ಸಾರಾಂಶ
ಕನ್ನಡಪ್ರಭವಾರ್ತೆ ಹೊಸದುರ್ಗ
ತಮ್ಮ ಕಕ್ಷಿದಾರರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದ ವಕೀಲ ಶ್ರೀನಿವಾಸ್ ಮೇಲೆ ಸೋಮವಾರ ರಾತ್ರಿ ಹಲ್ಲೆ ನಡೆದಿದ್ದು ಇದನ್ನು ಖಂಡಿಸಿ, ಮಂಗಳವಾರ ಬೆಳಗ್ಗೆ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಸಭೆ ನಡೆಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ಕಡಿವಣಕಟ್ಟೆ ಗ್ರಾಮದ ಕೇಸಿನ ವಿಚಾರಕ್ಕಾಗಿ ವಕೀಲ ಶ್ರೀನಿವಾಸ್ ಮೇಲೆ ಹೊಸದುರ್ಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಹಲ್ಲೆ ಮಾಡಲಾಗಿದೆ. ಜನರಿಗೆ ನ್ಯಾಯ ಕೊಡಿಸುವ ನ್ಯಾಯವಾದಿಗಳ ಮೇಲೆಯೇ ಈ ರೀತಿಯಾದ ಕೃತ್ಯಗಳು ನಡೆದರೆ, ಸಾಮಾನ್ಯ ಜನರ ಸ್ಥಿತಿಯೇನು? ಹಲ್ಲೆ ಕೋರರ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮತ್ತೊಮ್ಮೆ ಎಲ್ಲಿಯೂ ವಕೀಲರ ಮೇಲೆ ಹಲ್ಲೆಗಳು ನಡೆಯಬಾರದು ಎಂದರೆ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.ಹಿರಿಯ ವಕೀಲ ಎಚ್. ರವೀಂದ್ರನಾಥ್ ಮಾತನಾಡಿ, ವಕೀಲರ ಮೇಲೆ ಪದೇ ಪದೇ ಹಲ್ಲೆ ಕೃತ್ಯಗಳು ನಡೆಯುತ್ತಿರುವುದು ಖಂಡನಾರ್ಹ. ಹೊಸದುರ್ಗದಂತಹ ಸಣ್ಣ ನಗರಗಳಲ್ಲಿಯೇ ವಕೀಲರ ಮೇಲೆ ಹಲ್ಲೆ ನಡೆಯುತ್ತವೆ ಎಂದರೆ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ವಕೀಲರ ಸ್ಥಿತಿ ಹೇಗಿರಬೇಕು? ವಕೀಲರ ಮೇಲೆ ಹಲ್ಲೆ ಮಾಡಿದವರ ಪರವಾಗಿ ಯಾವುದೋ ವಕೀಲರು ವಕಾಲತ್ತು ನಡೆಸಬಾರದು ಎಂದು ಹೇಳಿದರು.ಸಭೆಯಲ್ಲಿ ಮತ್ತೊಬ್ಬ ಹಿರಿಯ ವಕೀಲರಾದ ಟಿ.ರಮೇಶ್ ಮಾತನಾಡಿ, ರಾಜ್ಯದ ಹಲವು ಕಡೆಗಳಲ್ಲಿ ವಕೀಲರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ? ಹಲ್ಲೆ ನಡೆಸಿದವರ ಪರವಾಗಿ ಯಾವುದೇ ವಕೀಲರು ವಕಲತ್ತು ನಡೆಸಬಾರದು. ಇಂತಹ ಕೃತ್ಯಗಳಿಂದ ವಕೀಲರು ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.ಸಭೆಯಲ್ಲಿ ವಕೀಲರಾದ ಜಗದೀಶ್ ನಾಯ್ಕ, ಶಿವಲಿಂಗಪ್ಪ, ಕೆ.ಎಂ.ಮಲ್ಲಿಕಾರ್ಜುನ್, ಎಲ್. ಬೊಮ್ಮಣ್ಣ, ಷಡಕ್ಷರಪ್ಪ, ಬಸವರಾಜಪ್ಪ, ಅಂಜನ್ ಕುಮಾರ್, ಟಿ.ರಮೇಶ್, ನರೇಂದ್ರಬಾಬು, ಗಂಗಾಧರ್, ರಂಗಪ್ಪ, ರಂಗಸ್ವಾಮಿ, ಶಂಕರಪ್ಪ, ಯುವರಾಜ್, ಕೀರ್ತಿಗೌಡ, ರಾಜು ಹೂವಳೆ, ಜ್ಯೋತಿ, ಶ್ರೀದೇವಿ, ಲಲಿತಾ ಕಲ್ಮಟ್, ವಾಣಿ ಮತ್ತು ವೆಂಕಟೇಶ್ ಸೇರಿದಂತೆ ಇತರರಿದ್ದರು.ಹೊಸದುರ್ಗದಲ್ಲಿ ವಕೀಲರ ಮೇಲೆ ಹಲ್ಲೆ ಖಂಡಿಸಿ ಮಂಗಳವಾರ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಸಭೆ ನಡೆಸಿದರು.