ಸಾರಾಂಶ
ಮುನಿರಾಬಾದ್: ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸೆ. 22ರಿಂದ 10 ದಿನಗಳ ಕಾಲ ನಡೆಯುವ ದಸರಾ ಮಹೋತ್ಸವದಲ್ಲಿ ದೇವಸ್ಥಾನದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ, ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿ ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸೆ. 22ರಂದು ದಸರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಅಂದು ಸಂಜೆ 6 ಗಂಟೆಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ದಸರಾ ಹಬ್ಬದ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು. ಪದ್ಮಶ್ರೀ ಪುರಸ್ಕೃತ ಖ್ಯಾತ ಕಲಾವಿದೆ ಭೀಮವ್ವ ಶಿಳ್ಳಿಕ್ಯಾತರ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ದಸರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ ಹೊಸಪೇಟೆ ನಾಗಭೂಷಣ್ ಅವರಿಂದ ದೇವೀ ಪುರಾಣ ಪಠಣ ನಡೆಯಲಿದೆ.ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ. 22ರಂದು ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ಕೇಶಪ್ಪ ಶಿಲ್ಲಿಕ್ಯಾತರ್ ಅವರಿಂದ ತೊಗಲುಗೊಂಬೆ ಆಟ ಪ್ರದರ್ಶನ, ಸೆ. 23ರಂದು ವಾದಿರಾಜ ಪಾಟೀಲ್ ಹುಲಿಗಿ ಅವರಿಂದ ಸುಗಮ ಸಂಗೀತ ಹಾಗೂ ಕಾಳಿದಾಸ ಬಳ್ಳಾರಿ ಮತ್ತು ತಂಡದವರಿಂದ ಹಾಸ್ಯ ಸಂಜೆ, ಸೆ. 24ರಂದು ಹುಲಿಗಿಯ ಗೀತಪ್ರಿಯ ಭರತನಾಟ್ಯ ಕಲಾ ತಂಡದಿಂದ ಭರತನಾಟ್ಯ ಮತ್ತು ಸ್ಥಳೀಯ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆ. 25ರಂದು ಧಾರವಾಡದ ಖ್ಯಾತ ಹಿಂದುಸ್ತಾನಿ ಕಲಾವಿದ ಡಾ. ವಿಜಯಕುಮಾರ್ ಪಾಟೀಲ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ, ಸೆ. 26ರಂದು ಪ್ರೊ. ಕೃಷ್ಣೇಗೌಡ ಮತ್ತು ತಂಡದವರಿಂದ ನಗೆ ಹಬ್ಬ, ಸೆ. 27ರಂದು ಉತ್ತರ ಕನ್ನಡದ ಯಲ್ಲಾಪುರದ ಈಶ್ವರ ದಾಸ್ ಕೊಪ್ಪೇಸರ ಅವರಿಂದ ಹರಿಕಥಾಮೃತಸಾರ ಹಾಗೂ ಹೊಸಪೇಟೆಯ ಅಂಜಲಿ ಭರತನಾಟ್ಯ ಕಲಾ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.ಸೆ. 28ರಂದು ಹುಲಿಗಿಯ ಖ್ಯಾತ ಸಂಗೀತ ಕಲಾವಿದೆ ಶ್ರುತಿ ಹ್ಯಾಟಿ ಅವರಿಂದ ಸುಗಮ ಸಂಗೀತ, ಶಾಲಿನಿ ಹೆಬ್ಬಾರ್ ಅವರ ಕಲಾತಂಡದಿಂದ ವೈವಿಧ್ಯಮಯ ನೃತ್ಯಗಳು, ಸೆ. 29ರಂದು ಬೆಂಗಳೂರಿನ ಕಲಾವಿದೆ ಐಶ್ವರ್ಯಾ ರಾಣಿ ಬೂದಿಹಾಳ್ ಅವರಿಂದ ಸಂಗೀತ ಸಂಜೆ ಮತ್ತು ಹೊಸಪೇಟೆಯ ಹರ್ಷಿತ ಅವರಿಂದ ನೃತ್ಯ ಕಾರ್ಯಕ್ರಮ, ಸೆ. 30ರಂದು ವೈಭವ ಕುಲಕರ್ಣಿ ಅವರಿಂದ ನೃತ್ಯ ಕಾರ್ಯಕ್ರಮ ಮತ್ತು ಹುಬ್ಬಳ್ಳಿಯ ಕರಿಬಸವೇಶ್ವರ ನಾಟ್ಯ ಸಂಘದಿಂದ ವಿದುರ ಕಟ್ಟಿದ ತಾಳಿ ನಾಟಕ ಪ್ರದರ್ಶನ ನಡೆಯಲಿದೆ.
ಅ. 1ರಂದು ಖ್ಯಾತ ಹಿಂದುಸ್ತಾನಿ ಕಲಾವಿದರಾದ ಐಶ್ವರ್ಯಾ ದೇಸಾಯಿ ಅವರಿಂದ ಸಂಗೀತ ಕಾರ್ಯಕ್ರಮ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ, ಕುಷ್ಟಗಿ ಶರಣಪ್ಪ ವಾಡಿಗೇರಿ ಅವರಿಂದ ಜನಪದ ಸಿರಿ ಕಾರ್ಯಕ್ರಮ, ಅ. 2ರಂದು ಮಧ್ಯಾಹ್ನ 3 ಗಂಟೆಗೆ ಅಮ್ಮನವರ ಉತ್ಸವ ಮೂರ್ತಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಶಿವಪುರ ರಸ್ತೆಯಲ್ಲಿರುವ ಶಮೀ ವೃಕ್ಷಕ್ಕೆ ತೆರಳಿ, ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ, ಆನಂತರ ದೇವಸ್ಥಾನಕ್ಕೆ ಆಗಮಿಸಿ, ದೇವಸ್ಥಾನದಲ್ಲಿ ತೊಟ್ಟಿಲು ಸೇವೆ ನಡೆಯುವುದು. ರಾತ್ರಿ ಮಹಾಮಂಗಳಾರತಿ ಆನಂತರ ಮಂತ್ರ ಪುಷ್ಪದೊಂದಿಗೆ ದಸರಾ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.