ಬದುಕಿಗೆ ಆರ್ಥಿಕ ಭದ್ರತೆ ಜತೆ ಸಾಂಸ್ಕೃತಿಕ ಬುನಾದಿ ಅಗತ್ಯ

| Published : Sep 10 2025, 01:04 AM IST

ಬದುಕಿಗೆ ಆರ್ಥಿಕ ಭದ್ರತೆ ಜತೆ ಸಾಂಸ್ಕೃತಿಕ ಬುನಾದಿ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಂಜನೆ ಜತೆ ವೈಚಾರಿಕ ಮನೋಭಾವ ಬೆಳೆಸುವ ಈ ತಾಳಮದ್ದಳೆಯು ಅತ್ಯಂತ ಚೇತೋಹಾರಿ

ಸಿದ್ದಾಪುರ: ನಾವು ಆರ್ಥಿಕ ಭದ್ರತೆಯ ಕಡೆಗೆ ಸಾಗುತ್ತಿದ್ದರೂ ಸಮಾಜದಲ್ಲಿ ಸೌಹಾರ್ದ ಸಂಬಂಧಗಳು ಸಡಿಲವಾಗುತ್ತಿವೆ. ಕೌಟುಂಬಿಕವಾಗಿಯೂ ಒಟ್ಟಿಗೆ ಬಾಳುವ ಮನಸ್ಸು ಮಾಡುತ್ತಿಲ್ಲ. ಪರಿಣಾಮ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಟಿಎಸ್ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.

ಬಿದ್ರಕಾನಿನ ಸೇವಾ ಸಹಕಾರಿ ಸಂಘದಲ್ಲಿ ತಾಲೂಕಿನ ಸಾಂಸ್ಕೃತಿಕ ಸಂಘಟನೆಯಾದ ಕಲಾಭಾಸ್ಕರ ಇಟಗಿಯವರು ಹಮ್ಮಿಕೊಂಡಿರುವ ಸರಣಿ ತಾಳಮದ್ದಳೆ ಕಾರ್ಯಕ್ರಮ-೨೦೨೫ರ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಹೆಮ್ಮೆಯ ಕಲೆ ಯಕ್ಷಗಾನವು ಪ್ರದರ್ಶನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿವೆ. ರಂಜನೆ ಜತೆ ವೈಚಾರಿಕ ಮನೋಭಾವ ಬೆಳೆಸುವ ಈ ತಾಳಮದ್ದಳೆಯು ಅತ್ಯಂತ ಚೇತೋಹಾರಿಯಾಗಿದೆ. ಇವುಗಳನ್ನು ಉಳಿಸಿ ಬೆಳೆಸಿಕೊಳ್ಳೋಣ ಎಂದರು.

ಬಿದ್ರಕಾನ ಸೇವಾಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ ಚಟ್ನಳ್ಳಿ, ಉಪಾಧ್ಯಕ್ಷ ಪ್ರಕಾಶ ಹೆಗಡೆ ಮುತ್ತಿಗೆ ಉಪಸ್ಥಿತರಿದ್ದರು. ಕಲಾಭಾಸ್ಕರದ ಇಟಗಿ ಮಹಾಬಲೇಶ್ವರ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

ನಂತರ ಬಿದ್ರಕಾನು ಸೇವಾಸಹಕಾರಿ ಸಂಘದ ಆಶ್ರಯದಲ್ಲಿ ಕವಿ ಡಿ.ಎಸ್.ಶ್ರೀಧರ ವಿರಚಿತ ಭೃಗುಶಾಪ ತಾಳಮದ್ದಳೆ ಜರುಗಿತು. ಭಗವತರಾಗಿ ಹಿಲ್ಲೂರು ರಾಮಕೃಷ್ಣ ಹೆಗಡೆ, ಮದ್ದಳೆವಾದನದಲ್ಲಿ ಅನಿರುದ್ಧ ಹೆಗಡೆ ವರ್ಗಾಸರ, ಚಂಡೆವಾದನದಲ್ಲಿ ನಾಗಭೂಷಣ ಕೇಡಲೇಸರ ಭಾಗವಹಿಸಿದರು. ಅರ್ಥಗಾರಿಕೆಯಲ್ಲಿ ದೇವೇಂದ್ರನಾಗಿ ರಾಧಾಕೃಷ್ಣ ಕಲ್ಚಾರ್, ಖ್ಯಾತಿಯಾಗಿ ವಾಸುದೇವ ರಂಗ ಭಟ್ಟ, ತಮಾಸುರನಾಗಿ ಸರ್ಪಂಗಳ ಈಶ್ವರ ಭಟ್ಟ, ಶ್ರೀಹರಿಯಾಗಿ ವಿಷ್ಣುಶರ್ಮ ವಾಟೆಪಡ್ಪು, ಭೃಗುಮಹರ್ಷಿಯಾಗಿ ಗೊರಮನೆ ಮಂಜುನಾಥರಾವ್ ಪಾಲ್ಗೊಂಡಿದ್ದರು.