ಓದುವ ಛಲ ಇದ್ದರೆ ಮಾಧ್ಯಮ ಅಡ್ಡಿಯಾಗಲ್ಲ

| Published : Feb 24 2024, 02:32 AM IST

ಸಾರಾಂಶ

ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಹಳ್ಳಿಗಾಡಿನ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ತಾವು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆಯಿಂದ ಹೊರಬಂದು ಓದನ್ನು ಸವಾಲಾಗಿ ಸ್ವೀಕರಿಸಬೇಕು.

ಸಿರಿಗೆರೆ: ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಹಳ್ಳಿಗಾಡಿನ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ತಾವು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆಯಿಂದ ಹೊರಬಂದು ಓದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಬೆಂಗಳೂರಿನ ಯುಆರ್ ರಾವ್‌ ಉಪಗ್ರಹ ಕೇಂದ್ರದ ವಿಜ್ಞಾನಿ ಬಿ.ಆರ್.‌ಉಮಾ ಹೇಳಿದರು.

ತರಳಬಾಳು ಹುಣ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂಗ್ಲಿಷ್‌ ಮಾಧ್ಯಮದಲ್ಲಿ ಓದುವವರು ಮಾತ್ರ ಮುಂದೆ ಬರುತ್ತಾರೆ ಎಂಬ ವಿಚಾರ ದೂರಮಾಡಿ ಮುನ್ನುಗ್ಗಬೇಕು ಎಂದರು.

ಜ್ಞಾನ ಸಂಪಾದನೆಗೆ ಕನ್ನಡ ಮಾಧ್ಯಮ ಅಡ್ಡಿಯಾಗುವುದಿಲ್ಲ. ನಾವೆಲ್ಲ ಹಿಂದೆಯೇ ಸರ್ಕಾರದ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇವೆ. ಓದುವ ಛಲ ಇದ್ದರೆ ಮಾಧ್ಯಮ ಅಡ್ಡಿಯಾಗುವುದೇ ಇಲ್ಲ ಎಂದರು.

ಹೆಣ್ಣುಮಕ್ಕಳು ತಮ್ಮಲ್ಲಿನ ಸಂಕೋಚ, ಕೀಳರಿಮೆ ಬಿಟ್ಟು ಛಲವಂತರಾಗಿ ಓದಿದರೆ ದೊಡ್ಡ ಸಾಧನೆ ಮಾಡಬಹುದು. ಓದಿನ ಪ್ರತಿಫಲದಿಂದ ಅದನ್ನು ಸಾಧಿಸಬಹುದು ಎಂದರು.

ಜಗತ್ತು ಈಗ ವಿಶಾಲವಾಗಿದೆ. ಮಹಿಳೆಯರು ಅಡಿಗೆ ಮನೆಗೆ ಸೀಮಿತಗೊಳ್ಳದೆ ಹೊರಗೆ ಬರಬೇಕು ಎಂದರು. ಸಾಮಾನ್ಯವಾಗಿ ಉಪಗ್ರಹವೊಂದನ್ನು ಸಿದ್ಧಗೊಳಿಸಲು 5ರಿಂದ 6 ವರ್ಷಗಳ ಸಮಯ ಬೇಕಾಗುತ್ತದೆ. ಅದು ಉಪಗ್ರಹದ ವೈಶಿಷ್ಟತೆ ಆಧರಿಸಿರುತ್ತದೆ. ಕೆಲವು ಸಂದರ್ಭದಲ್ಲಿ ಒಂದೆರಡು ವರ್ಷಕ್ಕೆ ಉಪಗ್ರಹವೊಂದನ್ನು ಸಿದ್ಧಗೊಳಿಸಿದ ಉದಾಹರಣೆಯೂ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೈಸೂರು ಜೆಎಸ್‌ಎಸ್‌ ಎಎಚ್‌ಇಆರ್‌ ಅಣುಜೀವಿಶಾಸ್ತ್ರ ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಕಾಂತೇಶ್‌ ಬಸವಲಿಂಗಪ್ಪ ಉಪನ್ಯಾಸ ನೀಡಿ, 14-15ನೇ ಶತಮಾನದ ಅವಧಿಯಲ್ಲಿ ವಿಜ್ಞಾನಕ್ಕೆ ಒಂದು ರೂಪ ಬಂದಿದೆ. ವಿಜ್ಞಾನವೆಂಬುದು ಓದಿನ ತಾರ್ಕಿಕ ಪದ್ಧತಿ. ಎಲ್ಲವನ್ನೂ ಪರಾಮರ್ಶಿಸಿ ಒಪ್ಪಿಕೊಳ್ಳುವ ವಿಚಾರ ಎಂದರು.

ಹಾಸನದ ನಿವೃತ್ತ ಪ್ರಾಚಾರ್ಯ ಪಾರ್ಥಸಾರಥಿ ನಡೆಸಿಕೊಟ್ಟ ವಿಜ್ಞಾನ ಚಟುವಟಿಕೆಗಳ ಪ್ರಾತ್ಯಕ್ಷಿಕೆ ವಿದ್ಯಾರ್ಥಿಗಳನ್ನು ಆಕರ್ಷಿಸಿತು.

ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.