ಭತ್ತ ಖರೀದಿ ಕೇಂದ್ರ ಆರಂಭಿಸದಿದ್ದರೆ ಅಹೋರಾತ್ರಿ ಧರಣಿ

| Published : Oct 09 2025, 02:01 AM IST

ಸಾರಾಂಶ

ಇನ್ನು 3-4 ದಿನಗಳಲ್ಲಿ ಸರ್ಕಾರವೇ ಹೇಳಿದಂತೆ ಭತ್ತ ಖರೀದಿ ಕೇಂದ್ರ ಆರಂಭಿಸದಿದ್ದರೆ ಜಿಲ್ಲಾಡಳಿತದ ವಿರುದ್ಧ ಅಹೋರಾತ್ರಿ ಧರಣಿ ನಡೆಸವುದಾಗಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಎಚ್ಚರಿಸಿದ್ದಾರೆ.

- ಜಿಲ್ಲಾ ರೈತರ ಒಕ್ಕೂಟ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಎಚ್ಚರಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಇನ್ನು 3-4 ದಿನಗಳಲ್ಲಿ ಸರ್ಕಾರವೇ ಹೇಳಿದಂತೆ ಭತ್ತ ಖರೀದಿ ಕೇಂದ್ರ ಆರಂಭಿಸದಿದ್ದರೆ ಜಿಲ್ಲಾಡಳಿತದ ವಿರುದ್ಧ ಅಹೋರಾತ್ರಿ ಧರಣಿ ನಡೆಸವುದಾಗಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಎಚ್ಚರಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸುತ್ತೋಲೆಯ ನಿಯಮ ಪಾಲಿಸುವ ಉದ್ದೇಶಕ್ಕಾಗಿ ಕೇವಲ ದಾಖಲೆಗೆಂಬಂತೆ ಟಾಸ್ಕ್ ಫೋರ್ಸ್‌ ಸಭೆ ನಡೆಸಿ, ಕೆಲ ದಿನಗಳ ಕಾಲ ನೋಂದಣಿ ಮಾಡಿಕೊಳ್ಳಲು ಹೇಳಿ, ನಂತರ ಯಾವುದೇ ರೈತರು ನೋಂದಣಿ ಮಾಡಿಸಿಲ್ಲವೆಂದು ಖರೀದಿ ಕೇಂದ್ರ ಮುಚ್ಚುವ ನಾಟಕ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಇಂತಹ ಕುತಂತ್ರದ ಮೂಲಕ ರೈತವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ದರಕ್ಕೆ ರಾಜ್ಯ ಸರ್ಕಾರ 1 ಕ್ವಿಂಟಲ್‌ಗೆ ₹1 ಸಾವಿರ ಪ್ರೋತ್ಸಾಹಧನ ಘೋಷಿಸಲಿ. ನಿಯಮಾನುಸಾರ ಖರೀದಿ ನೋಂದಣಿಗೆ 45 ದಿನಗಳ ಕಾಲಾವಕಾಶ ನೀಡಬೇಕು. ಜಿಲ್ಲಾಧಿಕಾರಿ ತೀರ್ಮಾನಿಸಿದಂತೆ ಸೆ.15ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಿದೆ ಎಂಬ ಬದಲಿಗೆ ನೋಂದಣಿ ಪ್ರಕ್ರಿಯೆ ಆರಂಭದ ದಿನದಿಂದ 45 ದಿನಗಳ ಕಾಲಾವಕಾಶ ನೀಡಲಿ ಎಂದರು.

ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆ ಉತ್ತಮವಾಗಿದ್ದು, ಬತ್ತ ಬೆಳೆಯಲು ಪ್ರೋತ್ಸಾಹಿಸಿದೆ. ಹೆಚ್ಚು ಬತ್ತದ ಇಳುವರಿ ಬರುವ ನಿರೀಕ್ಷೆಯೂ ಇದೆ. ಇನ್ನು ಕಟಾವಿಗೆ ಒಂದು ತಿಂಗಳಾದರೂ ಬೇಕಾಗುತ್ತದೆ. ನೆರೆಯ ಆಂಧ್ರ, ತೆಲಂಗಾಣ ರಾಜ್ಯದಲ್ಲಿ ಬತ್ತದ ಕಟಾವು ಆರಂಭವಾಗಿದೆ. ನಮ್ಮ ರಾಜ್ಯಕ್ಕೆ ರವಾನೆ ಆಗುತ್ತಿರುವುದರಿಂದ ಮತ್ತೆ ದರ ಕುಸಿತದ ಭೀತಿ ಆವರಿಸಿದೆ. ಇಂತಹ ಸ್ಥಿತಿಯಲ್ಲಿ ರೈತರ ನೆರವಿಗೆ ಧಾವಿಸಬೇಕಾದ ರಾಜ್ಯದ ಕಾಂಗ್ರೆಸ್ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದರು.

