ಹಾವೇರಿ ತಾಲೂಕಿನ ಕುಳೇನೂರ ಗ್ರಾಮದ ಸರ್ಕಾರಿ ಗುಡ್ಡದ ಪ್ರದೇಶದಲ್ಲಿ ವಸತಿ ರಹಿತ ಬಡ ಫಲಾನುಭವಿ ಕುಟುಂಬಗಳಿಗೆ ಜಾಗೆ ಮಂಜೂರು ಮಾಡಿ, ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಸೋಮವಾರ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಾವೇರಿ: ತಾಲೂಕಿನ ಕುಳೇನೂರ ಗ್ರಾಮದ ಸರ್ಕಾರಿ ಗುಡ್ಡದ ಪ್ರದೇಶದಲ್ಲಿ ವಸತಿ ರಹಿತ ಬಡ ಫಲಾನುಭವಿ ಕುಟುಂಬಗಳಿಗೆ ಜಾಗೆ ಮಂಜೂರು ಮಾಡಿ, ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಸೋಮವಾರ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರವೇ ಸ್ವಾಭಿಮಾನಿ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ರಾಮು ತಳವಾರ ಮಾತನಾಡಿ, ಕಳೆದ ಮೂರ‍್ನಾಲ್ಕು ವರ್ಷಗಳಿಂದ ಕುಳೇನೂರ ಗ್ರಾಮದ ವಸತಿ ರಹಿತ ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಜಾಗೆ ಗುರುತಿಸಿ ಹಕ್ಕು ಪತ್ರ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಸಹ ಸ್ಥಳೀಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳು ಬೇಡಿಕೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಕನಿಷ್ಠ ಪಕ್ಷ ವಾರ್ಡ ಸಭೆ, ಗ್ರಾಮ ಸಭೆಗಳಲ್ಲಿ ವಸತಿಗೆ ಜಾಗೆ ರಹಿತ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಮುಂದಿನ ಕ್ರಮ ಜರುಗಿಸುವಲ್ಲಿಯೂ ವಿಫಲರಾಗಿದ್ದಾರೆ. ಶೀಘ್ರದಲ್ಲಿಯೇ ಸ್ಥಳೀಯ ಗ್ರಾಮ ಪಂಚಾಯಿತಿ ಎದುರು ಈ ಬಗ್ಗೆ ಅನಿರ್ದಿಷ್ಟ ಕಾಲಾವಧಿಯವರೆಗೆ ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ ದಾನಪ್ಪನವರ ಮಾತನಾಡಿ, ಕುಳೇನೂರ ಗ್ರಾಮದ ಸರ್ಕಾರಿ ಗುಡ್ಡದಲ್ಲಿ ಈಗಾಗಲೇ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸಾಂಬಾರು ಮಂಡಳಿ, ಪ್ರೌಢಶಾಲೆ ನಿರ್ಮಾಣ, ಸ್ಮಶಾನ, ಕೆಪಿಟಿಸಿಎಲ್ ಗ್ರಿಡ್ ನಿರ್ಮಾಣಕ್ಕೆ ಜಾಗೆಯನ್ನು ಗುರುತಿಸಲಾಗಿದ್ದು, ಆದರೆ ಸ್ಥಳೀಯ ಸಾರ್ವಜನಿಕರು ನೂರಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಅವರಿಗೆ ಜಾಗೆ ಗುರುತಿಸದಿರುವುದು ದುರಾದೃಷ್ಟಕರ. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ವಸತಿ ರಹಿತರಿಗೆ ಕೂಡಲೇ ಜಾಗೆ ಮಂಜೂರಾತಿಗೆ ಆಗ್ರಹಿಸಿದರು.
ಈ ವೇಳೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮಾ ಪುರದ, ಮುಖಂಡರಾದ ಪ್ರಕಾಶ ಹರಳಹಳ್ಳಿ, ಮಂಜುನಾಥ ಬಡಿಗೇರ, ಲೋಹಿತಾಶ್ವ ಓಲೇಕಾರ, ಬಸವರಾಜ ವರ್ದಿ, ಬಸವಣ್ಣಯ್ಯ ಬಸಾಪುರಮಠ, ಮೀನಾಕ್ಷಮ್ಮ ಗಾಜಿ, ಪವಿತ್ರಾ ಮೋಟಳ್ಳಿ, ಮಂಜುಳಾ ಗಾಣಿಗೇರ, ಮಂಜವ್ವ ತಳವಾರ, ಅಲ್ಲಾವುದ್ದೀನ ಕಬ್ಬೂರ, ಸಿದ್ದಲಿಂಗೇಶ ಕೋತಂಬರಿ, ನಾಗರಾಜ ಮುಳಥಳ್ಳಿ, ಎಸ್.ಎಸ್. ಭರಮಣ್ಣವರ, ಲಲಿತಾ ಬ್ಯಾಡಗಿ, ರುದ್ರಮ್ಮ ಹಾವೇರಿ, ಸಂತೋಷ ಬೆಳವಿಗಿ, ಪ್ರಶಾಂತ ಗಾಜಿ, ಮಂಜು ಅಮಾತಿ, ಗಿರಿಶ ಆರ್.ಎಂ., ರೇಣುಕಾ ಗಾಣಗೇರ, ಚನ್ನವ್ವ ವಾಲ್ಮೀಕಿ ಸೇರಿದಂತೆ ಇತರರು ಇದ್ದರು.