ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಶುಕ್ರವಾರ ಸರಗೂರು ತಾಲೂಕಿನ ಹೆಗ್ಗುಡಿಲು ಗ್ರಾಮದ ರೈತನೊಬ್ಬನನ್ನು ಬಲಿ ಪಡೆದಿದೆ. ಇದರೊಂದಿಗೆ ಕೇವಲ ಒಂದೇ ತಿಂಗಳಿನಲ್ಲಿ ಹುಲಿಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ.
ಮೈಸೂರು : ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಶುಕ್ರವಾರ ಸರಗೂರು ತಾಲೂಕಿನ ಹೆಗ್ಗುಡಿಲು ಗ್ರಾಮದ ರೈತನೊಬ್ಬನನ್ನು ಬಲಿ ಪಡೆದಿದೆ. ಇದರೊಂದಿಗೆ ಕೇವಲ ಒಂದೇ ತಿಂಗಳಿನಲ್ಲಿ ಹುಲಿಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ. ರೈತನೊಬ್ಬನನ್ನು ಹುಲಿ ಬಲಿ ಪಡೆದ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಸ್ಥಳಕ್ಕೆ ಆಗಮಿಸಿದ್ದ ಮಹಿಳಾ ಆರ್.ಎಫ್.ಒ ಮೇಲೆ ಹಲ್ಲೆ ನಡೆಸಿದ್ದಾರೆ.
ಜಮೀನಿಗೆ ತೆರಳಿದ್ದವನ ಮೇಲೆ ದಾಳಿ:
ಸರಗೂರು ತಾಲೂಕಿನ ಹೆಗ್ಗುಡಿಲು ಗ್ರಾಮದ ರೈತ ದಂಡನಾಯಕ ಶುಕ್ರವಾರ ಜಮೀನಿನಲ್ಲಿ ಉಳುಮೆಗೆ ತೆರಳಿದ್ದ ವೇಳೆ ಏಕಾಏಕಿ ಹುಲಿ ದಾಳಿ ಮಾಡಿದೆ. ಹೀಗೆ ದಾಳಿ ಮಾಡಿದ ಹುಲಿ ಜಮೀನಿನಲ್ಲೇ ರೈತನನ್ನು ಕೊಂದು, ಬಳಿಕ ದೇಹವನ್ನು ಅರ್ಧ ಕಿ.ಮೀ. ದೂರ ಎಳೆದುಕೊಂಡು ಹೋಗಿ ರೈತನ ತೊಡೆ, ತಲೆ ಭಾಗವನ್ನು ತಿಂದು ಹಾಕಿದೆ. ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಈ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಒಂದು ತಿಂಗಳ ಅಂತರದಲ್ಲಿ ನಾಲ್ಕನೇ ಹುಲಿ ದಾಳಿ ಪ್ರಕರಣ ಇದಾಗಿದ್ದು, ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಂಜನಗೂಡು ಮತ್ತು ಸರಗೂರು ತಾಲೂಕು ಗಡಿ ಭಾಗದಲ್ಲಿ ಹುಲಿ ಹಾವಳಿ ಹೆಚ್ಚಿದೆ.
