15 ದಿನ ಟೈಂ ಕೊಡಿ: ಜಾಲಿವುಡ್‌ ಸ್ಟುಡಿಯೋಸ್‌

| Published : Oct 09 2025, 02:00 AM IST

15 ದಿನ ಟೈಂ ಕೊಡಿ: ಜಾಲಿವುಡ್‌ ಸ್ಟುಡಿಯೋಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿಯವರು ಬೀಗ ಮುದ್ರೆ ತೆಗೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರಜಲಮಾಲಿನ್ಯ ಮತ್ತು ಅನಧಿಕೃತವಾಗಿ ಕಾರ್ಯ ನಿರ್ವಹಣೆ ಆರೋಪಕ್ಕೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ 2 ಬಾರಿ ನೋಟಿಸ್‌ ನೀಡಿದರೂ ತಲೆ ಕೆಡಿಸಿಕೊಳ್ಳದ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ, ನಿಯಮ ಉಲ್ಲಂಘನೆ ಮೇರೆಗೆ ಸೀಜ್ ಆದ ಬಳಿಕ ತಣ್ಣಗಾಗಿದೆ. ಬೀಗ ಮುದ್ರೆ ತೆಗೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿರುವ ಮಂಡಳಿಯ ಅಧಿಕಾರಿಗಳು, ತಮ್ಮ ತಪ್ಪು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ಕೋರಿದ್ದಾರೆ.

ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್‌ರನ್ನು ಭೇಟಿ ಮಾಡಿದ ಜಾಲಿವುಡ್ ಸ್ಟುಡಿಯೋಸ್‌ನ ವ್ಯವಸ್ಥಾಪಕ ಹಾಗೂ ಇತರ ಸಿಬ್ಬಂದಿ, ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಾವು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲನೆ ಮಾಡುತ್ತೇವೆ. ನಮ್ಮ ತಪ್ಪು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಬೇಕು. ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕೂಡ ನಡೆಯುತ್ತಿದೆ. ಸ್ಟುಡಿಯೋಗೆ ಬೀಗ ಹಾಕಿರುವುದರಿಂದ, ಅವರೆಲ್ಲರ ಕೆಲಸಕ್ಕೆ ತೊಂದರೆಯಾಗಲಿದೆ.‌ ಹಾಗಾಗಿ, ಷರತ್ತುಬದ್ದ ಅನುಮತಿ ನೀಡುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶವನ್ನು ನಾವು ಪಾಲಿಸಿದ್ದೇವೆ. ನಿಮ್ಮ ಮನವಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿಕೊಡುತ್ತೇನೆ. ನೀವು ಮಂಡಳಿಗೆ ಹೋಗಿ ಮನವಿ ಮಾಡಿ. ನಿರ್ಧಾರ ತೆಗೆದುಕೊಳ್ಳುವುದು ಮಂಡಳಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.

ಶೋ ಮತ್ತೆ ಪ್ರಸಾರವಾಗುತ್ತಾ?: ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಬಿಗ್​ಬಾಸ್ ಶೋನ ಭವಿಷ್ಯ ನಿಂತಿದೆ. ವಾಸ್ತವವಾಗಿ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ್ದಕ್ಕೂ, ಬಿಗ್ ಬಾಸ್ ಶೋಗೂ ನೇರ ಸಂಬಂಧ ಇರಲಿಲ್ಲ. ಆದರೆ, ಸ್ಟುಡಿಯೋ ಬಂದ್ ಆಗಿದ್ದರಿಂದ ಶೋಗೂ ಅಡಚಣೆ ಉಂಟಾಗಿತ್ತು. ಈಗ 15 ದಿನಗಳ ಕಾಲಾವಕಾಶ ಸಿಕ್ಕರೆ, ಶೋ ಶೀಘ್ರದಲ್ಲಿಯೇ ಪುನಾರಂಭವಾಗುವ ಸಾಧ್ಯತೆ ಇದೆ.(ಬಾಕ್ಸ್‌):

ಈಗಲ್‌ ಟನ್ ರೆಸಾರ್ಟ್‌ ಖಾಲಿ ಮಾಡಿದ ಸ್ಪರ್ಧಿಗಳು!

ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ ಹಾಕಿದ್ದರಿಂದ ಈಗಲ್‌ ಟನ್‌ ರೆಸಾರ್ಟ್‌ಗೆ ಆಗಮಿಸಿದ್ದ ಬಿಗ್ ಬಾಸ್ ಸ್ಪರ್ಧಿಗಳು, ಬುಧವಾರ ಸಂಜೆ 7 ಗಂಟೆಗೆ ರೆಸಾರ್ಟ್‌ ಖಾಲಿ ಮಾಡಿ, ಸಮೀಪದ ಹೋಟೆಲ್‌ಗೆ ಶಿಫ್ಟ್‌ ಆಗಿದ್ದಾರೆ. ಬೇರೆ ಕಾರ್ಯಕ್ರಮಕ್ಕೆ ಈ ಮೊದಲೇ ರೆಸಾರ್ಟ್ ಬುಕ್ ಆಗಿದ್ದ ಹಿನ್ನೆಲೆಯಲ್ಲಿ, ಬುಧವಾರ ಸಂಜೆ 7ರೊಳಗೆ ರೂಂ ಚೆಕ್ ಔಟ್ ಮಾಡುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ರೆಸಾರ್ಟ್‌ನಲ್ಲಿ 9 ರೂಂಗಳನ್ನು ಅವರು ಬುಕ್ ಮಾಡಿಕೊಂಡಿದ್ದರು.ಬಿಗ್‌ಬಾಸ್‌ ಮೇಲೆ ದಿಢೀರ್‌ ಕ್ರಮ ಯಾಕೆ ಕೈಗೊಂಡ್ರಿ?: ಡಿಕೆಶಿ ತರಾಟೆ

‘ಬಿಗ್‌ಬಾಸ್‌ ಕಾರ್ಯಕ್ರಮ, ಜಾಲಿವುಡ್‌ ಸ್ಟುಡಿಯೋ ಪ್ರಕರಣದ ವಿಚಾರದಲ್ಲಿ ಏಕಾಏಕಿ ಯಾಕೆ ಕ್ರಮ ಕೈಗೊಂಡಿರಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಬೈದಿದ್ದೇನೆ. ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದೇನೆ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ದೊಡ್ಡ ರಾಜಕೀಯ ಷಡ್ಯಂತ್ರ ರೂಪಿಸಲು ಯತ್ನಿಸುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ನಾನೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಬೈದಿದ್ದೇನೆ. ಸರಿಪಡಿಸಿಕೊಳ್ಳಲು ಅವರಿಗೆ ಅವಕಾಶ ನೀಡಿ, ಈ ರೀತಿ ಮಾಡಬೇಡಿ ಎಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಜಾಲಿವುಡ್ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ್ದೇ ನಾನು. ಅಲ್ಲಿ ಏನಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ ಎಂದರು.

ಕಿಚ್ಚ ಸುದೀಪ್‌ ವಿರುದ್ಧದ ಸೇಡಿಗೆ ಈ ರೀತಿ ಮಾಡಿದ್ದೀರಿ ಎಂಬ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ರಾಜಕೀಯವಾಗಿ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ. ಆತ ನಮ್ಮ ಹುಡುಗ (ಸುದೀಪ್‌) ಆ ಹೆಣ್ಣು ಮಗಳು (ಸುದೀಪ್‌ ಪತ್ನಿ) ಕೂಡ ನಮ್ಮ ಮನೆಗೆ ಬಂದಿದ್ದರು. ಯಾರೋ ಕೆಲವರಿಗೆ ಹೇಳಿ ಈ ರೀತಿಯ ಷಡ್ಯಂತ್ರ ಮಾಡಿಸುತ್ತಿದ್ದಾರೆ ಎಂದರು.

ಯುವಕರ ಉದ್ಯೋಗದ ಪ್ರಶ್ನೆ ಇದೆ. ಖಾಸಗಿಯವರು ಬಂಡವಾಳ ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದೋ ಅದಕ್ಕೆ ಅವಕಾಶ ನೀಡಿ. ಏಕಾಏಕಿ ಕ್ರಮ ಕೈಗೊಳ್ಳಬೇಡಿ ಎಂದು ಸೂಚಿಸಿದ್ದೇನೆ. ಇದು ಕೇವಲ ಬಿಗ್‌ ಬಾಸ್‌ ಅಲ್ಲ, ಎಲ್ಲಾ ಮನರಂಜನಾ ಕಾರ್ಯಕ್ರಮಗಳಿಗೂ ಅನ್ವಯ ಎಂದು ಹೇಳಿದರು.ಬಿಗ್‌ಬಾಸ್‌ ಬಂದ್‌ ಮಾಡಿಸಿ ಡಿಕೆಶಿ ಸೇಡು: ಜೆಡಿಎಸ್‌ ಕಿಡಿ

