ಸಾರಾಂಶ
ತಾಲೂಕು ದಾಸ ಸಾಹಿತ್ಯ ಪರಿಷತ್ತು ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಆಧ್ಯಾತ್ಮ ಲೋಕದ ಬೆಳಕನ್ನು ತೋರಿದ ದಾಸ ಸಾಹಿತ್ಯ ಕಣ್ಣು ತೆರೆಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಹೇಳಿದ್ದಾರೆ.ತಾಲೂಕು ದಾಸ ಸಾಹಿತ್ಯ ಪರಿಷತ್ತು, ತರೀಕೆರೆ ತಾಲೂಕು ಘಟಕ ದಿಂದ ಪಟ್ಟಣದ ಶ್ರೀ ಸತ್ಯಪ್ರದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ತಾಲೂಕು ದಾಸ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ನಿಯೋಜಿತ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಅಶ್ವಿನಿ ದೇವತೆಗಳೆಂದೇ ಪ್ರಸಿದ್ಧಿ ಪಡೆದಿರುವ ದಾಸ ಶ್ರೇಷ್ಠರಾದ ಕನಕದಾಸರು, ಪುರಂದರ ದಾಸರು ಮಾನವೀಯ ವೈಚಾರಿಕ, ಆಧ್ಯಾತ್ಮಿಕ ಜ್ಞಾನ, ಭಕ್ತಿ ಶ್ರದ್ದೆ ಮುಂತಾದ ಮಾನವೀಯ ಮೌಲ್ಯಗಳನ್ನು ಅನುಗಾಲ ನಡೆನುಡಿಗ ಳಲ್ಲಿ ಆಚಾರ ವಿಚಾರಗಳನ್ನು ಸಮಾಜಕ್ಕೆ ಸಂಗೀತದ ಮೂಲಕ ಬಳುವಳಿ ನೀಡಿರುವ ಮಹನೀಯರು ಎಂದರು.ಜಿಲ್ಲಾ ದಾಸ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತ ಗೊಳ್ಳಲು ದಾಸಶ್ರೇಷ್ಠರ ಭಾಷಾ ಪ್ರಯೋಗ, ಸದ್ವಿಚಾರಗಳ ಅಗಣಿತ ಜೀವನಾನುಭವವನ್ನು ಸಾಹಿತ್ಯದಲ್ಲಿ ಎಂದೆಂದಿಗೂ ಅಳಿಸದ ಆಕರ ಗ್ರಂಥವಾಗಿ ನಾಡಿನ ಭಾಷಾ ಕಲಾಶ್ರೀಮಂತಿಕೆಯನ್ನು ನಾಡಿಗೆ ಸಮರ್ಪಿಸಿ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಕಸಾಪ ಸಹೋದರ ಸಂಸ್ಥೆಗಳಾದ ಜಾನಪದ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಗಮಕ ಸಾಹಿತ್ಯ ಪರಿಷತ್ತು ದಾಸ ಸಾಹಿತ್ಯ ಪರಿಷತ್ತು ಕನ್ನಡ ಅಧಿದೇವತೆ ಭುವನೇಶ್ವರಿ ಅಲಂಕಾರ ಆಭರಣಗಳಂತೆ ಶೋಭಾಯಮಾನವಾಗಿವೆ ಎಂದರು.
