ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಅಂಬೇಡ್ಕರ್ ಅವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಬಿಡದಿದ್ದರೆ ದಲಿತ ಸಮುದಾಯ ನಾಶವಾಗಲಿದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.ಇತ್ತಿಚೆಗೆ ಪಟ್ಟಣದ ಹಳೇ ತಾಲೂಕು ಕಚೇರಿ ಆವರಣದಲ್ಲಿ ಪರಿಶಿಷ್ಟ ಜಾತಿ-ವರ್ಗಗಳ ಒಕ್ಕೂಟ ಹಾಗೂ ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರನ್ನು ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಮೂಲಕ ದಲಿತ ಸಮುದಾಯವನ್ನು ಒಡೆದು ಹೋಳು ಮಾಡಲಾಗಿದೆ. ಆದ್ದರಿಂದ ಸಮುದಾಯದಲ್ಲಿ ಒಗ್ಗಟ್ಟು ಮೂಡಿಸ ಬೇಕಾದರೆ, ಅಂಬೇಡ್ಕರ್ ಅವರನ್ನು ರಾಜಕೀಯದಿಂದ ಹೊರಗಿಡುವ ಅಗತ್ಯವಿದೆ ಎಂದರು. ಮಾರಾಟವಾಗುವ ಸಮಾಜ ಎಂದಿಗೂ ಆಡಳಿತ ನಡೆಸುವ ಸಮಾಜವಾಗಲು ಸಾಧ್ಯವಿಲ್ಲ. ಆದ್ದರಿಂದ, ರಾಜ್ಯದಲ್ಲಿ ಅಧಿಕಾರ ನಡೆಸಬೇಕಾದರೆ ಸ್ವಾಭಿಮಾನ ಬೆಳೆಸಿಕೊಳ್ಳುವುದು ತೀರ ಅಗತ್ಯವಿದೆ. ಅಂಬೇಡ್ಕರ್ ದಲಿತರ ಉದ್ಧಾರಕ್ಕಾಗಿ ಹಲವು ಸವಲತ್ತು ಕಲ್ಪಿಸಿದರು. ಆದರೆ ಇವರು ನೀಡಿದ ಸೌಲಭ್ಯ ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ರಾಜ್ಯದಲ್ಲಿ ನಾವು ಬಹುಸಂಖ್ಯಾತರಾದರೂ ಇಂದಿಗೂ ರಾಜ್ಯದಲ್ಲಿ ನಮ್ಮಿಂದ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ. ಇದಕ್ಕೆಲ್ಲ ಕಾರಣ ಒಗ್ಗಟ್ಟಿನ ಕೊರತೆ. ಇತಿಹಾಸದ ಅರಿವಿಲ್ಲದ ಸಮುದಾಯ ಎಂದಿಗೂ ಜೀವಂತವಾಗಿರಲು ಸಾಧ್ಯವಿಲ್ಲ. ಇತಿಹಾಸದಲ್ಲಿ ಹಲವು ಯುದ್ಧಗಳ ದಾಖಲೆಗಳಿವೆ. ಆದರೆ, ಮನುವಾದಿಗಳು ಉದ್ದೇಶಪೂರ್ವಕವಾಗಿ ಕೋರೆಗಾಂವ್ ಯುದ್ಧವನ್ನು ಇತಿಹಾಸದಿಂದ ಕೈಬಿಟ್ಟಿದ್ದಾರೆ. ಕೋರೆಗಾಂವ್ ಯುದ್ಧ ದಲಿತರಲ್ಲಿ ಸ್ಥಿತಿಪ್ರಜ್ಞೆ ಹುಟ್ಟುಹಾಕಿದೆ. ಯುದ್ಧ ದಲಿತರ ಸ್ಥಿತಿ ಸುಧಾರಣೆಗೆ ಅಡಿಪಾಯ ಹಾಕಲು ಕಾರಣವಾಗಿದೆ. ಅಂಬೇಡ್ಕರ್ ತಮ್ಮ ಜೀವಮಾನದ ಪ್ರತಿ ವರ್ಷವು ಕೋರೆಗಾಂವ್‌ಗೆ ಭೇಟಿ ನೀಡಿ ಯುದ್ಧ ನೆನಪಾರ್ಥಿಗಾಗಿ ನಿರ್ಮಿಸಿರುವ ಸ್ತಂಭಕ್ಕೆ ನೇಮಿಸುತ್ತಿದ್ದರು. ಆದ್ದರಿಂದ ದಲಿತರಾಗಿ ಹುಟ್ಟಿದ ಪ್ರತಿ ವ್ಯಕ್ತಿಯೂ ತನ್ನ ಜೀವನದ ಒಂದು ದಿನವಾದರು ಕೋರೆಗಾಂವ್‌ಗೆ ಭೇಟಿ ನೀಡುವ ಮೂಲಕ ತಮ್ಮ ಜೀವನದಲ್ಲಿ ಕ್ರಾಂತಿಕಾರಿ ಅಂಶಗಳನ್ನು ಆಳವಡಿಸಿಕೊಳ್ಳಬೇಕು ಎಂದರು. ದಲಿತ ಸಮುದಾಯ ಆಳುವ ಜನಾಂಗವಾಗಬೇಕು, ಇದು ಸಾಧ್ಯವಾಗಬೇಕಾದರೆ ಒಗ್ಗಟ್ಟಿರಬೇಕು. ಮಾರಾಟವಾಗುವ ಸಮುದಾಯ ಎಂದಿಗೂ ಆಡಳಿತ ನಡೆಸುವ ಸಮುದಾಯವಾಗುವುದಿಲ್ಲ ಎಂದರು.ಚಿಂತಕ ವಿಠಲ್ ವಗ್ಗಲ್ ಮಾತನಾಡಿ, ೧೮೧೮ರಲ್ಲಿ ಕೊರೇಂಗಾವ್‌ನಲ್ಲಿ ನಡೆದ ಯುದ್ಧ ದಲಿತರ ಸ್ವಾಭಿಮಾನದ ಸಂಕೇತವಾಗಿದೆ. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರು ತಿರುಗಿ ಬೀಳದ ಸಮಾಜ ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ. ಪೇಶ್ವೆಗಳ ನಿರಂತರ ಅವಮಾನವೇ ಭೀಮಾ ಕೊರೇಗಾಂವ್ ಯುದ್ಧಕ್ಕೆ ಕಾರಣ. ಐದನೂರು ದಲಿತ ಸೈನಿಕರು ೨೮ ಸಾವಿರ ಪೇಶ್ವೆಗಳ ಸಂಹಾರ ನಡೆಸಿದ್ದು ಇತಿಹಾಸ. ದಲಿತ ಸೈನಿಕರ ಇಂತಹ ವೀರ ಹೋರಾಟವನ್ನು ಪ್ರತಿಯೊಬ್ಬ ದಲಿತ ಯುವಕರು ತಿಳಿದುಕೊಳ್ಳುವ ಅಗತ್ಯವಿದೆ ಎಂದರು. ಬೆಂಗಳೂರಿನ ಧರ್ಮ ಧಸ್ಸಿಮ್ ಬುದ್ಧ ವಿಹಾರದ ಮೈತ್ರಿ ಮಾತಾಜಿ ಬಿಕ್ಕುಣಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ವಿಜಯೋತ್ಸವ ಸಮಿತಿ ಅಧ್ಯಕ್ಷ ನಲ್ಲುಲ್ಲಿ ಈರಯ್ಯ, ಅಂಬೇಡ್ಕರ್ ವಾದಿ ಮಹಾದೇವ್ ಭೀಮರಾಯ್ ಸಿದಗೋಳಿ, ಪುರಸಭೆ ಮಾಜಿ ಅಧ್ಯಕ್ಷ ಕಾಡಪ್ಪ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯಬೀದಿಯಲ್ಲಿ ಭೀಮಾ ಕೋರೆಗಾಂವ್ ಪ್ರತಿಕೃತಿಯ ಮೆರವಣಿಗೆ ನಡೆಸಲಾಯಿತು.