ಬೆಂಗಳೂರು ದಕ್ಷಿಣ ಜಿಲ್ಲೆ ಜಿಲ್ಲಾಡಳಿತವು ‘ಬಿಗ್‌ ಬಾಸ್‌’ ರಿಯಾಲಿಟಿ ಶೋ ಬಂದ್‌ ಮಾಡಿಸಿದ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜೆಡಿಎಸ್‌ ಪಕ್ಷವು ಟಾಂಗ್‌ ನೀಡಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್‌ ಬಾಸ್‌ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ‘ನಟ್ಟು ಬೋಲ್ಟ್‌ ಮಿನಿಸ್ಟರ್‌ ಡಿ.ಕೆ.ಶಿವಕುಮಾರ್‌’ ಎಂದು ಎಕ್ಸ್‌ ಖಾತೆಯಲ್ಲಿ ವ್ಯಂಗ ಮಾಡಿದೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕಾರ್ಯಕ್ರಮವೊಂದರಲ್ಲಿ ಸ್ಯಾಂಡಲ್‌ವುಡ್‌ ಕಲಾವಿದರ ನಟ್ಟು ಬೋಲ್ಟ್‌ ಟೈಟ್‌ ಮಾಡುವ ಬಗ್ಗೆ ಮಾತನಾಡಿದ್ದರು. ಈ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳುವ ಮುಖಾಂತರ ಡಿ.ಕೆ.ಶಿವಕುಮಾರ್‌ ಅವರನ್ನು ಟೀಕಿಸಲಾಗಿದೆ.

ನಿಯಮಗಳ ಉಲ್ಲಂಘನೆ ನೆಪದಲ್ಲಿ ಬಿಡದಿಯ ಬಿಗ್ ಬಾಸ್ ಮನೆಗೆ ಬೀಗ ಹಾಕಿಸಿದ್ದೀರಿ. ಒಪ್ಪಿಕೊಳ್ಳೋಣ. ‌ಅದೇ ರೀತಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಎಂದು ಪ್ರಶ್ನಿಸಲಾಗಿದೆ.ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ? ರಾಜ್ಯದ ಜನರ ಮೇಲೆ ನಿರಂತರವಾಗಿ ತೆರಿಗೆ ಬರೆ ಎಳೆದು ಲೂಟಿ ಹೊಡೆಯುತ್ತಿರುವುದಕ್ಕೆ ಯಾವಾಗ ಬೀಗ ಹಾಕುತ್ತೀರಾ? ಬೆಲೆ ಏರಿಕೆಗಳ ಮೂಲಕ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗ ಬೀಗ ಹಾಕುತ್ತೀರಾ? ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯನ್ನು ತಡೆಯಲು ಯಾವ ರೀತಿ ಬೀಗ ಹಾಕಿಸುತ್ತೀರಾ ಎಂದು ಪ್ರಶ್ನಿಸಲಾಗಿದೆ.ಬಿಗ್‌ಬಾಸ್‌ಗೆ ಬೀಗ ಪ್ರಶ್ನಿಸಿ ಅರ್ಜಿ: ಇಂದು ಹೈಕೋರ್ಟಲ್ಲಿ ವಿಚಾರಣೆ?

ಪರಿಸರ ನಿಯಮ ಉಲ್ಲಂಘಿಸಿದ ಆರೋಪ ಮೇಲೆ ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಗ್‌ ಬಾಸ್‌ ರಿಯಾಲಿಟಿ ಶೋ ಚಿತ್ರೀಕರಣ ನಡೆಯುವ ಜಾಲಿವುಡ್‌ ಸ್ಟುಡಿಯೋಸ್‌ ಆ್ಯಂಡ್‌ ಅಡ್ವೆಂಚರ್ಸ್‌ ಪಾರ್ಕ್‌ಗೆ ಬೀಗ ಹಾಕಲು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರು ಹೊರಡಿಸಿರುವ ಆದೇಶ ರದ್ದತಿ ಕೋರಿ ನಿರ್ವಹಣಾ ಸಂಸ್ಥೆ ವಿಇಎಲ್‌ಎಸ್‌ ಸ್ಟುಡಿಯೋಸ್‌ ಆ್ಯಂಡ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಹೈಕೋರ್ಟ್‌ ಮೆಟ್ಟಿಲೇರಿದೆ. ಈ ಕುರಿತ ಅರ್ಜಿ ವಿಚಾರಣೆ ಗುರುವಾರ ಬರುವ ಸಾಧ್ಯತೆ ಇದೆ. ಕೆಎಸ್‌ಪಿಸಿಬಿ 2025ರ ಅ.6ರಂದು ನೋಟಿಸ್‌ ಜಾರಿ ಮಾಡಿದೆ. ಆದರೆ ಈ ಬಗ್ಗೆ ವಿವರಣೆ ನೀಡಲು ಸೂಕ್ತ ಕಾಲಾವಕಾಶ ನೀಡಿಲ್ಲ. ಇದು ಕಾನೂನುಬಾಹಿರ, ಆದ್ದರಿಂದ ಬೀಗ ಹಾಕಲು ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದೆ.

