ಶಾಸಕ ಯಶ್ಪಾಲ್ ಎ. ಸುವರ್ಣ ನೇತೃತ್ವದಲ್ಲಿ ನಗರ ಯುವ ಮೋರ್ಚಾ ಮತ್ತು ನಗರ ಮಹಿಳಾ ಮೋರ್ಚಾ ಸಹಯೋಗದಲ್ಲಿ ಬುಧವಾರ ಅಟಲ್ ಟ್ರೋಫಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟ ನೆರವೇರಿತು.
ಉಡುಪಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ ಶಾಸಕ ಯಶ್ಪಾಲ್ ಎ. ಸುವರ್ಣ ನೇತೃತ್ವದಲ್ಲಿ ನಗರ ಯುವ ಮೋರ್ಚಾ ಮತ್ತು ನಗರ ಮಹಿಳಾ ಮೋರ್ಚಾ ಸಹಯೋಗದಲ್ಲಿ ಬುಧವಾರ ನಡೆದ ಅಟಲ್ ಟ್ರೋಫಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಾರತ ಕಂಡ ಶ್ರೇಷ್ಠ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ, ಅವರು ಅಂದು ಬಿತ್ತಿದ ರಾಷ್ಟ್ರ ಭಕ್ತಿಯ ಬೀಜದಿಂದಾಗಿಯೇ ಇಂದು ಇಡೀ ವಿಶ್ವದಲ್ಲೇ ಬಿಜೆಪಿ ನಂ. 1 ಪಕ್ಷವಾಗಿ ಹೊರಹೊಮ್ಮಿದೆ ಎಂದರು. ಪ್ರಸ್ತುತ ಅಟಲ್ ಅವರ ಶಿಷ್ಯ ಪ್ರಧಾನಿ ನರೇಂದ್ರ ಮೋದಿ ಅವರು ವಾಜಪಯಿ ಅವರ ಕನಸನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ಯಪಡಿಸಿದರು.ರಾಜ್ಯ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಅಟಲ್ ಅವರ ಉದಾತ್ತ ಚಿಂತನೆಯಿಂದ ಇಂದು ಗ್ರಾಮೀಣ ಪ್ರದೇಶದ ಜನ ಶಿಕ್ಷಿತರಾಗಿದ್ದಾರೆ ಸುಸಂಸ್ಕೃತರಾಗಿದ್ದಾರೆ. ದೇಶ ವಿಕಸಿತವಾಗುತ್ತಿದೆ ಎಂದರೆ ಅದಕ್ಕೆ ಕಾರಣ ಅಟಲ್ ಬಿಹಾರಿ ವಾಜಪೇಯಿ ಎಂದರು.ಪ್ರಾಸ್ತವಿಕವಾಗಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ, ಕೋವಿಡ್ ಗೂ ಮೊದಲು ನಗರ ಬಿಜೆಪಿಯಿಂದ ವಾಲಿಬಾಲ್ ಪಂದ್ಯಾಟ ನಡೆಸಲಾಗಿತ್ತು. ಆ ಬಳಿಕ ಮೊದಲ ಬಾರಿಗೆ ಈ ವರ್ಷದ ಅಟಲ್ ಶತಾಬ್ದಿಯಂದು ಆರಂಭಿಸಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಸದೃಢ ಮಾಡುವ ಕಾರ್ಯ ಮಾಡಲಿದ್ದೇವೆ. ಸ್ಥಳೀಯ ಮಟ್ಟದ ಚುನಾವಣೆಗಳು ಮುಂದಿರುವುದರಿಂದ ಇಂತಹ ಚಟುವಟಿಕೆಗಳು ಸಂಘಟನೆಗೆ ಸಹಕಾರಿಯಾಗುತ್ತದೆ ಎಂದರು.ಶಾಸಕರಾದ ವಿ. ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಮುಖರಾದ ಗಿರೀಶ್ ಎಂ ಅಂಚನ್, ಉದಯಕುಮಾರ್ ಶೇಟ್ಟಿ, ಮಟ್ಟಾರುರತ್ನಾಕರ ಹೆಗ್ಡೆ, ವಿಜಯ್ ಕೊಡವೂರು ಮುಂತಾದವರಿದ್ದರು.