ಸಾರಾಂಶ
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ದಲಿತ ಎಂಬ ಒಂದೇ ಕಾರಣಕ್ಕೆ ಪ್ರಕರಣದ ವಿಚಾರಣೆ ನಡೆಸುವ ವೇಳೆಯೇ ವಕೀಲ ರಾಕೇಶ ಕಿಶೋರ ಶೂ ದಾಳಿ ನಡೆಸಿರುವುದು ಸಂವಿಧಾನ ಮೇಲೆ ನಡೆದ ದಾಳಿಯಾಗಿದೆ.
ಹುಬ್ಬಳ್ಳಿ:
ಸುಪ್ರೀಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸುವ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅಪಮಾನ ಮಾಡಿರುವ ವಕೀಲನನ್ನು ಗಡಿಪಾರು ಇಲ್ಲವೇ, ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬುಧವಾರ ಜೈ ಭೀಮ ಸೇನಾ ಸಂಘಟನೆ ಪ್ರತಿಭಟನೆ ನಡೆಸಿತು.ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜೈ ಭೀಮ ಸೇನಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ದಲಿತ ಎಂಬ ಒಂದೇ ಕಾರಣಕ್ಕೆ ಪ್ರಕರಣದ ವಿಚಾರಣೆ ನಡೆಸುವ ವೇಳೆಯೇ ವಕೀಲ ರಾಕೇಶ ಕಿಶೋರ ಶೂ ದಾಳಿ ನಡೆಸಿರುವುದು ಸಂವಿಧಾನ ಮೇಲೆ ನಡೆದ ದಾಳಿಯಾಗಿದೆ. ಇದೊಂದು ಹೀನ ಕೃತ್ಯವಾಗಿದ್ದು, ಸಮಾಜದಲ್ಲಿ ಇಂತಹದಕ್ಕೆ ಅವಕಾಶವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಹೀಗಾಗಿ ಘನಘೋರ ಅಪರಾಧ ಮಾಡಿರುವ ವಕೀಲನ ವಿರುದ್ಧ ಸೂಕ್ತ ಕಾನೂನು ಕ್ರಮದ ಜತೆಗೆ ಗಡಿಪಾರು ಇಲ್ಲವೇ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಜೈ ಭೀಮ ಸೇನಾ ಜಿಲ್ಲಾ ಘಟಕದ ಎಸ್.ಪಿ. ಹುಬಳೀಕರ, ರಮೇಶ ವಡ್ಡಪಲ್ಲಿ, ಹನುಮಂತ ಸೋಮನಪಲ್ಲಿ, ಓಬಳೇಶ ಯರಗುಂಟಿ, ರಾಜಾರಾಮ್, ದುರಗಪ್ಪ ಪೂಜಾರ, ಓಬಳೇಶ ಮುಸ್ಟೂರು, ಜಯರಾಮ, ಮೇಘರಾಜ ಹಾಗೂ ಎಸ್‌ಸಿ ಎಸ್‌ಟಿ ಹಾಗೂ ಒಬಿಸಿ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.