ದಾಸ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್ ಮಾತನಾಡಿ ದಾಸ ಸಾಹಿತ್ಯ ವಿಶ್ವಾದ್ಯಂತ ಪ್ರಚಾರ ವಾಗಿದೆ. ಹಿರಿಯರು ಬರೆದಿರುವುದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ದಾಸ ಸಾಹಿತ್ಯ ಪರಿಷತ್ತು ಆ ಜವಾಬ್ದಾರಿ ಕೊಟ್ಟಿದೆ. ನಾವೆಲ್ಲರೂ ಸೇರಿ ನಿರ್ವಹಿಸೋಣ ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಸೇವಾದೀಕ್ಷೆ ನೀಡಿ ಮಾತನಾಡಿ ಸಾಹಿತ್ಯ ಪರಿಷತ್ ಅಡಿ ದಾಸ ಸಾಹಿತ್ಯವನ್ನು ಹೆಚ್ಚು ಪ್ರಚುರಪಡಿಸಿ, ಹೋಬಳಿ ಘಟಕಗಳನ್ನು ಸ್ಥಾಪಿಸಬೇಕು. ದಾಸವಾರೇಣ್ಯರ ಕೃತಿಗಳನ್ನು ಜನಮಾನರಲ್ಲಿ ಉಳಿಯುವಂತೆ ಮಾಡಬೇಕು ಎಂದು ಹೇಳಿದರು.ತಾಲೂಕು ದಾಸ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಲತಾ ಗೋಪಾಲಕೃಷ್ಣ ಸೇವಾದೀಕ್ಷೆ ಸ್ವೀಕರಿಸಿ ಮಾತನಾಡಿ ದಾಸ ಸಾಹಿತ್ಯ ವನ್ನು ತಿರುಪತಿ ವಿಶೇಷ ಅಧಿಕಾರಿ ಅಪ್ಪಣ್ಣಚಾರ್ಯ ಹಾಗೂ ಆನಂದತೀರ್ಥಾಚಾರ್ಯರು ದಾಸ ಸಾಹಿತ್ಯವನ್ನು ಮನೆ ಮನೆಗಳಲ್ಲಿ ಪ್ರಚುರಪಡಿಸಿದರು. ಅದನ್ನು ಮುಂದುವರಿಸಲು ಸರ್ವರ ಸಹಕಾರ ನೀಡಲು ಮನವಿ ಮಾಡಿದರು.
ಕೆಂಬ್ರಿಜ್ ಪಬ್ಲಿಕ್ ಶಾಲಾ ಮಕ್ಕಳು ದಾಸ ವರೇಣ್ಯರ ವೇಷ ಭೂಷಣ ತೊಟ್ಟು ಪ್ರದರ್ಶಿಸಿ ಜನ ಮನ ಸೆಳೆದರು.ಶಂಕರನಾರಾಯಣ್, ಎಚ್.ಸಿ.ಗೋಪಾಲಕೃಷ್ಣ, ದಾಸಪ ಸಂಘಟನಾ ಕಾರ್ಯದರ್ಶಿ ಸುನಿತಾ ಕಿರಣ್, ಗೌರವಾಧ್ಯಕ್ಷ ಶಾರದ ಎನ್.ಮಂಜುನಾಥ್, ವಿಜಯಪ್ರಕಾಶ್, ಉಪಾಧ್ಯಕ್ಷೆ ಕವಿತಾ ಪ್ರಕಾಶ್, ಮಂಜುಳ ಜಗನ್ನಾಥ್ ಲೀಲಾ ಸೋಮ ಶೇಖರಯ್ಯ, ರತ್ನಮ್ಮ ಜಯಣ್ಣ, ತ.ಮ.ದೇವಾನಂದ್, ನವೀನ್ ಪೆನ್ನಯ್ಯ, ವಿ.ಪ್ರಶಾಂತ್, ಧನಂಜಯಕುಮಾರ್, ದೇವರಾಜ್ ಬೇಲೇನಹಳ್ಳಿ ಭಾಗವಹಿಸಿದ್ದರು.22ಕೆಟಿಆರ್.ಕೆ.4ಃ
ತರೀಕೆರೆಯಲ್ಲಿ ತಾಲೂಕು ದಾಸ ಸಾಹಿತ್ಯ ಪರಿಷತ್ತು, ತರೀಕೆರೆ ತಾಲೂಕು ಘಟಕದಿಂದ ತಾಲೂಕು ದಾಸ ಸಾಹಿತ್ಯಪರಿಷತ್ತು ತಾಲೂಕು ಘಟಕದ ಪದಗ್ರಹಣ ಸಮಾರಂಭವನ್ನು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಉದ್ಘಾಟಿಸಿದರು. ದಾಸ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಲತಾ ಗೋಪಾಲಕೃಷ್ಣ ಮತ್ತಿತರರು ಇದ್ದರು.