ಸಾರಾಂಶ
ಕನ್ನಡಪ್ರಭ ವಾರ್ತೆ ಹಳೆಬೀಡು
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗಿ ಅಪರಾಧಗಳು ನಡೆಯುತ್ತಿವೆ ಎಂದು ಬೇಲೂರು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಂ.ಎಸ್. ಶಶಿಕಲಾ ತಿಳಿಸಿದರು. ಹಳೆಬೀಡಿನ ಸಮುದಾಯ ಆಸ್ಪತ್ರೆ ಆವರಣದಲ್ಲಿ ಕಾನೂನು ಸೇವಾ ಇಲಾಖೆ, ನಮನ್ ಸಂಸ್ಥೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಮಾದಕ ವಸ್ತುಗಳಿಗೆ ಬೇಗ ಆಕರ್ಷಿತರಾಗುತ್ತಾರೆ, ಈ ವ್ಯಸನ ಬಿಡಿಸುವುದು ತುಂಬಾ ಕಷ್ಟಕರವಾಗುತ್ತದೆ. ಮಕ್ಕಳು ಇಂಥ ಹವ್ಯಾಸದ ಬಗ್ಗೆ ದೂರವಿದ್ದರೆ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ. ಯುವಜನತೆ ಸಮಾಜದಲ್ಲಿ ಉತ್ತಮ ಕಾರ್ಯ ಸಾಧನೆ ಮೂಲಕ ಗುರುತಿಸಿಕೊಳ್ಳಬೇಕು, ಅದು ಮುಖ್ಯವಾಗುತ್ತದೆ. ಆರೋಗ್ಯದ ಬಗ್ಗೆ ಸರ್ಕಾರ ಯುವ ಪೀಳಿಗೆಗೆ ಅರಿವು ಮೂಡಿಸಲು ಇಂಥ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.ಬೇಲೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್ ಮಾತನಾಡಿ, ದೇಶದ ಆಸ್ತಿ ಯುವಕರು ಸಂಸ್ಕಾರ- ಸಂಸ್ಕೃತಿಯನ್ನು ಬೆಳೆಸಿಕೊಂಡರೆ ಅಭಿವೃದ್ಧಿ ಕಾಣಲು ಅನುಕೂಲವಾಗುತ್ತದೆ. ಯುವ ಜನತೆಗೆ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರತಿ ಹೋಬಳಿ, ತಾಲೂಕು ಕೇಂದ್ರಗಳಲ್ಲಿ ನಮ್ಮ ಇಲಾಖೆಯಿಂದ ಹಮ್ಮಿಕೊಂಡಿದ್ದೇವೆ. ಇದಕ್ಕೆ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರೆ ನಿಮ್ಮ ಕುಟುಂಬದಲ್ಲಿ ಉತ್ತಮ ವಾತಾವರಣ ಉಂಟಾಗುತ್ತದೆ ಎಂದು ತಿಳಿಸಿದರು.
ನಮನ್ ಇಲಾಖೆಯ ಮನೋವೈದ್ಯೆ ಡಾ. ಪಲ್ಲವಿ ಮಾತನಾಡಿ, ಕರ್ನಾಟಕದ ನಿಮ್ಹಾನ್ಸ್ ಇಲಾಖೆ ಆಶ್ರಯದ ಎರಡು ಕೇಂದ್ರಗಳಲ್ಲಿ ಮಾತ್ರ ನಮ್ಮ ಇಲಾಖೆ ಕೆಲಸ ಮಾಡುತ್ತಿದೆ. ಮಾನಸಿಕ ತೊಂದರೆ ಇದ್ದವರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲಾಗುವುದು ಎಂದರು. ಹಳೇಬೀಡು ಠಾಣಾಧಿಕಾರಿ ಸಿದ್ದಲಿಂಗ ಬಾಣಸೆ ಮಾತನಾಡಿ, ಇಂದಿನ ಯುವಕರು ಹೆಚ್ಚು ಹೆಚ್ಚು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಕಳೆದುಕೊಳ್ಳುವುದಷ್ಟೇ ಅಲ್ಲ, ಅಪರಾಧ ಕೃತ್ಯಗಳಲ್ಲೂ ಭಾಗಿಯಾಗುತ್ತೀರಾ, ಆದ್ದರಿಂದ ವ್ಯಸನಕ್ಕೆ ಬೀಳದೇ ಗಮನ ಕೊಟ್ಟು ಓದಿ ಒಳ್ಳೆಯ ಸ್ಥಾನಕ್ಕೆ ಹೋದರೆ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ ಎಂದು ಯುವಕರಿಗೆ ಕಿವಿಮಾತು ಹೇಳಿದರು.ಹಳೇಬೀಡು ಆರೋಗ್ಯ ಅಧಿಕಾರಿ ಡಾ. ಅನಿಲ್‌ಕುಮಾರ್, ಡಾ. ದಯಾನಂದ್, ಹಕ್ಕಿ ಕುಮಾರ್, ಹೇಮಲತಾ, ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್, ಕೆ.ಪಿ.ಎಸ್ ಪ್ರಾಂಶುಪಾಲರಾದ ವಿನುತಾ, ಉಪಪ್ರಾಂಶುಪಾಲರಾದ ಮೋಹನರಾಜ, ಪಿಡಿಒ ವೀರುಪಾಕ್ಷ, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ, ನಮನ್ ಸಂಸ್ಥೆಯ ಪುನೀತ್, ಮಧು, ವಿದ್ಯಾಶ್ರೀ, ಆಧ್ಯಾ ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಹೆಚ್ಚಾಗಿ ಜಾಥಾದಲ್ಲಿ ಪಾಲ್ಗೊಂಡು ಹಳೇಬೀಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರಿಗೆ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))