ಕುಮಟಾ: ಯಕ್ಷಗಾನ ಕಲೆಯು ಜನಜೀವನಕ್ಕೆ ಪ್ರಭಾವ ನೀಡಿದ ಕಲೆಯಾಗಿದ್ದು, ಇಲ್ಲಿ ಅನೇಕ ಕಲಾವಿದರು ಬಂದು ಹೋಗಿದ್ದಾರೆ. ಹೊಸ ಹೊಸ ಕಲಾವಿದರು ಹುಟ್ಟುತ್ತಿದ್ದಾರೆ. ಈ ಸಂಸ್ಕೃತಿ ಮುಂದುವರಿಯಲು ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಬೆಳೆಸಬೇಕು ಎಂದು ಜಿಪಂ ನಿಕಟಪೂರ್ವ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ ಹೇಳಿದರು.
ತಾಲೂಕಿನ ಬಡಗಣಿಯ ಗೋಗ್ರೀನ್ ಮೈದಾನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನೇತ್ರಿ ಯಕ್ಷೋತ್ಸವ ಉದ್ಘಾಟಿಸಿ ಮಾತನಾಡಿದರು.ಯಕ್ಷಗಾನ ಕಲಾವಿದನಾಗಿ ಯಕ್ಷಗಾನ ರಂಗಕ್ಕೆ ಏನೆಲ್ಲ ಕೊಡುಗೆ ನೀಡಬಹುದು ಎಂಬುದನ್ನು ನೀಲ್ಕೋಡು ಶಂಕರ ಹೆಗಡೆ ತಮ್ಮ ಅಭಿನೇತ್ರಿ ಸಂಸ್ಥೆಯ ಸಂಸ್ಥೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ಅನೇಕರಿಗೆ ದಾರಿದೀಪವಾಗಲಿ ಎಂದು ಹಾರೈಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಯಕ್ಷಗಾನದ ಬಣ್ಣದ ವೇಷದ ಪರಂಪರೆ ಮತ್ತೆ ವಿಜೃಂಭಿಸುವಂತಾಗಬೇಕು. ಮುಂದಿನ ದಿನಗಳಲ್ಲಿ ಬಣ್ಣದ ವೇಷದ ಕಲಾವಿದರು ತಯಾರಾಗಬೇಕು ಎಂದರು.ಕರಿಕಾನ ಪರಮೇಶ್ವರಿ ದೇವಾಲಯದ ಅರ್ಚಕ ವೇ. ಸುಬ್ರಹ್ಮಣ್ಯ ಭಟ್ ಮೇಲಿನಗಂಟಿಗೆ ಶುಭ ಹಾರೈಸಿದರು. ಈ ವೇಳೆ ದಿ. ಗೋಪಾಲ ಸುಬ್ಬಯ್ಯ ಹೆಗಡೆ ಹಾಗೂ ದಿ. ಗಣಪತಿ ಸುಬ್ಬಯ್ಯ ಹೆಗಡೆ ಓಜಗಾರ ಸಿದ್ದಾಪುರ ಇವರ ಸ್ಮರಣೆಯಲ್ಲಿ ಕುಟುಂಬದವರ ಸಹಕಾರದಲ್ಲಿ ಕಲಾವಿದ ವಿಷ್ಣು ಮಂಜಪ್ಪ ಆಚಾರಿ ಅವರಿಗೆ ಅಭಿನೇತ್ರಿ ಪ್ರಶಸ್ತಿ, ಶ್ರೀಧರ ಹೆಗಡೆ ಬೆಳೆಯೂರು ಹಾಗೂ ಅಪೂರ್ವ ಬೆಳೆಯೂರು ಕುಟುಂಬದವರ ಸಹಕಾರದಲ್ಲಿ ಕಲಾವಿದ ರಮೇಶ ಭಂಡಾರಿ ಮುರೂರು ಅವರಿಗೆ ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿ, ಸುಮನಾ ಭಟ್ ಹಾಗೂ ಮನೋಜ ಭಟ್ ಹೆಗ್ಗಾರಳ್ಳಿ ಸಿದ್ದಾಪುರ ಇವರ ಕುಟುಂಬದವರಿಂದ ಕಲಾವಿದ ಗಣಪತಿ ಹೆಗಡೆ ತೋಟಿಮನೆ ಇವರಿಗೆ ಕಣ್ಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಭಾಗವತ ಪ್ರಾಚಾರ್ಯ ಕೆ.ಪಿ. ಹೆಗಡೆ ಗೊಳಗೋಡು, ವೇಷಭೂಷಣ ಕಲಾವಿದ ಚಂದು ನಾಯ್ಕ ಅಂಕೋಲಾ, ದಿ. ಶ್ರೀಧರ ಭಟ್ ಕಾಸರಕೋಡು ಕುಟುಂಬಕ್ಕೆ ಆರ್ಥಿಕ ಸಹಾಯಧನ ನೀಡಲಾಯಿತು.
ವೇದಿಕೆಯಲ್ಲಿ ಕಲಾಪೋಷಕ ರಾಜು ಭಂಡಾರಿ, ಶಿರಸಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ಕೆ. ವಿಶಾಲ್ ಇತರರು ಇದ್ದರು. ತೃಪ್ತಿ ಹೆಗಡೆ ಹಾಗೂ ದ್ಯುತಿ ಹೆಗಡೆ ಸ್ವಾಗತಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ, ನಾಗರಾಜ ಹೆಗಡೆ ಕಾಸ್ಕಂಡ ಕಾರ್ಯಕ್ರಮ ನಿರ್ವಹಿಸಿದರು. ಅಭಿನೇತ್ರಿ ಟ್ರಸ್ಟ್ ಸ್ಥಾಪಕರಾದ ಶಂಕರ ಹೆಗಡೆ ನೀಲ್ಕೊಡು ವಂದಿಸಿದರು. ಬಳಿಕ ಶನೀಶ್ಚರಾಂಜನೇಯ ಯಕ್ಷಗಾನ ಆಖ್ಯಾನ ಪ್ರದರ್ಶನ ನೆರೆದವರನ್ನು ರಂಜಿಸಿತು.