ಮುಖಂಡರಾದ ಅಣಬೇರು ಜೀವನಮೂರ್ತಿ, ಆರನೇ ಮೈಲಿಕಲ್ಲು ವಿಜಯಕುಮಾರ, ಗೋಪನಾಳು ಕರಿಬಸಪ್ಪ, ಕುರ್ಕಿ ರೇವಣಸಿದ್ದಪ್ಪ, ಕುರ್ಕಿ ಕೆ.ಎಚ್.ಮಂಜುನಾಥ ಇತರರು ಇದ್ದರು.

- - -

(ಬಾಕ್ಸ್‌)

* 1.60 ಲಕ್ಷ ಎಕರೆ, 4 ಲಕ್ಷ ಮೆಟ್ರಿಕ್ ಟನ್ ಬತ್ತ ನಿರೀಕ್ಷೆ ದಾವಣಗೆರೆ: ಜಿಲ್ಲೆಯಲ್ಲಿ 1.60 ಲಕ್ಷ ಎಕರೆ ಪ್ರದೇಶದಲ್ಲಿ ಬತ್ತ ಬೆಳೆದಿದ್ದು, 4 ಲಕ್ಷ ಮೆಟ್ರಿಕ್ ಟನ್‌ ಉತ್ಪಾದನೆ ನಿರೀಕ್ಷೆ ಇದೆ. ಕನಿಷ್ಠ ಬೆಂಬಲ ಬೆಲೆಯಡಿ ಕೇಂದ್ರ ಸರ್ಕಾರ ಸಾಮಾನ್ಯ ಬತ್ತಕ್ಕೆ ಕ್ವಿಂ.ಗೆ ₹2369 ಮತ್ತು ಗ್ರೇಡ್-ಎ ಬತ್ತಕ್ಕೆ ₹2389 ದರ ನಿಗದಿಪಡಿಸಿದೆ ಎಂದು ಬಿ.ಎಂ.ಸತೀಶ ಕೊಳೇನಹಳ್ಳಿ ಹೇಳಿದರು.

ಜಿಲ್ಲಾಧಿಕಾರಿ ಅವರು ಟಾಸ್ಕ್ ಫೋರ್ಸ್ ಸಭೆ ನಡೆಸಿ 12 ದಿನಗಳಾಗಿದ್ದರೂ ನೋಂದಣಿ ಪ್ರಕ್ರಿಯೆ ಆರಂಭಿಸಿಲ್ಲ. ಸಿಬ್ಬಂದಿ ಕೊರತೆ ನೆಪ ಒಂದು ಕಡೆಯಾದ್ರೆ. ಇನ್ನು ಸಾಫ್ಟ್ ವೇರ್ ಅಭಿವೃದ್ಧಿಯಾಗಿಲ್ಲವೆಂಬ ಸಬೂಬು ಹೇಳಲಾಗುತ್ತಿದೆ. ಸಾರ್ವಜನಿಕ ಆಹಾರ ವಿತರಣೆ ವ್ಯವಸ್ಥೆಯ ಕಾರ್ಯಭಾರ ಇದೆ. ಇದರ ಜೊತೆ ಖರೀದಿ ಕೇಂದ್ರದ ನಿರ್ವಹಣೆ ಸಾಧ್ಯವಿಲ್ಲವೆಂದು ಅಧಿಕಾರಿಗಳೂ ಕೈಚೆಲ್ಲುತ್ತಿದ್ದಾರೆ ಎಂದು ದೂರಿದರು.

- - -

-6ಕೆಡಿವಿಜಿ14: ರೈತರ ಒಕ್ಕೂಟ ಅಧ್ಯಕ್ಷ ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.