನು ಪಸರಿಸುವ ಕೆಲಸ ಮಾಡಿಕೊಂಡು ಹೋದಾಗ ಮಾತ್ರ ಈ ಬದುಕಿಗೆ ಅರ್ಥ ಸಿಗಲಿದೆ ಎಂದರು.

ಮನುಷ್ಯ ಯಾವುದರಿಂದ ತನ್ನ ಧಾರಣೆಯಾಗುತ್ತದೆ ಎಂಬುದನ್ನು ಅರಿಯಬೇಕು. ಸತ್ಯ, ದಾನ, ದಯಾ, ತಪಸ್ಸು ನಮ್ಮೊಳಗೆ ರೂಢಿಸಿಕೊಂಡು ಬಂದರೆ ಆತನಿಗೆ ಮೋಕ್ಷ ದೊರೆಯಲಿದೆ. ಆತ ಸಮಾಜ ಹಾಗೂ ಭಗವಂತನಿಗೆ ಹತ್ತಿರವಾಗಿ ಬದುಕಿ ಸಮಾಜದಲ್ಲಿ ಶಾಶ್ವತನಾಗಿ ಉಳಿಯುತ್ತಾನೆ ಎಂದರು.

ಬಾಗಲಕೋಟೆಯ ಮಹಲಿಂಗಪುರದ ಶ್ರೀ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಪೂಜ್ಯ ಸದ್ಗುರು ಸಹಜಾನಂದ ಸ್ವಾಮಿಗಳು, ಶ್ರೀಮನ್ನಿಜಗುಣ ಶಿವಯೋಗಿಗಳಿಂದ ವಿರಚಿಸಲ್ಪಟ್ಟ ಕೈವಲ್ಯ ಪದ್ಧತಿ ನೀತಿ ಕ್ರಿಯಾಚರ್ಯ ಸ್ಥಲ ವಿಷಯವಾಗಿ ಉಪನ್ಯಾಸ ನೀಡಿ, ಧರ್ಮ ಮತ್ತು ಅಧ್ಯಾತ್ಮ ಸಂಸ್ಕಾರದ ಬಲದಿಂದ ಮಾನವ ಜನ್ಮದ ಸಫಲತೆ ಪಡೆದುಕೊಳ್ಳಬೇಕು. ಮನುಷ್ಯ ತನ್ನ ಜೊತೆಗೆ ಬರದೇ ಇರುವ ಕ್ಷಣಿಕ ಸುಖಗಳ ಹಿಂದೆ ಬೆನ್ನುಹತ್ತಿದ್ದಾನೆ. ಶಾಶ್ವತ ಸುಖ ನೀಡುವುದು ಸತ್ಸಂಗ ಮಾತ್ರ. ಉಳಿದಿದೆಲ್ಲವೂ ತೋರಿಕೆಗೆ ಮಾತ್ರ ಸುಖ ನೀಡುತ್ತವೆ. ಬಹುಜನ್ಮದ ಪ್ರತಿಫಲವಾಗಿ ಸತ್ಸಂಗ ಮತ್ತು ವಿವೇಕ ಸಿಗುತ್ತದೆ ಎಂದರು.

ಗುರುವಿಗೆ, ಗುರುತ್ವಕ್ಕೆ ಇರುವ ಶಕ್ತಿಯನ್ನು ಯಾರು ಅಲಕ್ಷ್ಯ ಮಾಡಬಾರದು. ಮನಸ್ಸಿನಲ್ಲಿ ಗುರುವಿನ ಬಗೆಗೆ ಪೂಜ್ಯ ಭಾವನೆ ಮೂಡಿಸಿಕೊಂಡು, ಗುರು ತೋರುವ ಸನ್ಮಾರ್ಗದಲ್ಲಿ ನಡೆದು, ನಮ್ಮಲ್ಲಿ ಮೂಡುವ ಜ್ಞಾನವನ್ನು ಪಸರಿಸುವ ಕೆಲಸ ಮಾಡಿಕೊಂಡು ಹೋದಾಗ ಮಾತ್ರ ಈ ಬದುಕಿಗೆ ಅರ್ಥ ಸಿಗಲಿದೆ ಎಂದರು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಜ್ಞಾನದ ಬೆಳಕು ಹಚ್ಚುವ ಶಕ್ತಿ ಗುರುಗಳಿಗೆ ಮಾತ್ರವಿದ್ದು, ಜೀವನ ಸಾರ್ಥಕವಾಗಬೇಕೆಂದರೆ ಜೀವಿತದ ಕೊನೆಯವರೆಗೆ ಗುರುಗಳನ್ನು ಪೂಜಿಸಬೇಕು. ಗುರುವಾಗಬೇಕೆಂದರೆ ಭಗವಂತನ ಸಾಕ್ಷಾತ್ ಗುಣಗಳಿರಬೇಕು. ಅಂದಾಗ ಮಾತ್ರ ಗುರು ಎಂಬ ಪಟ್ಟ ಧರಿಸಲು ಸಾಧ್ಯವೆಂದರು. ಯಾವತ್ತಿಗೂ ಜ್ಞಾನ ಮಾರ್ಗ ತೋರುವವನು ಗುರುವಾಗುತ್ತಾನೆ. ಶ್ರೀ ಗುರುವಿನ ಕಾರುಣ್ಯ ಅರ್ಥೈಸಿಕೊಳ್ಳುವುದು ಸುಲಭವಲ್ಲ. ಆತ ಮನುಜ ಜನದ ಪರಂ ಜ್ಯೋತಿ ಆಗಿರುತ್ತಾನೆ. ದೇವರ ಇರುವಿಕೆಯನ್ನು ತಿಳಿಸುವವನೇ ನಿಜವಾದ ಗುರು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಏಳು ದಿನಗಳ ಕಾಲ ನಡೆದ ಉಪನ್ಯಾಸದ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ ,ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ತುಳಸಿಗೆರೆ ಮಠದ ಶ್ರೀ ರಮಾನಂದ ಸ್ವಾಮೀಜಿ, ಯೋಗಗುರು ರನ್ನ ಬೆಳಗಲಿಯ ಶ್ರೀ ಸದಾಶಿವ ಸ್ವಾಮೀಜಿ, ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ ಮದನಗೌಡ, ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್‌. ಬೊಮ್ಮೇಗೌಡ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕ ಮಂಜುನಾಥ್ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು. ಭಾಗ್ಯಲಕ್ಷ್ಮೀ ಪ್ರಾರ್ಥಿಸಿದರು. ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್ ಸ್ವಾಗತಿಸಿದರು, ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ದರ್ಶನ್ ವಂದಿಸಿದರು.