ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸರ್ಕಾರಿ ನೌಕರರಲ್ಲಿ ಸುಪ್ತವಾಗಿರುವ ಚಿತ್ರಕಲೆ, ಸಂಗೀತ, ನಾಟಕ, ನೃತ್ಯ ಮತ್ತಿತರ ಲಲಿತ ಕಲೆಗಳ ಚಟುವಟಿಕೆಗಳ ಅನಾವರಣಗೊಳಿಸುವ ಜತೆಗೆ ಪ್ರೋತ್ಸಾಹಿಸಲು ಸಾಂಸ್ಕೃತಿಕ ಸಮ್ಮೇಳನಗಳನ್ನು ನಡೆಸುವ ಮೂಲಕ ರಾಜ್ಯಾದ್ಯಂತ ನೌಕರರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಜಾಗೃತಗೊಳಿಸಿ ಭವ್ಯ ಪರಂಪರೆಯನ್ನು ಉಳಿಸಿ-ಬೆಳೆಸುವುದು ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್‌ ಮೂಲ ಧ್ಯೇಯೋದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಹಾಗೂ ತಾಲೂಕಿನ ಈಸೂರು ಗ್ರಾಪಂ ಪಿಡಿಒ ಶಿವಾನಾಯ್ಕ್ ಕೆ.ತಿಳಿಸಿದರು.

ಪರಿಷತ್‌ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪ್ರಯುಕ್ತ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಹಲವು ಸರ್ಕಾರಿ ನೌಕರರು ಚಿತ್ರಕಲೆ,ಸಂಗೀತ, ನಾಟಕ, ನೃತ್ಯ ಮತ್ತಿತರ ಲಲಿತ ಕಲೆಗಳಲ್ಲಿ ಸಿದ್ದಹಸ್ತರಾಗಿದ್ದು,ನಿತ್ಯ ಕರ್ತವ್ಯದ ಒತ್ತಡದಲ್ಲಿ ಸುಪ್ತ ಕಲೆ ನಶಿಸಿಹೋಗುವ ಸಾದ್ಯತೆ ಹೆಚ್ಚಾಗಿದೆ. ಈ ದಿಸೆಯಲ್ಲಿ ನೌಕರರಲ್ಲಿನ ಕಲೆಯ ಅನಾವರಣಕ್ಕಾಗಿ ಧಾರವಾಡ ಜಿ.ಪಂ.ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ನೂತನವಾಗಿ ಅಸ್ಥಿತ್ವಗಳಿಸಿದೆ. ಪರಿಷತ್ ಪ್ರತಿ ತಾಲೂಕಿನಲ್ಲಿ ಆಸಕ್ತ ನೌಕರರಿಗೆ ಚಿತ್ರಕಲೆ, ಸಂಗೀತ, ನಾಟಕ, ನೃತ್ಯ ಮತ್ತಿತರ ಲಲಿತ ಕಲೆಗಳ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುವ ಜತೆಗೆ ಈ ಕ್ಷೇತ್ರದಲ್ಲಿ ನುರಿತ ಅಸಾಮಾನ್ಯ ನೌಕರರಿಗೆ ಸಾಂಸ್ಕೃತಿಕ ಸಮ್ಮೇಳನ ಆಯೋಜಿಸಿ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುವ ಸದುದ್ದೇಶ ಹೊಂದಿದೆ ಎಂದು ತಿಳಿಸಿದರು.

ನಿತ್ಯ ಕರ್ತವ್ಯದ ಒತ್ತಡ,ಜಂಜಾಟದ ಮದ್ಯೆ ನೌಕರರು ಪರಿಷತ್‌ ಸದಸ್ಯತ್ವ ಪಡೆದು ಆರೋಗ್ಯ ಕಾಪಾಡಿಕೊಂಡು ನಶಿಸಿ ಹೋಗುವ ಆತಂಕದಲ್ಲಿರುವ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ ಪ್ರೋತ್ಸಾಹಿಸುವಂತೆ ಕರೆ ನೀಡಿದರು.


ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಪ್ಪನಹಳ್ಳಿ ಸ.ಹಿ.ಪ್ರಾ.ಶಾಲೆ ಶಿಕ್ಷಕ ಎ.ಜಯಪ್ಪ,ಉಪಾಧ್ಯಕ್ಷೆಯಾಗಿ ಹಿರೇಜಂಬೂರು ಗ್ರಾ.ಪಂ.ಪಿಡಿಒ ಶಿಲ್ಪ ಬಿ.ಕೆ. ಅವರನ್ನು ನೇಮಕಗೊಳಿಸಲಾಯಿತು.

ಪರಿಷತ್ ತಾ.ಘಟಕದ ನೂತನ ಅಧ್ಯಕ್ಷ,ಉಪನ್ಯಾಸಕ ಪುಟ್ಟಪ್ಪ ಕೆ.ಎಚ್., ಜಿಲ್ಲಾ ಸಮಿತಿ ಪದಾಧಿಕಾರಿ,ಸಾಂಸ್ಕೃತಿಕ ಕಾರ್ಯದರ್ಶಿ,ಉಪನ್ಯಾಸಕ ಡಾ.ಪ್ರಕಾಶ್,ಕಾರ್ಯಕಾರಿ ಸಮಿತಿ ಸದಸ್ಯ, ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರಪ್ಪ ಕೆ.ಸಾಲೂರು ಗ್ರಾ ಪಂ. ಕಾರ್ಯದರ್ಶಿ ಬಸವರಾಜಯ್ಯ,ತಾಲೂಕು ಪದಾಧಿಕಾರಿ ಸ.ಪ್ರ.ದರ್ಜೆ ಕಾಲೇಜಿನ ಪ್ರೊ.ನರಸೇಗೌಡ, ದೈಹಿಕ ಶಿಕ್ಷಣ ಶಿಕ್ಷಕ ಶಶಿಕುಮಾರ್ ಟಿ.ಎಚ್. ಮತ್ತಿತರರು ಹಾಜರಿದ್ದರು.