ಅರ್ಜಿಯಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಕೆಎಸ್‌ಪಿಸಿಬಿ ಅಧ್ಯಕ್ಷ, ಪರಿಸರ ಅಧಿಕಾರ, ರಾಮನಗರ ಜಿಲ್ಲಾಧಿಕಾರಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ರಾಮನಗರ ಜಿಲ್ಲಾ ಲೋಕೋಪಯೋಗಿ ಕಚೇರಿ ಕಾರ್ಯಕಾರಿ ಎಂಜಿನಿಯರ್‌ ಅವರನ್ನು ಪ್ರತಿವಾದಿ ಮಾಡಲಾಗಿದೆ.ಬುಧವಾರ ಬೆಳಗ್ಗೆ ಅರ್ಜಿದಾರರ ಪರ ವಕೀಲರು, ನ್ಯಾಯಮೂರ್ತಿ ಆರ್‌.ನಟರಾಜ್‌ ಅವರ ಪೀಠದ ಮುಂದೆ ಹಾಜರಾಗಿ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದರು. ದಿನದ ಎಲ್ಲ ಪ್ರಕರಣಗಳ ವಿಚಾರಣೆ ಮುಗಿದ ಬಳಿಕ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿದೆ. ಸಂಜೆ ಕಲಾಪ ಮುಗಿದ ನಂತರ ಕಾಲಾವಕಾಶದ ಕೊರತೆ ಕಾರಣ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳಲಿಲ್ಲ.ಪಾರ್ಕ್‌ನಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮ ಸೇರಿ ಟಿವಿ ಕಾರ್ಯಕ್ರಮಗಳ ಚಿತ್ರೀಕರಣ ನಡೆಯುತ್ತದೆ. ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು ಎರಡು ಸಾವಿರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಪರಿಸರ ಸಂರಕ್ಷಣೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಮೇಲೆ ವಾಯು (ಮಾಲಿನ್ಯ ನಿಯಂತ್ರಣ ಮತ್ತು ನಿಷೇಧ) ಕಾಯ್ದೆ ವಿರುದ್ಧವಾಗಿ ನೋಟಿಸ್‌ ಜಾರಿ ಮಾಡಲಾಗಿದೆ. ಚಿತ್ರೀಕರಣ ನಡೆಯುತ್ತಿರುವ ಸ್ಥಳ ಬಿಗ್‌ ಬಾಸ್‌ ಸ್ಪರ್ಧಿಗಳು ನೆಲೆಸುವ ತಾಣವಾಗಿದೆಯೇ ಹೊರತು ಕೈಗಾರಿಕಾ ಪ್ರದೇಶವಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.ಅಲ್ಲದೆ, ವಾಯು (ಮಾಲಿನ್ಯ ನಿಯಂತ್ರಣ ಮತ್ತು ನಿಷೇಧ) ಕಾಯ್ದೆಯ ಸೆಕ್ಷನ್‌ 2(ಡಿ) ಅಡಿ ಪರಿಸರ ಮಾಲಿನ್ಯ ಎಂದಾದರೆ ಮನುಷ್ಯನ ಬದುಕಿಗೆ ಎರವಾಗುವ ಅಂಶ ಇರಬೇಕು. ಇದಕ್ಕೆ ಪ್ರಯೋಗಾಲಯದ ದತ್ತಾಂಶ/ಕ್ಲಿನಿಕಲ್‌ ಪರೀಕ್ಷೆ ಪೂರಕವಾಗಿರಬೇಕು. ಇಂತಹ ಯಾವುದೇ ಅಂಶವಿಲ್ಲದಿದ್ದರೂ ನಿರ್ದಿಷ್ಟ ಗುರಿ ಇಟ್ಟುಕೊಂಡಿರುವ ಪಾರ್ಕ್‌ಗೆ ಬೀಗ ಹಾಕಲು ಮಾಡಿರುವ ಆದೇಶ ರದ್ದುಪಡಿಸಬೇಕು ಎಂದು ಸಂಸ್ಥೆ ಕೋರಿದೆ.