ಖೋಟಾ ನೋಟು ಚಲಾವಣೆ ಮಾಡಿದ ಆರೋಪದಲ್ಲಿ ಪೊಲೀಸರು ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಹರಪನಹಳ್ಳಿ: ಖೋಟಾ ನೋಟು ಚಲಾವಣೆ ಮಾಡಿದ ಆರೋಪದಲ್ಲಿ ಪೊಲೀಸರು ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕಾನೂನು ಸಂಘರ್ಷಕ್ಕೊಳಗಾದ ಒಬ್ಬ ಬಾಲಕನನ್ನು ಬಳ್ಳಾರಿಯ ಬಾಲ ನ್ಯಾಯ ಮಂಡಳಿಗೆ ಕಳಿಸಿದ ಘಟನೆ ತಾಲೂಕಿನ ಅರಸೀಕೆರೆಯಲ್ಲಿ ನಡೆದಿದೆ.

ಅರಸೀಕೆರೆ ಗ್ರಾಮದ ಕೆ.ಮಹಮ್ಮದ್‌ ಶರೀಫ (18), ನರೇಂದ್ರ ಪ್ರಸಾದ್ (19), ಉಚ್ಚಂಗಿದುರ್ಗದ ಮೊಹಮ್ಮದ್‌ ಅಖಿಲ್‌ (18), ಕೂಡ್ಲಿಗಿಯ ಬಿ.ಬಾಬು (36), ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಟಿ.ಕುಮಾರಸ್ವಾಮಿ (43) ಬಂಧಿತರು. ಇದೇ ಪ್ರಕರಣದಲ್ಲಿ ಇರುವ ಕಾನೂನು ಸಂಘರ್ಷಕ್ಕೊಳಗಾದ ಒಬ್ಬ ಬಾಲಕನನ್ನು ಬಳ್ಳಾರಿಯ ಬಾಲ ನ್ಯಾಯ ಮಂಡಳಿಗೆ ಕಳಿಸಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರಸೀಕೆರೆ ಗ್ರಾಮದಲ್ಲಿ ನಡೆಯುತ್ತಿರುವ ದಂಡಿನ ದುರುಗಮ್ಮದೇವಿ ಜಾತ್ರೆಯಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ನ ವೀರಭದ್ರಪ್ಪ ಆಟಿಕೆಗಳನ್ನು ನಡೆಸುವ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ₹500 ಮುಖಬೆಲೆಯ ಎರಡು ಖೋಟಾ ನೋಟುಗಳನ್ನು ಚಲಾವಣೆ ಮಾಡಿದ ಕುರಿತು ದೂರು ನೀಡಿದ ಮೇರೆಗೆ ಅರಸೀಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಐವರು ಆರೋಪಿತರನ್ನು ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದುಕೊಂಡು ಆರೋಪಿತರಿಂದ ₹500 ಮುಖಬೆಲೆಯ 80 ಖೋಟಾ ನೋಟುಗಳನ್ನು, ಪ್ರಕರಣದಲ್ಲಿ ಭಾಗೀಯಾದ ಗೂಡ್ಸ್ ವಾಹನ, ಎರಡು ಮೋಟಾರ್‌ ಸೈಕಲ್, 5 ಮೊಬೈಲ್‌ ಸೇರಿದಂತೆ ಅಂದಾಜು ₹4.50 ಲಕ್ಷ ಬೆಲೆಬಾಳುವ ವಸ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕರಾದ ಮಹಾಂತೇಶ ಸಜ್ಜನ, ವಿಕಾಸ ಲಮಾಣಿ, ಪಿಎಸ್‌ಐಗಳಾದ ವಿಜಯಕೃಷ್ಣ, ಕಿರಣಕುಮಾರ, ಶಂಭುಲಿಂಗ ಹಿರೇಮಠ, ಸಿಬ್ಬಂದಿ ಆನಂದ, ರವಿದಾದಾಪುರ, ಮಾಲತೇಶ, ಸಿದ್ದಿ ಮುಬಾರಕ್, ಯರಿಸ್ವಾಮಿ, ವಸಂತಕುಮಾರ, ಯು.ದಾದಾಪೀರ, ಹಸನಸಾಹೇಬ್, ಕೆ.ಗುರುರಾಜ, ಹರೀಶ ದೇವರಟ್ಟಿ, ಮತ್ತಿಹಳ್ಳಿ ಕೊಟ್ರೇಶ, ಗುರ್ಯಾನಾಯ್ಕ, ರವಿ ನಾಯ್ಕ, ಅಜ್ಜಪ್ಪ, ಕರಿಬಸಪ್ಪ, ಸಿಡಿಆರ್‌ ವಿಭಾಗದ ಕುಮಾರನಾಯ್ಕ, ಚಾಲಕ ನಾಗರಾಜ ನಾಯ್ಕ ಪಾಲ್ಗೊಂಡಿದ್ದರು.