ಸಾರಾಂಶ
ಭಟ್ಕಳ: ತಾಲೂಕಿನ ಜಾಲಿಯಲ್ಲಿ ಜಾನುವಾರುಗಳನ್ನು ಕಳುವು ಮಾಡುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕೂಡಲೇ ಆರೋಪಿಗಳನ್ನು ಪತ್ತೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಜಾಲಿಯಲ್ಲಿರುವ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡ ಹತ್ತಿರ ಮಲಗಿದ್ದ ಗೋವುಗಳನ್ನು ಐಶಾರಾಮಿ ಕಾರಿನಲ್ಲಿ ಕದ್ದು ಸಾಗಿಸಿದ್ದು, ಪಕ್ಕದ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಗೋವು ಕಳುವು ಮಾಡಿದವರು ಮುಖವನ್ನು ಮುಚ್ಚಿಕೊಂಡಿರುವುದು ಕಂಡುಬಂದಿದೆ.ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಐಶಾರಾಮಿ ಕಾರಿನಲ್ಲಿ ಹೋಗಿ ದನಗಳನ್ನು ಕಳ್ಳತನ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ರಾತ್ರಿ ವೇಳೆ ಅವ್ಯಾಹತವಾಗಿ ಗೋವು ಕಳ್ಳತನ ನಡೆಯುತ್ತಿದ್ದರೂ ಕ್ರಮ ಆಗದೇ ಇರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನವಿ ಸಲ್ಲಿಕೆ: ಶುಕ್ರವಾರ ಬೆಳಗಿನ ಜಾವ ಜಾಲಿಯಲ್ಲಿ ದನಗಳ್ಳತನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದನ್ನು ನೋಡಿದ ಸ್ಥಳೀಯರು ನಗರ ಠಾಣೆಗೆ ಆಗಮಿಸಿ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಅವರಿಗೆ ದನಗಳ್ಳರನ್ನು ಹಿಡಿಯುವಂತೆ ಆಗ್ರಹಿಸಿ ಮನವಿಯನ್ನು ನೀಡಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ಭಟ್ಕಳದಲ್ಲಿ ಅಕ್ರಮ ಜಾನುವಾರುಗಳನ್ನು ಐಶಾರಾಮಿ ಕಾರುಗಳಲ್ಲಿ ಸಾಗಿಸಲಾಗುತ್ತಿದೆ. ರಾತ್ರಿ ಹೊತ್ತು ಕಾರುಗಳಲ್ಲಿ ಬಂದರೆ ಯಾವುದೇ ಸಂಶಯ ಬರುವುದಿಲ್ಲ ಹಾಗೂ ಇಲಾಖೆಯವರೂ ದೊಡ್ಡ ಕಾರುಗಳನ್ನು ನೋಡಿದಾಗ ಯಾರೋ ಗಣ್ಯ ವ್ಯಕ್ತಿ ಎಂದು ಭಾವಿಸುತ್ತಾರೆ ಎನ್ನುವುದು ಕಳ್ಳರ ಭಾವನೆಯಾಗಿದ್ದು, ಕಳ್ಳತನಕ್ಕೆ ರಹದಾರಿಯಾಗಿದೆ. ಇನ್ನಾದರೂ ರಾತ್ರಿ ಗಸ್ತು ಹೆಚ್ಚಿಸಿ ಐಶಾರಾಮಿ ಕಾರುಗಳನ್ನು ಪರಿಶೀಲಿಸುವಂತಾಗಬೇಕು. ಒಂದುವೇಳೆ ರಾತ್ರಿ ಗಸ್ತನ್ನು ಹೆಚ್ಚಿಸಿ ದನಗಳ್ಳರನ್ನು ಹಿಡಿಯಲು ಮುಂದಾಗದೇ ಇದ್ದಲ್ಲಿ ಯುವಕರೇ ರಾತ್ರಿ ಹೊತ್ತು ಹೊಂಚು ಹಾಕಿ ದನಗಳ್ಳರನ್ನು ಹಿಡಿಯಬೇಕಾಗುತ್ತದೆ. ಆಗ ನಡೆಯುವ ಯಾವುದೇ ರೀತಿಯ ಅನಾಹುತಗಳಿಗೆ ಪೊಲೀಸ್ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ. ಜಾಲಿಯಲ್ಲಿ ದನಗಳ್ಳತನ ಮಾಡಿದ ಆರೋಪಿಗಳನ್ನು ಹಿಡಿದು ಶಿಕ್ಷೆಗೊಳಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.