ಸಾಕ್ಷ್ಯ ನಾಶಪಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು

ಬಳ್ಳಾರಿ: ಬ್ಯಾನರ್‌ ಗಲಭೆ ಘಟನೆಯಲ್ಲಿ ಮೃತಪಟ್ಟ ರಾಜಶೇಖರ್‌ ಅವರ ಮೃತದೇಹವನ್ನು ಮಣ್ಣಿನಲ್ಲಿ ಹೂಳುವ ಬದಲು ಸುಟ್ಟು ಹಾಕಿದ್ದು, ಸಾಕ್ಷ್ಯ ನಾಶಪಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಒತ್ತಾಯಿಸಿದರು.

ನಗರದ ಸಿರುಗುಪ್ಪ ರಸ್ತೆಯಲ್ಲಿ ಗ್ಲಾಸ್‌ ಹೌಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೃತ ರಾಜಶೇಖರ್‌ ಅವರ ಮೃತದೇಹವನ್ನು ಸುಟ್ಟು ಹಾಕಿರುವ ಬಗ್ಗೆ ಪ್ರಸ್ತಾಪಿಸಿರುವ ಸ್ಮಶಾನದ ಸಿಬ್ಬಂದಿಯೊಂದಿಗಿನ ಸಂಭಾಷಣೆಯ ವಿಡಿಯೋ ಬಿಡುಗಡೆಗೊಳಿಸಿ ಶುಕ್ರವಾರ ಮಾತನಾಡಿದರು.

ಮರಣೋತ್ತರ ಪರೀಕ್ಷೆ ಮಾಡುವಾಗ ವಿಡಿಯೋ ರೆಕಾರ್ಡ್‌ ಮಾಡಿರುತ್ತಾರೆ. ಕಾನೂನು ಪ್ರಕಾರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿ, ಸುಡಬೇಕೋ, ಮಣ್ಣಿನಲ್ಲಿ ಹೂಳಬೇಕೋ ಅನ್ನೋದು ಕುಟುಂಬಸ್ಥರು ನಿರ್ಧಾರ ಮಾಡುತ್ತಾರೆ. ಆದರೆ, ಸ್ಮಶಾನದಲ್ಲಿನ ಸಿಬ್ಬಂದಿ ಸೋಮು ಎಂಬ ವ್ಯಕ್ತಿಗೆ ರಘು ಎನ್ನುವ ಯುವಕ ಕರೆ ಮಾಡಿ, ರಾಜಶೇಖರ್‌ ಅವರ ತಾಯಿ ಹೇಳಿದ್ದಾರೆ ಅವರ ತಂದೆಯ ಸಮಾಧಿ ಬಳಿ ಗುಂಡಿಯನ್ನು ತೆಗೆಯುವಂತೆ ತಿಳಿಸಿದ್ದಾರೆ. ಬಳಿಕ ಅದೇ ರಘು ಎನ್ನುವ ಯುವಕ ಪುನಃ ಸೋಮುವಿಗೆ ಕರೆ ಮಾಡಿ ಎಂಎಲ್‌ಎ ಹೇಳಿದ್ದಾರಂತೆ ಮೃತದೇಹ ಸುಡಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಗ್ಯಾಸ್‌ ಬರ್ನರ್‌ ಮೂಲಕ ಸುಟ್ಟಿದ್ದಾರೆ ಎಂದು ಆರೋಪಿಸಿದರು.

ಘಟನೆ ನಡೆದು 9 ದಿನ ಕಳೆದರೂ ಪೊಲೀಸರಿಂದ ಇದುವರೆಗೆ ಯಾವುದೇ ಕ್ರಮ ಇಲ್ಲ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಓರ್ವ ಖಾಸಗಿ ಗನ್‌ ಮ್ಯಾನ್‌ನನ್ನು ಮಾತ್ರ ಬಂಧಿಸಿದ್ದಾರೆ. ಭರತ್‌ ರೆಡ್ಡಿ ಸಮಕ್ಷಮದಲ್ಲಿ ಈ ಫೈರಿಂಗ್‌ ಆಗಿದ್ದರೂ ಇದುವರೆಗೆ ಭರತ್‌ ರೆಡ್ಡಿ ಬಂಧನ ಆಗಿಲ್ಲ. ಡಿಕೆಶಿ ಅವರು ಭರತ್‌ ರೆಡ್ಡಿಯನ್ನು ಶಾಂತಿದೂತನೆಂದು ಹೇಳಿದ್ದಾರೆ. ಇವರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಸಹ ಸಂಪೂರ್ಣವಾಗಿ ಅವರ ಬೆನ್ನಿಗೆ ನಿಂತಿದೆ. ಎರಡೂವರೆ ವರ್ಷದ ಅವಧಿಯಲ್ಲಿ ಶಾಸಕ ಭರತ್‌ ರೆಡ್ಡಿ ನಡೆಸುವ ಅಕ್ರಮದಲ್ಲಿ ಇಲ್ಲಿನ ಎಎಸ್‌ಪಿ, ಡಿವೈಎಸ್‌ಪಿ ಪಾಲುದಾರರಾಗಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸದ್ಯ ಜಿಲ್ಲೆಗೆ ಹೊಸ ಐಜಿಪಿ, ಎಸ್ಪಿ ಅಧಿಕಾರ ವಹಿಸಿಕೊಂಡಿದ್ದು, ಈಗ ಬಂಧಿರುವ ಖಡಕ್‌ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತರಾ ಎಂಬುವುದು ಕಾದು ನೋಡಬೇಕಿದೆ. ಶ್ರೀರಾಮುಲು, ಸೋಮಶೇಖರ್‌ ರೆಡ್ಡಿ ಅವರಿಗೆ ಖಾಸಗಿ ಗನ್‌ ಮ್ಯಾನ್‌ ಗಳಿಲ್ಲ. ಇನ್ನು ಎರಡು ದಿನ ಅಧಿಕಾರಿಗಳಿಗೆ ಅವಕಾಶ ನೀಡುತ್ತೇವೆ. ಬಂಧನ ಆಗದಿದ್ದರೆ ನಮ್ಮ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.