ದಕ್ಷ ಪೊಲೀಸ್ ಅಧಿಕಾರಿಯಾಗಿರುವ ತಾಲೂಕಿನ ಸಿಪಿಐ ಲೋಹಿತ್ ವಿರುದ್ಧ ಕೆಲವು ದಲಿತ ಮುಖಂಡರು ದಲಿತ ವಿರೋಧಿ ಎಂಬ ಹಣೆಪಟ್ಟ ಕಟ್ಟುತ್ತಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲೂಕು ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ ಹೇಳಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ದಕ್ಷ ಪೊಲೀಸ್ ಅಧಿಕಾರಿಯಾಗಿರುವ ತಾಲೂಕಿನ ಸಿಪಿಐ ಲೋಹಿತ್ ವಿರುದ್ಧ ಕೆಲವು ದಲಿತ ಮುಖಂಡರು ದಲಿತ ವಿರೋಧಿ ಎಂಬ ಹಣೆಪಟ್ಟ ಕಟ್ಟುತ್ತಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲೂಕು ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲಿತರ ಕುಂದುಕೊರತೆಗಳನ್ನು ಆಲಿಸುತ್ತಿಲ್ಲ. ದಲಿತರಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ತುಮಕೂರಿನ ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಲೋಹಿತ್ ಮೇಲೆ ಆರೋಪಿಸಲಾಗಿದೆ. ಅಲ್ಲದೇ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿರುವುದು ಸರಿಯಲ್ಲ. ತಾಲೂಕಿನ ಮಾಯಸಂದ್ರ ಹೋಬಳಿಯಲ್ಲಿನ ಜಮೀನು ವಿವಾದ ಹಿನ್ನೆಲೆ ಸಿಪಿಐ ಲೋಹಿತ್ ಅವರು ಹೇಳಿದಂತೆ ಕೇಸ್ ಮಾಡಲಿಲ್ಲ ಎಂಬ ಕಾರಣದಿಂದ ಸುಖಾ ಸುಮ್ಮನೆ ದಲಿತ ವಿರೋಧಿ ಎಂದು ಆರೋಪ ಮಾಡಿರುವುದು ಸರಿಯಲ್ಲ. ಸತ್ಯಾಸತ್ಯತೆ ಅರಿಯದೇ ಪ್ರಾಮಾಣಿಕ ಅಧಿಕಾರಿಯನ್ನು ತೇಜೋವಧೆ ಮಾಡುವುದು, ಒಬ್ಬ ಅಧಿಕಾರಿಯನ್ನು ಗುರಿ ಮಾಡುವುದು ಸರಿಯಲ್ಲ. ಇಲ್ಲಿಯ ವಾಸ್ತವ ಸಂಗತಿಯನ್ನು ಅರಿಯದೇ ಇಂತಹ ಹೇಳಿಕೆಗಳನ್ನು ನೀಡಿರುವುದನ್ನು ಡಿ ಎಸ್ ಎಸ್ ಖಂಡಿಸುತ್ತದೆ. ಪ್ರತಿ ತಿಂಗಳು ತಾಲೂಕಿನಲ್ಲಿ ದಲಿತರ ಕುಂದುಕೊರತೆ ಸಭೆ ನಡೆಯುತ್ತಿದೆ. ನಿಮಗೆ ತೊಂದರೆಯಾಗಿದ್ದರೆ, ಅನ್ಯಾಯವಾಗಿದ್ದರೆ ಬನ್ನಿ. ಸತ್ಯಾಸತ್ಯೆತೆಯನ್ನು ಅರಿತು ನಿಮಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಮಾಡುತ್ತೇವೆ. ನಮ್ಮ ಸಂಘಟನೆ ಭ್ರಷ್ಟಾಚಾರದಲ್ಲಿ ತೊಡಗಿರುವ ಮತ್ತು ಜನರ ನೋವುಗಳಿಗೆ ಸ್ಪಂದಿಸದ ಹಲವು ಅಧಿಕಾರಿಗಳ ವಿರುದ್ದ ಹೋರಾಟವನ್ನೂ ಮಾಡಿದ್ದೇವೆ ಎಂದು ತಿಳಿಸಿದರು. ಸುಳ್ಳು ಅಟ್ರಾಸಿಟಿ ಕೇಸ್: ಹಲವು ಬಲಾಢ್ಯರು ತಾಲೂಕಿನ ದಲಿತರನ್ನು ಬಳಸಿಕೊಂಡು ಸುಳ್ಳು ಅಟ್ರಾಸಿಟಿ ಕೇಸ್ ಗಳನ್ನು ಹಾಕಿಸಿ ಅವರ ಕೆಲಸಗಳನ್ನು ಮಾಡಿಕೊಳ್ಳಲು ದಲಿತರನ್ನು ಬಳಸಿಕೊಳ್ಳುತ್ತಿದ್ದಾರೆ. ದಲಿತರಿಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ, ಜಾತಿ ಹಿಡಿದು ನಿಂದಿಸಿದ್ದರೆ, ದೌರ್ಜನ್ಯವೆಸಗಿರುವುದು ಸತ್ಯವಾಗಿದ್ದರೆ ಮಾತ್ರ ಕೇಸ್ ಮಾಡಿಸಿ, ಹೋರಾಟ ಮಾಡೋಣ. ಯಾರೋ ಹೇಳಿದ ಮಾತನ್ನು ಕೇಳಿ ಸುಳ್ಳು ಕೇಸ್ ಮಾಡಿಸಬೇಡಿ. ಇದು ಮುಂದೆ ಜನರು ನಮ್ಮನ್ನು ನಂಬದ ಸ್ಥಿತಿಗೆ ತಲುಪಲಿದೆ ಎಂದರು. ದಲಿತ ಮುಖಂಡ ಬೀಚನಹಳ್ಳಿ ರಾಮಣ್ಣ ಮಾತನಾಡಿ ಸಿಪಿಐ ಲೋಹಿತ್ ಮೇಲೆ ಆರೋಪಿಸಿರುವ ಮುಖಂಡರು ನಮ್ಮ ತಾಲೂಕಿನವರು ಅಲ್ಲ. ಆರೋಪ ಮಾಡಿರುವರು ದಲಿತ ಸಂಘಟಣೆಯಲ್ಲಿ ಗುರುತಿಸಿಕೊಂಡಿಲ್ಲ. ನಿಮಗೆ ತೊಂದರೆಯಾಗಿದ್ದರೆ ಬನ್ನಿ ನಿಮಗೆ ನ್ಯಾಯ ಒದಗಿಸುತ್ತೇವೆ. ಅದನ್ನು ಬಿಟ್ಟು ದಕ್ಷ ಪೋಲೀಸ್ ಅಧಿಕಾರಿ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಕೂಡಲೇ ಆ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಿಐಟಿಯು ಸತೀಶ್, ಆಟೋ ಚಾಲಕರ ಸಂಘದ ಗಂಗಣ್ಣ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ದಲಿತ ಮುಖಂಡರಾದ ಸೋಮೇನಹಳ್ಳಿ ಜಗದೀಶ್, ಶಿವಣ್ಣ, ಪುಟ್ಟರಾಜು ಸೇರಿದಂತೆ ಇತರರು ಇದ್ದರು.