ಸಾರಾಂಶ
ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಕೊಪ್ಪಳತಂಬಾಕು ಸೇವನೆಯಂತಹ ದುಶ್ಚಟಗಳಿಂದ ಯುವಜನತೆಯನ್ನು ರಕ್ಷಿಸುವುದು, ಅವರ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಕೊಪ್ಪಳ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕೊಪ್ಪಳ ಹಾಗೂ ಬ್ರಹ್ಮಕುಮಾರಿ ಯೋಗಿನಿ ಅಕ್ಕ, ಸಂಚಾಲಕರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ತಂಬಾಕನ್ನು ಯಾವುದೇ ಪ್ರಾಣಿ, ಪಕ್ಷಿ ತಿನ್ನುವುದಿಲ್ಲ. ಆದರೆ ವಿಪರ್ಯಾಸವೆಂದರೆ ಎಲ್ಲರಿಗಿಂತಲೂ ಬುದ್ದಿ ಶಾಲಿಯಾದ ಮನುಷ್ಯ ಪ್ರಾಣಿ ಇಂದು ತಂಬಾಕಿನ ದುಶ್ಚಟಕ್ಕೆ ಬಲಿಯಾಗುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಂಬಾಕು ಸೇವನೆ ದುಷ್ಚಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತು ಸಮಾಜದ ಮೇಲೆ ಬಹಳಷ್ಟು ದುಷ್ಪರಿಣಾಮಗಳು ಬೀರುತ್ತದೆ ಎಂದರು.ತಂಬಾಕು ಸೇವನೆಯಿಂದ ಮನುಷ್ಯನ ದೇಹದಲ್ಲಿ ಅಂಗಾಂಗ ವೈಕಲ್ಯ ಉಂಟಾಗುತ್ತದೆ. ಇಂದರಿಂದ ದೇಶದ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳಲಿದೆ. ದುಶ್ಚಟಕ್ಕೆ ಬಲಿಯಾಗದಂತೆ ಯುವ ಜನತೆಯ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಕೋಟ್ಪಾ-2003 ರ ಕಾಯ್ದೆಯ ಪ್ರಕಾರ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಎಲ್ಲರೂ ಒಳ್ಳೆಯ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ. ಮಾತನಾಡಿ, ತಂಬಾಕಿನಲ್ಲಿ 7000 ವಿಷ ಅನಿಲಗಳು ಇರುತ್ತವೆ. ನಮ್ಮ ದೇಶದಲ್ಲಿ, ತ್ರಿಪುರಾ ಹೆಚ್ಚು (ಶೇ.65) ತಂಬಾಕು ಬಳಸುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಶೇ.28.2 ವಯಸ್ಕರು (15 ವರ್ಷ ಮತ್ತು ಮೇಲ್ಪಟ್ಟವರು) ತಂಬಾಕು ವ್ಯಸನಿಗಳಿದ್ದಾರೆ. ಅದರಲ್ಲಿ ಶೇ.12ರಷ್ಟು ಧೂಮಪಾನಿಗಳು ಮತ್ತು ಶೇ.19 ರಷ್ಟು ಹೊಗೆರಹಿತ ತಂಬಾಕು ಬಳಸುತ್ತಾರೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಮಾತನಾಡಿದರು.
ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ತಂಬಾಕು ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ ನೀಡಲಾಯಿತು. ಅಲ್ಲಿ ಆಪ್ತ ಸಮಾಲೋಚನೆ ಮತ್ತು ನಿಕೋಟಿನ್ ಗಮ್‌ಗಳ ಸಹಾಯದಿಂದ ತಂಬಾಕು ಸೇವನೆ ತ್ಯಜಿಸಿದ ಮಹಮ್ಮದ ಅಲಿ ಎಂಬುವವರನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್ ಕಿರು ಕಾಣಿಕೆ ಕೊಡುವುದರ ಮೂಲಕ ಸನ್ಮಾನಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಪ್ರಕಾಶ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವಿಂದ್ರನಾಥ ಎಂ.ಎಚ್., ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ವೆಂಕಟೇಶ ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶಶಿಧರ್ ಎ., ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ, ಪ್ರಭಾರಿ ಜಿಲ್ಲಾ ಸಲಹೆಗಾರರಾದ ಡಾ. ಜಯಶ್ರೀ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ ಉಮಚಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ. ಪೂಜಾರ, ಸೈಕಾಲಾಜಿಸ್ಟ್ ಶಾಂತಮ್ಮ ಕಟ್ಟಿಮನಿ, ಹಿ.ಆ.ನಿ.ಅ. ಎಲ್.ವಿ. ಸಜ್ಜನರ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.