ಸಾರಾಂಶ
ಕೂಡಲೇ ನಗರಸಭೆ ಪೌರಾಯುಕ್ತರನ್ನು ಅಮಾನತ್ತು ಮಾಡಬೇಕು, ಇಲ್ಲವಾದಲ್ಲಿ ಇವರ ವಿರುದ್ದ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉಗ್ರಹೋರಾಟಗಳನ್ನು ನಡೆಸುವುದಾಗಿ ದಲಿತ ಮುಖಂಡರ ಎಚ್ಚರಿಕ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದಲ್ಲಿ ಸಂವಿಧಾನ ಜಾಗೃತಿ ಜಾಥ ರಥ ಕಾರ್ಯಕ್ರಮವನ್ನು ಬೇಜವಾಬ್ದಾರಿಯಾಗಿ ನಿರ್ವಹಿಸಿ ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿರುವ ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ದಲಿತರನ್ನು ದಲಿತರ ವಿರುದ್ಧ ಎತ್ತಿಕಟ್ಟಿ ಜಾತಿ ರಾಜಕಾರಣ ಮಾಡುತ್ತಿದ್ದು, ಕೂಡಲೇ ಪೌರಾಯುಕ್ತರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.ದಲಿತ, ಹಿಂದುಳಿದ, ಅಲ್ಪಸಂಖ್ಯಾಂತರ, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಫೆ.೨೦ ರ ಮಂಗಳವಾರ ನಗರದಲ್ಲಿ ಪ್ರತಿಭಟನೆ ಮಾಡಿ ಪೌರಾಯುಕ್ತರ ವಿರುದ್ದ ಕ್ರಮಕೈಗೊಳ್ಳಲು ತಹಸಿಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಎರಡು ದಿನಗಳ ಕಾಲ ಗಡವು ನೀಡಿದ್ದರು. ಆದರೆ ಯಾವುದೇ ಕ್ರಮಕೈಗೊಳ್ಳದ ಕಾರಣ ಶುಕ್ರವಾರ 2ನೇ ಬಾರಿ ಪ್ರತಿಭಟನೆ ನಡೆಸಿದವು.
ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಸಿ ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪೌರಾಯುಕ್ತರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಕೂಡಲೇ ನಗರಸಭೆ ಪೌರಾಯುಕ್ತರನ್ನು ಅಮಾನತ್ತು ಮಾಡಬೇಕು, ಇಲ್ಲವಾದಲ್ಲಿ ಇವರ ವಿರುದ್ದ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉಗ್ರಹೋರಾಟಗಳನ್ನು ನಡೆಸುವುದಾಗಿ ದಲಿತ ಮುಖಂಡರು ಉಪ ತಹಸೀಲ್ದಾರ್ ಶೋಭಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಈ ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಕವಾಲಿ ವೆಂಕಟರವಣಪ್ಪ, ಜಿ.ನಾರಾಯಣಸ್ವಾಮಿ, ವಿಜಯನರಸಿಂಹ, ಜನಾರ್ದನಬಾಬು, ಜನನಾಗಪ್ಪ, ಮಾಡಿಕೆರೆ ನರಸಿಂಹಪ್ಪ, ಪಿವಿ ಮಂಜುನಾಥ್, ಮಾದಿಗ ದಂಡೋರ ರಾಮಪ್ಪ, ಧನಲಕ್ಷ್ಮೀ, ಆನಂದ, ಚಲಪತಿ, ವಿಜಿ ನಾಗಾ, ಪೋಟೋ ನಾರಾಯಣಪ್ಪ, ರಾಜು, ಮತಿತ್ತರರು ಉಪಸ್ಥಿತರಿದ್ದರು.