ಕೃಷಿಯು ಪ್ರಕೃತಿಯನ್ನು ಅವಲಂಬಿಸಿರುವ ವೃತ್ತಿ. ಹವಾಮಾನ ವೈಪರೀತ್ಯದಿಂದ ರೈತರಿಗೆ ಅನಿರೀಕ್ಷಿತ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ರೈತರ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡುವಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅತ್ಯಂತ ಪರಿಣಾಮಕಾರಿ ಯೋಜನೆಯಾಗಿದೆ.
ಗದಗ: ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಗಾಳಿ- ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುವ ಬೆಳೆ ನಷ್ಟದಿಂದ ರೈತರನ್ನು ಆರ್ಥಿಕವಾಗಿ ರಕ್ಷಿಸುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಲ್ಲಿರುವ ಫಸಲ್ ಬಿಮಾ ಯೋಜನೆಯ ಜಾಗೃತಿ ವಾಹನಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೃಷಿಯು ಪ್ರಕೃತಿಯನ್ನು ಅವಲಂಬಿಸಿರುವ ವೃತ್ತಿ. ಹವಾಮಾನ ವೈಪರೀತ್ಯದಿಂದ ರೈತರಿಗೆ ಅನಿರೀಕ್ಷಿತ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ರೈತರ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡುವಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅತ್ಯಂತ ಪರಿಣಾಮಕಾರಿ ಯೋಜನೆಯಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲ ರೈತರು ತಮ್ಮ ಬೆಳೆಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವ ಮೂಲಕ ಬೆಳೆ ಭದ್ರತೆಯನ್ನು ಪಡೆದುಕೊಳ್ಳಬೇಕು ಎಂದರು.ಯೋಜನೆಯಡಿ ಬೆಳೆವಿಮೆ ಮಾಡಿಸಿಕೊಂಡರೆ ಪ್ರಕೃತಿ ವಿಕೋಪ, ಮಳೆ ಕೊರತೆ, ಅತಿಯಾದ ಮಳೆ, ಗಾಳಿ, ನೆರೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುವ ಬೆಳೆಹಾನಿಗೆ ವಿಮಾ ಪರಿಹಾರ ದೊರೆಯಲಿದ್ದು, ಇದು ರೈತರ ಆದಾಯದ ಸ್ಥಿರತೆ ಹಾಗೂ ಕೃಷಿ ಚಟುವಟಿಕೆಗಳ ನಿರಂತರತೆಗೆ ಸಹಕಾರಿಯಾಗಲಿದೆ ಎಂದರು.
ಬೆಳೆವಿಮೆ ಕುರಿತು ಹೆಚ್ಚಿನ ಮಾಹಿತಿ, ಅರ್ಹತೆ, ನೋಂದಣಿ ಪ್ರಕ್ರಿಯೆ ಹಾಗೂ ಕೊನೆಯ ದಿನಾಂಕ ಸೇರಿದಂತೆ ಅಗತ್ಯ ಮಾಹಿತಿಗಾಗಿ ರೈತರು ತಮ್ಮ ವ್ಯಾಪ್ತಿಯ ಕೃಷಿ ಇಲಾಖೆ ಕಚೇರಿಗಳು, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು. ಅಲ್ಲದೇ 1800 209 4980 ಟೋಲ್- ಫ್ರೀ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್., ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೆ., ತಾಂತ್ರಿಕ ಅಧಿಕಾರಿ ಸಂಜೀವಕುಮಾರ, ಕೃಷಿ ಅಧಿಕಾರಿ ಚಿತ್ರಾ ಬಿ.ಎಂ., ವಾರ್ತಾಧಿಕಾರಿ ವಸಂತ ಮಡ್ಲೂರ, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಇಂಡಸ್‌ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.