ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಾಮಾನ್ಯವಾಗಿ ಆಸ್ಪತ್ರೆಯ ಹೊರಗೆ ಕಾರ್ಡಿಯೋ ಅರೆಸ್ಟ್ ಆಗಿ 10ರಲ್ಲಿ 9 ಮಂದಿ ಮೃತಪಡುತ್ತಿದ್ದು, ಸಮಯಕ್ಕೆ ಸರಿಯಾಗಿ ಸಿಪಿಆರ್ ಮಾಡಿದರೆ ಹೆಚ್ಚಿನ ಸಂದರ್ಭಗಳಲ್ಲಿ ಜೀವ ಉಳಿಸಬಹುದು ಎಂದು ಮೈಸೂರು ಮೆಡಿಕಲ್ ಕಾಲೇಜಿನ ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ವಿ.ವೈ, ಶ್ರೀನಿವಾಸ್ ಹೇಳಿದರು.ಮೈಸೂರು ಅಂಚೆ ವಿಭಾಗ ಮತ್ತು ಲಯನ್ಸ್ ಜೀವದಾರ ಸಂಸ್ಥೆಯ ಆಶ್ರಯದಲ್ಲಿ ವಿಶ್ವ ಸಿಪಿಆರ್ ಮತ್ತು ಎಇಡಿ ಜಾಗೃತಿ ಸಪ್ತಾಹದ ಅಂಗವಾಗಿ ಅಂಚೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಮೈಸೂರು ಅಂಚೆ ವಿಭಾಗದ ಸಿಬ್ಬಂದಿಗೆ ಏರ್ಪಡಿಸಿದ್ದ ಸಿಪಿಆರ್ ತರಬೇತಿ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಡಿಯೋ ಅರೆಸ್ಟ್ ಆದ ಮೊದಲು ಐದು ನಿಮಿಷದಲ್ಲಿ ಸಿಪಿಆರ್ ಸಿಕ್ಕಲ್ಲಿ ಬದುಕುವ ಸಾಧ್ಯತೆ ಎರಡು-ಮೂರು ಪಟ್ಟು ಹೆಚ್ಚಿರುತ್ತದೆ ಎಂದರು.ಜೀವಧಾನ ಸಂಸ್ಥೆಯ ವೈದ್ಯ ಡಾ.ಪರಿಣಿತ ಮಾತನಾಡಿ, ರಕ್ತದಾನ ಮಾಡುವ ಕುರಿತು ಜನರಲ್ಲಿ ತಪ್ಪು ಅಭಿಪ್ರಾಯಗಳಿದ್ದು, ರಕ್ತದಾನ ಮಾಡಿದರೆ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ, ಬದಲಾಗಿ ಆರೋಗ್ಯ ವೃದ್ಧಿಸುತ್ತದೆ, ರಕ್ತದಾನ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವುದನ್ನು ತಪ್ಪಿಸುತ್ತದೆ ಎಂದರು.
ಭಾರತದಲ್ಲಿ ರಕ್ತದಾನದಲ್ಲಿ ಇಂದೂರ್ ಮೊದಲ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಆ ಸ್ಥಾನವನ್ನು ತಲುಪಬೇಕೆಂಬುದು ನಮ್ಮ ಸಂಸ್ಥೆಯ ಆಶಯವಾಗಿದೆ ಎಂದರು.ಜೀವಧಾರ ಸಂಸ್ಥೆಯ ವ್ಯಸಸ್ಥಾಪಕ ಟ್ರಸ್ಟಿ ಗಿರೀಶ್ ರಕ್ತದಾನದ ಕುರಿತು ಇರುವ ತಪ್ಪು ಕಲ್ಪನೆಗಳಿಂದ ಹೊರಬರಬೇಕೆಂದು ಕರೆ ನೀಡಿದರು.
ಅಂಚೆ ಕಚೇರಿಯ ಸಬ್ಬಂದಿ ಸಾರ್ವಜನಿಕರೊಂದಿಗೆ ದಿನ ನಿತ್ಯ ಸಂಪರ್ಕದಲ್ಲಿ ಇರುವುದರಿಂದ ಅವರಿಗೆ ಸಿಪಿಆರ್ ತರಬೇತಿ ನೀಡುವುದರಿಂದ ಹೆಚ್ಚು ಅನೂಕೂಲವಾಗುತ್ತದೆ ಎಂಬ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಡಾ. ಏಂಜಲ್ ರಾಜ್ ಮುಂದಿನ ದಿನಗಳಲ್ಲಿ ಮೈಸೂರು ಅಂಚೆ ವಿಭಾಗದ ಎಲ್ಲಾ ಪೋಸ್ಟ್ ಮ್ಯಾನ್ ಗಳಿಗೆ ಸಿಪಿಆರ್ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಡಾ.ವಿವೇಕ್, ಜೀವದಾರ ಲಯನ್ಸ್ ರಕ್ತ ಕೇಂದ್ರದ ಆಡಳಿತಾಧಿಕಾರಿ ರಶ್ಮಿರಾಜ್, ಸಹಾಯಕ ಅಂಚೆ ಅಧಿಕ್ಷಕ ಚೇತನ್ ಉತ್ತಪ್ಪ, ಶ್ರೀನಿವಾಸ್, ಅಂಚೆ ನಿರೀಕ್ಷಕರಾದ ಅನೂಪ್ ರಾಯ್ ಇದ್ದರು. ಸೌಮ್ಯ ಮಧು ಕುಮಾರ್ ಸ್ವಾಗತಿಸಿದರು. ಚೇತನ್ ಉತ್ತಪ್ಪ ವಂದಿಸಿದರು.