ರಾತ್ರಿ ವೇಳೆ ಹುಲಿ ಮರಿಗಳ ಜೊತೆ ವಿಡಿಯೋ

| Published : Nov 05 2025, 12:30 AM IST

ಸಾರಾಂಶ

ಒಂದೆಡೆ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಅರಣ್ಯ ಇಲಾಖೆಯ ವಿರುದ್ಧ ಗಂಭೀರ ಆರೋಪಗಳು ಕೇಳಿ ಬರುತ್ತಿದೆ‌.‌ ತಾಯಿಯಿಂದ ಬೇರ್ಪಟ್ಟಿದ್ದ ಮೂರು ಹುಲಿ ಮರಿಗಳ ಜೊತೆ ಖಾಸಗಿ ವ್ಯಕ್ತಿಗಳು ರಾತ್ರಿ ಹೊತ್ತು ವಿಡಿಯೋ ಮಾಡಿರುವ ಕಳವಳಕಾರಿ ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿ ರಸ್ತೆಯಲ್ಲಿ ನಡೆದಿದೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ದೂರು

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಒಂದೆಡೆ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಅರಣ್ಯ ಇಲಾಖೆಯ ವಿರುದ್ಧ ಗಂಭೀರ ಆರೋಪಗಳು ಕೇಳಿ ಬರುತ್ತಿದೆ‌.‌ ತಾಯಿಯಿಂದ ಬೇರ್ಪಟ್ಟಿದ್ದ ಮೂರು ಹುಲಿ ಮರಿಗಳ ಜೊತೆ ಖಾಸಗಿ ವ್ಯಕ್ತಿಗಳು ರಾತ್ರಿ ಹೊತ್ತು ವಿಡಿಯೋ ಮಾಡಿರುವ ಕಳವಳಕಾರಿ ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿ ರಸ್ತೆಯಲ್ಲಿ ನಡೆದಿದೆ.ತಾಲೂಕಿನ ಪುಣಜನೂರು-ಬೇಡಗುಳಿ ರಸ್ತೆಯಲ್ಲಿ ಕಳೆದ ಅ.14 ರಂದು ತಾಯಿಯಿಂದ ಬೇರ್ಪಟ್ಟ 3 ಹುಲಿ ಮರಿಗಳು ಪತ್ತೆಯಾಗಿದ್ದವು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಗಳು‌ ಹುಲಿ ಮರಿಗಳನ್ನು ಹಿಡಿದು ವಿಡಿಯೋ ಮಾಡಿದ್ದು ಬೆಳಕಿಗೆ ಬಂದಿದೆ.ಬೇಡಗುಳಿಯಲ್ಲಿರುವ ಅತ್ತಿಖಾನೆ ಎಸ್ಟೇಟ್ ನ ಜಾವಿದ್, ರಫೀಕ್ ಎಂಬವರು ರಾತ್ರಿ ವೇಳೆ ಜೀಪ್ ನ‌ ಹೆಡ್ ಲೈಟ್ ಬೆಳಕಿನಲ್ಲಿ ಹುಲಿ ಮರಿಗಳ ಜೊತೆ ವಿಡಿಯೋ ಮಾಡಿದ್ದು ಈ ಸಂಬಂಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ದೂರು ಕೊಟ್ಟಿದ್ದಾರೆ.

ಈ‌ ಕುರಿತು ದಿನೇಶ್ ಕಲ್ಲಹಳ್ಳಿ ಮಾತನಾಡಿ, ಕೋರ್ ಏರಿಯಾದಲ್ಲಿ ಇವರು ಹುಲಿ ಮರಿಗಳನ್ನು ಕಂಡ ವೇಳೆ ವಿಡಿಯೋ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಅರಣ್ಯಾಧಿಕಾರಿಗಳ ಬೆಂಬಲ ಇಲ್ಲದೇ ಇವರು ರಾತ್ರಿ ವೇಳೆ ಕೋರ್ ಏರಿಯಾದಲ್ಲಿ ಹುಲಿ ಮರಿಗಳ ವಿಡಿಯೋ ಮಾಡಲು ಸಾಧ್ಯವಿಲ್ಲ, 10 ದಿನಗಳ‌ ಮರಿಯನ್ನು ಇವರು ಸ್ಪರ್ಶ ಮಾಡಿದ್ದಾದರೂ ಏಕೆ? ಈ ಬಗ್ಗೆ ಅರಣ್ಯ ಸಚಿವರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.