ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅನಾರೋಗ್ಯದ ಸಮಸ್ಯೆಯ ನಡುವೆಯೇ ನೆರವಿನ ನಿರೀಕ್ಷೆಗಾಗಿ ಕಾಯುತ್ತಿದ್ದ ನಾಗರಿಕರಿಂದ ಅಹವಾಲು ಸ್ವೀಕರಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಟ್ಟರು.ತೀವ್ರ ಜ್ವರದಿಂದ ಬಳಲುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದರೂ, ಕೈಗೆ ಡ್ರಿಪ್ಸ್ ಸಲೈನ್ ಸೂಜಿ ಹಾಕಿಕೊಂಡೇ ಶಿವಾಜಿನಗರದ ಆರ್‌ಬಿಎಎನ್ ಎಂಎಸ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಆಗಮಿಸಿ ಶಿವಾಜಿನಗರ, ಹೆಬ್ಬಾಳ ಹಾಗೂ ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳ ಜನರ ಅಹವಾಲು ಸ್ವೀಕರಿದರು.
ಟ್ಯಾನರಿ ರಸ್ತೆಯಲ್ಲಿ ಜ್ಯೋತಿ ಸೇವಾ ಅಂಧ ಮಕ್ಕಳ ಶಾಲೆ ನಡೆಸುತ್ತಿರುವ ಶ್ವೇತಾ ಅವರು ಅಂಧ ಮಕ್ಕಳ ಶಾಲೆಗೆ ಬಿಬಿಎಂಪಿ ಅಧಿಕಾರಿಗಳು ವಾಣಿಜ್ಯ ತೆರಿಗೆ ವಿಧಿಸಿದ್ದಾರೆ. ರಿಯಾಯಿತಿ ನೀಡುವಂತೆ ಮನವಿ ಮಾಡಿದರು. ಸ್ಪಂದಿಸಿದ ಡಿಸಿಎಂ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ನಿರ್ದೇಶಿಸಿದರು.ಶಿವಾಜಿನಗರದ ಅಲೋಷಿಯಸ್ ಶಾಲೆಯಲ್ಲಿ ಮಗ ಓದುತ್ತಿದ್ದು, ಶಾಲಾ ಫೀಜ್ ಕಟ್ಟುವ ಶಕ್ತಿ ಇಲ್ಲ ಎಂದು ಭವ್ಯಾ ಅವರು ಮನವಿ ಮಾಡಿದರು. ಕೂಡಲೇ ಸಮಸ್ಯೆ ಪರಿಹಾರ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಮಗನನ್ನು ಚೆನ್ನಾಗಿ ಓದಿಸುವಂತೆ ಭವ್ಯಾ ಅವರಿಗೆ ತಿಳಿಸಿದರು.
ಕಳೆದ 15 ವರ್ಷಗಳಿಂದ ಬಿಬಿಎಂಪಿ ಪೂರ್ವ ವಲಯದ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ, ನಮ್ಮನ್ನು ಕಾಯಂ ಮಾಡಿ ಎಂದು ಶ್ರೀದೇವಿ ಮತ್ತು ಜ್ಯೋತಿ ಮನವಿ ಮಾಡಿದರು. ಎಸ್‌ಬಿಐನಲ್ಲಿ ಮಗನಿಗೆ ಅಟೆಂಡರ್ ಕೆಲಸ ಕೊಡಿಸಿ ಎಂದು ಭಾರತಿನಗರದ ಚಂದ್ರಶೇಖರಯ್ಯ ಮನವಿ ಸಲ್ಲಿಸಿದರು. ಕಾಲಕಾಲಕ್ಕೆ ವಾರ್ಡ್ ಕಮಿಟಿ ಸಭೆ ನಡೆಸಬೇಕು ಎಂದು ಎಚ್ಎಂಟಿ ಲೇಔಟಿನ ಜಗನ್ನಾಥರಾವ್ ಮನವಿ ಸಲ್ಲಿಸಿದರು. ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಮನೆ ನೀಡಿ, ಬೆಂಗಳೂರಿಗೆ ಬಂದು 50 ವರ್ಷವಾಯಿತು ಎಂದು ಶಿವಾಜಿನಗರದ ಶಂಶುಲ್ ಅಹವಾಲು ನೀಡಿದರು.ಬಿಬಿಎಂಪಿಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ಕೋವಿಡ್ ಬಂದ ಕಾರಣ ಕೆಲಸಕ್ಕೆ ರಜೆ ಹಾಕಬೇಕಾಯಿತು. ಕೋವಿಡ್ ವಾಸಿಯಾದ ಮೇಲೆ ನನ್ನನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ ಎಂದು ಪುಲಕೇಶಿನಗರದ ರಾಜೇಶ್ ದೂರು ನೀಡಿದರು.
ನೀರಿನ ಬಿಲ್ ₹7-8 ಸಾವಿರ ಬರುತ್ತಿದೆ ಎಂದು ಶಿವಾಜಿನಗರದ ಕಾಮರಾಜ ರಸ್ತೆಯ ಜ್ಞಾನೇಶ್ವರ ದೂರು ಸಲ್ಲಿಸಿದರು. ಅಶ್ಚರ್ಯಗೊಂಡ ಉಪ ಮುಖ್ಯಮಂತ್ರಿಗಳು ಪರಿಶೀಲನೆ ಮಾಡುವಂತೆ ಜಲಮಂಡಳಿಯ ಅಧಿಕಾರಿಗಳಿ ನಿರ್ದೇಶಿಸಿದರು.ಸ್ಥಳೀಯ ಶಾಸಕರಾದ ಭೈರತಿ ಸುರೇಶ್, ರಿಜ್ವಾನ್ ಹರ್ಷದ್, ಎ.ಸಿ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಂ.ನಾಗರಾಜು, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.ಎಲ್ಲರ ಸಮಸ್ಯೆ ಪರಿಹಾರ: ಡಿಸಿಎಂ ಭರವಸೆ
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರ ಜನ ನನ್ನನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಎಲ್ಲೂ ನ್ಯಾಯ ಸಿಗದಿದ್ದಾಗ ಮಾತ್ರ ಜನರು ರಾಜಕಾರಣಿಗಳನ್ನು ಹುಡುಕಿಕೊಂಡು ಬರುತ್ತಾರೆ. ಈ ಹಿಂದೆ ಕ್ಷೇತ್ರದ ಹಳ್ಳಿಗಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಜನರ ಸಮಸ್ಯೆ ಆಲಿಸುತ್ತಿದ್ದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಗೂ ಜನರ ಮಧ್ಯೆ ಹೋಗಿ ಅವರ ಸಮಸ್ಯೆ ಆಲಿಸಲು ಸೂಚಿಸಿದ್ದಾರೆ. ಉತ್ತಮ ಅಧಿಕಾರಿಗಳ ತಂಡವಿದೆ. ಸುಮಾರು 200-300 ಅಧಿಕಾರಿಗಳು ಇಲ್ಲಿ ಬಂದು ನಿಮ್ಮ ಸಮಸ್ಯೆ ಆಲಿಸುತ್ತಿದ್ದೇವೆ. ಇದರಿಂದ ಜನಪರ ಆಡಳಿತಕ್ಕೆ ಅನುಕೂಲವಾಗಲಿದೆ ಎಂದರು.ಮೂರು ಆಪ್‌ಗಳ ಅನಾವರಣಹಸಿರು ರಕ್ಷಕ, ಉದ್ಯಾನ ಮಿತ್ರ ಮತ್ತು ಕೆರೆ ಮಿತ್ರ ಆ್ಯಪ್‌ಗಳನ್ನು ಡಿ.ಕೆ.ಶಿವಕುಮಾರ್ ಅನಾವರಣ ಮಾಡಿದರು.
ನಗರದಲ್ಲಿ ಹಸಿರು ಹೆಚ್ಚಿಸಲು ಶಾಲಾ ಮಕ್ಕಳೇ ಗಿಡ ಬೆಳೆಸುವ ಯೋಜನೆ ಇದಾಗಿದೆ. 2023-24ನೇ ಸಾಲಿನಲ್ಲಿ 224 ಶಾಲಾ-ಕಾಲೇಜುಗಳ ಜತೆ ಒಡಂಬಡಿಕೆ ಮಾಡಿಕೊಂಡು, 52,015 ಮಕ್ಕಳಿಂದ 1 ಲಕ್ಷ ಗಿಡಗಳನ್ನು ನೆಡಲಾಗಿದೆ. 3 ವರ್ಷಗಳ ಕಾಲ ಗಿಡವನ್ನು ಯಶಸ್ವಿಯಾಗಿ ಬೆಳೆಸಿದ ವಿದ್ಯಾರ್ಥಿಗಳಿಗೆ ‘ಹಸಿರು ರಕ್ಷಕ’ ಪ್ರಮಾಣ ನೀಡಲಾಗುತ್ತದೆ.ಉದ್ಯಾನ ಮಿತ್ರ ಯೋಜನೆ ಮೂಲಕ ನಗರದ ಉದ್ಯಾನವನಗಳ ನಿರ್ವಹಣೆಯನ್ನು ಸ್ಥಳೀಯ ಜನರಿಗೆ ನೀಡುವ ನಿರ್ಧಾರ ಮಾಡಲಾಗಿದೆ. ನಗರದಲ್ಲಿ 1200 ಉದ್ಯಾನವನಗಳಿದ್ದು, ಇವುಗಳನ್ನು ಜನರೇ ನಿರ್ವಹಣೆ ಮಾಡುವಂತೆ ಪ್ರೇರೇಪಿಸಲಾಗುತ್ತದೆ.