ರಾಜಸಭೆಗೆ ನಡೆದ ಚುನಾವಣೆಯಲ್ಲಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅಡ್ಡ ಮತದಾನ ಮಾಡಿರುವುದಕ್ಕೆ ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಸಿ, ಅವಕಾಶವಾದಿಗಳಿಗೆ ಬೆಂಬಲಕ್ಕೆ ನಿಲ್ಲೋದು ಅನೈತಿಕ ರಾಜಕಾರಣಕ್ಕೆ ವೇದಿಕೆ ಸೃಷ್ಠಿಸಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ರಾಜೀ ರಾಜಕಾರಣ ಮಾಡಿದರೆ ಅದರ ಪರಿಣಾಮ ಉಳಿದವರ ಮೇಲೆ ದುಷ್ಪರಿಣಾಮ ಬೀರಲಿದೆ. ಅಡ್ಡ ಮತದಾನ ಮಾಡಿದ್ದು ದುರದೃಷ್ಟಕರ. ಅವಕಾಶವಾದಿಗೆ ವ್ಯಕ್ತಿ ಸಂಬಂಧಕ್ಕೋಸ್ಕರ ರಾಜೀ ರಾಜಕಾರಣ ಒಳ್ಳೆಯದ್ದಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಅವರು ಹೇಳಿದ್ದಾರೆ.ರಾಜಸಭೆಗೆ ನಡೆದ ಚುನಾವಣೆಯಲ್ಲಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅಡ್ಡ ಮತದಾನ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವಕಾಶವಾದಿಗಳಿಗೆ ಬೆಂಬಲಕ್ಕೆ ನಿಲ್ಲೋದು ಅನೈತಿಕ ರಾಜಕಾರಣಕ್ಕೆ ವೇದಿಕೆ ಸೃಷ್ಠಿಸಿದಂತೆ ಆಗುತ್ತದೆ ಎಂದರು.ಪಕ್ಷ-ಪಕ್ಷ ಅನ್ನೋ ನಾವು ಪ್ರಶ್ನೆಗಳಿಗೆ ಒಳಗಾಗ್ತೀವಿ, ರಾಜಕಾರಣದ ವ್ಯಭೀಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ. ಎಲ್ಲಾ ಕಡೆ ಹೋಗಿ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಸಿದ್ಧಾಂತಕ್ಕೆ ಬದ್ಧರಾಗಿ ರಾಜಕಾರಣ ಮಾಡೋರು ಯಾವುದೇ ಪಕ್ಷದಲ್ಲಿದ್ದರೂ ನಿಷ್ಠೂರಕ್ಕೆ ಒಳಗಾಗ್ತಾರೆ. ಇಂಥವರು ನಮ್ಮ ಪಕ್ಷದ ಸಿಎಂ, ಬೇರೆ ಪಕ್ಷದ ಸಿಎಂ ಬಳಿಯೂ ಚೆನ್ನಾಗಿರುತ್ತಾರೆ ಎಂದರು.ವ್ಯಭಿಚಾರದ ರಾಜಕಾರಣಕ್ಕೆ ಯಾರೂ ಮಣೆ ಹಾಕಬಾರದು. ಇದೊಂದು ನಮಗೆ ಎಚ್ಚರಿಕೆ ಪಾಠ ಆಗಬೇಕು, ಪಕ್ಷದೊಳಗಿದ್ದು ರಾಜಕೀಯ ವ್ಯಭಿಚಾರ ಮಾಡೋದು ಶೂನ್ಯ ಸಾಧನೆ. ಪಕ್ಷಕ್ಕೆ ರಾಜೀನಾಮೆ ಕೊಟ್ಟು ತೀರ್ಮಾನ ತೆಗೆದುಕೊಂಡಿದ್ದರೆ ಬೇರೆ ಆಗುತ್ತಿತ್ತು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ನೋಡಬೇಕು. ಸೋಮಶೇಖರ್‌ ಅವರಂತಹವರ ಜತೆಗೆ ರಾಜಕೀಯ ಸಂಬಂಧ ಇಟ್ಟುಕೊಳ್ಳಬಾರದು ಎಂದು ಹೇಳಿದರು.

ರೆಡ್ಡಿ ವಿಲನ್‌ ಆಗಿದ್ರು, ಈಗ ಹೀರೋ!: ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಕಾಂಗ್ರೆಸ್ಸಿಗೆ ಅಂದು ರೆಡ್ಡಿ ವಿಲನ್ ಆಗಿದ್ರು, ಇಂದು ಹೀರೋ ಆಗಿದ್ದಾರೆ ಎಂದು ಸಿ.ಟಿ. ರವಿ ಛೇಡಿಸಿದರು. ಕಾಂಗ್ರೆಸ್ಸಿಗರೇ ಜನಾರ್ಧನ ರೆಡ್ಡಿ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆವತ್ತು ಬಿಜೆಪಿಯಲ್ಲಿದ್ದಾಗ ಜನಾರ್ಧನ ರೆಡ್ಡಿ ವಿಲನ್‌ ಆಗಿದ್ರು. ಅವರು ಬಿಜೆಪಿಯಲ್ಲಿ ಇದ್ದಾಗ ಲೂಟಿಕೋರರಾಗಿದ್ರು, ಈಗ ರೆಡ್ಡಿ ಆಪತ್ಭಾಂದವ, ಹೀರೋ ಆಗಿದ್ದಾರೆ ಎಂದು ಹೇಳಿದರು.‘ಪಾಕಿಸ್ತಾನ್ ಜಿಂದಾಬಾದ್‌’ ಘೋಷಣೆಗೆ ಬಿಜೆಪಿ ಕಿಡಿ, ಪ್ರತಿಭಟನೆ

ಚಿಕ್ಕಮಗಳೂರು: ರಾಜ್ಯ ಸಭಾ ಚುನಾವಣೆಯಲ್ಲಿ ನಾಸಿರ್‌ ಹುಸೇನ್‌ ಜಯಗಳಿಸಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಹಾಕಿರುವುದನ್ನು ಖಂಡಿಸಿ ಚಿಕ್ಕ ಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್‌.ದೇವರಾಜ್‌ ಶೆಟ್ಟಿ ನೇತೃತ್ವದಲ್ಲಿ ಇಲ್ಲಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಾಸಿರ್ ಹುಸೇನ್‌ ಅವರ ಭಾವಚಿತ್ರಕ್ಕೆ ಬೆಂಕಿಯನ್ನು ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ದೇವರಾಜ್‌ ಶೆಟ್ಟಿ ಮಾತನಾಡಿ, ಇದು, ಹಿಂದೂ ವಿರೋಧಿ, ದೇಶ ವಿರೋಧಿ ನೀತಿ. ಇಡೀ ದೇಶಕ್ಕೆ ಅಪಮಾನ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್‌ನ ಮನಸ್ಥಿತಿ ಗೊತ್ತಾಗುತ್ತದೆ. ಅಲ್ಪಸಂಖ್ಯಾತರ ಓಲೈಕೆಯನ್ನು ಸ್ಪಷ್ಟಪಡಿಸಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್‌, ಸಂತೋಷ್‌ ಕೋಟ್ಯಾನ್‌, ಪುಷ್ಪರಾಜ್‌, ಹಿರೇಮಗಳೂರು ರೇವನಾಥ್‌, ಮಧುಕುಮಾರ್‌ ರಾಜ್‌ ಅರಸ್‌ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.