ಹೂವಿನಹಡಗಲಿ: ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಸಿಲಿಂಡರ್‌ ಸಮಸ್ಯೆ ಹೆಚ್ಚಾಗಿದ್ದು, ಹೋಟೆಲ್‌ಗಳು ಮಾಲೀಕರಿಗೆ ಮತ್ತು ಜನರಿಗೆ ಗ್ಯಾಸ್‌ ಸಿಗುತ್ತಿಲ್ಲ. ಇದರಿಂದ ಕರೆಂಟ್‌ ಒಲೆಗಳಿಗೆ ಬೇಡಿಕೆ ಹೆಚ್ಚಿದೆ.

ನಿತ್ಯ ಹಳ್ಳಿಗಳ ಜನ ಪಟ್ಟಣಕ್ಕೆ ಬಂದು ಕರೆಂಟ್‌ ಒಲೆಗಳನ್ನು ಖರೀದಿಸುತ್ತಿದ್ದಾರೆ. ಆದರೆ. ಕರೆಂಟ್‌ ಒಲೆಗಳೇ ಸಿಗುತ್ತಿಲ್ಲ. ಜನರ ಬೇಡಿಕೆಗೆ ತಕ್ಕಂತೆ ಒಲೆಗಳನ್ನು ಕಂಪನಿಯಿಂದ ಪೂರೈಕೆಯೇ ಆಗುತ್ತಿಲ್ಲ. ಇದರಿಂದ ಜನ ವಿಧಿ ಇಲ್ಲದೇ ಕಟ್ಟಿಗೆ ಒಲೆಗೆ ಮಾರು ಹೋಗಿದ್ದಾರೆ. ಮಿಲ್‌ನಲ್ಲಿ ಕಟ್ಟಿಗೆ ಖರೀದಿ ಮಾಡುತ್ತಿದ್ದಾರೆ.

ಪಟ್ಟಣದ ಗ್ಯಾಸ್‌ ಏಜೇನ್ಸಿ ಮುಂದೆ ಸಿಲಿಂಡರ್‌ ಖರೀದಿಗಾಗಿ ಬೆಳಗಿನ ಜಾವ 3ಕ್ಕೆ ಮನೆಯಿಂದ ಬಂದು ಸರದಿ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ನಿತ್ಯ ಅರ್ಧ ಕಿಮೀ ಉದ್ಧ ಸಿಲಿಂಡರ್‌ ಸಾಲು ಇರುತ್ತದೆ. ಇದರಿಂದ ರೋಸಿ ಹೋಗಿರುವ ಜನ ಕರೆಂಟ್‌ ಒಲೆ ಖರೀದಿಗೆ ಮುಂದಾಗಿದ್ದಾರೆ. ಆದರೆ ಕರೆಂಟ್‌ ಒಲೆಯೂ ಸಿಗುತ್ತಿಲ್ಲ. ಇದರಿಂದ ಕಟ್ಟಿಗೆ ಒಲೆಯಿಂದ ಹೋಟೆಲ್‌ಗಳಲ್ಲಿ ಉಪಹಾರ, ಊಟ ತಯಾರಿಸುತ್ತಿದ್ದಾರೆ.

ಕರೆಂಟ್‌ ಉಚಿತ ಇರುವ ಹಿನ್ನೆಲೆಯಲ್ಲಿ ನೂರಾರು ಜನ ಕರೆಂಟ್‌ ಒಲೆ ಖರೀದಿಗೆ ದುಂಬಾಲು ಬಿದ್ದಿದ್ದಾರೆ. ಸರ್ಕಾರ ಒಂದು ಕುಟುಂಬಕ್ಕೆ 45 ದಿನದ ಬಳಕ ಗ್ಯಾಸ್‌ ನೀಡುತ್ತಿದ್ದಾರೆ. ಇದನ್ನರಿತ ಜನ ಬಹಳ ಮಿತಿಯಲ್ಲಿ ಸಿಲಿಂಡರ್‌ ಬಳಕೆ ಮಾಡುತ್ತಿದ್ದಾರೆ.

ಕೂಲಿ ಕೆಲಸ ಬಿಟ್ಟು ಬಡವರು ಸಿಲಿಂಡರ್‌ಗಾಗಿ ಹಗಲು ರಾತ್ರಿ ಕಾಯುತ್ತಿದ್ದಾರೆ. ಇನ್ನು ಕೆಲವರು ಗ್ಯಾಸ್‌ ಏಜೆನ್ಸಿ ಮುಂದೆಯೇ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.


ಹೋಲ್‌ಗಳಿಗೆ ಸಿಲಿಂಡರ್‌ ಸಿಗುತ್ತಿಲ್ಲ. ಕಟ್ಟಿಗೆಯ ಒಲೆ ಬಳಕೆ ಮಾಡುತ್ತಿದ್ದೇವೆ. ಗ್ಯಾಸ್‌ ಸಿಗುವ ವರೆಗೂ ಕಟ್ಟಿಗೆ ಒಲೆಯನ್ನು ಬಳಕೆ ಮಾಡುತ್ತಿದ್ದೇವೆ. ಗ್ಯಾಸ್‌ ಸಮಸ್ಯೆ ಹೇಳಿಕೊಂಡರೇ ಕೇಳಿಸಿಕೊಳ್ಳುವವರು ಯಾರೂ ಇಲ್ಲ ಎನ್ನುತ್ತಾರೆ ಮಾಗಳ ಗ್ರಾಮದ ಹೋಟೆಲ್‌ ಮಾಲಿಕ ಕೊಟ್ರೇಶ ಪೂಜಾರ.

ಕಳೆದೊಂದು ವಾರದಿಂದ ನಿರಂತರ ಸಿಲಿಂಡರ್‌ ಲೋಡ್‌ ಬರುತ್ತಿದೆ. ಆದರೆ ಜನರಿಗೆ ಸಮಾದಾನವೇ ಇಲ್ಲ, ಮನೆ ಬಾಗಿಲಿಗೆ ಬಂದು ಗ್ಯಾಸ್‌ ವಿತರಣೆ ಮಾಡುತ್ತೇವೆ ಎಂದು ಹೇಳಿದರೂ, ಗ್ರಾಹಕರು ಗ್ಯಾಸ್‌ ಏಜೆನ್ಸಿ ಮುಂದೆ ಬಂದು ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಸಿಲಿಂಡರ್‌ ಸಮಸ್ಯೆ ಅಷ್ಟಾಗಿ ಇಲ್ಲ ಎಂದು ಆಹಾರ ಇಲಾಖೆ ಅಧಿಕಾರಿ ಭಾರತಿ ತಿಳಿಸಿದರು.