ಸುಶಿಕ್ಷಿತರು ತಪ್ಪು ಮಾಡಿದರೆ ಶಿಕ್ಷಣದ ಮೌಲ್ಯ ಕಡಿಮೆ: ಮಂಕಾಳ ವೈದ್ಯ

| Published : Jan 07 2024, 01:30 AM IST / Updated: Jan 07 2024, 05:05 PM IST

ಸುಶಿಕ್ಷಿತರು ತಪ್ಪು ಮಾಡಿದರೆ ಶಿಕ್ಷಣದ ಮೌಲ್ಯ ಕಡಿಮೆ: ಮಂಕಾಳ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸುಶಿಕ್ಷಿತರು ತಪ್ಪು ಮಾಡಿದರೆ ಶಿಕ್ಷಣದ ಮೌಲ್ಯ ಕಡಿಮೆಯಾಗುತ್ತದೆ. ಅಂತಹವರು ಉನ್ನತ ಹುದ್ದೆ ಏರಿದರು ಪ್ರಯೋಜನವಿಲ್ಲ. ಶಿಕ್ಷಣದ ಜತೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯ ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು..

ಹೊನ್ನಾವರ: ಸುಶಿಕ್ಷಿತರು ತಪ್ಪು ಮಾಡಿದರೆ ಶಿಕ್ಷಣದ ಮೌಲ್ಯ ಕಡಿಮೆಯಾಗುತ್ತದೆ. ಅಂತಹವರು ಉನ್ನತ ಹುದ್ದೆ ಏರಿದರು ಪ್ರಯೋಜನವಿಲ್ಲ. ಶಿಕ್ಷಣದ ಜತೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯ ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು.

ತಾಲೂಕಿನ ಗೇರುಸೊಪ್ಪಾ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಶಿಲನ್ಯಾಸ, ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.ಅಧಿಕಾರ, ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಬೇಕು. ಅದು ಶಾಶ್ವತವಾಗಿರುತ್ತದೆ. ಒಳ್ಳೆಯ ಕೆಲಸ ಮಾಡಿದವರು ಯಾವ ಪಕ್ಷ ಅಥವಾ ವ್ಯಕ್ತಿ ಇರಲಿ ಅವರನ್ನು ಸ್ಮರಿಸಿ ಅಭಿನಂದಿಸಲೇಬೇಕು. 

ಶಿಕ್ಷಣಕ್ಕೆ ಕೊಡುಗೆ ನೀಡುವುದು ಎಲ್ಲಕ್ಕಿಂತ ಮಿಗಿಲಾದದ್ದು ಎಂದ ಅವರು, ಅಂದು ಶಾಸಕರಾಗಿದ್ದ ಶಿವಾನಂದ ನಾಯ್ಕರು ಶಾಲೆ ಮಂಜೂರು ಮಾಡಿಸಿರುವ ಬಗ್ಗೆ ಸ್ಮರಿಸಿ ಅಭಿನಂದಿಸಿದರು.ಶಾಲೆಯೆಂಬ ದೇವಸ್ಥಾನದಲ್ಲಿ ಕೊರತೆ ಇರಬಾರದು. ಯಾವ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಶಾಲೆಯಲ್ಲಿ ರಾಜಕಾರಣ ನಡೆಯಬಾರದು ಎಂದ ಅವರು, ನನ್ನ ಕ್ಷೇತ್ರದಲ್ಲಿ ಎಲ್ಲಿಯೂ ಶಿಕ್ಷಣಕ್ಕೆ ಕೊರತೆಯಾಗದಂತೆ ನೋಡಿಕೊಂಡಿದ್ದೇನೆ ಎಂದರು.

ಸ್ಮಾರ್ಟ್‌ ಕ್ಲಾಸ್ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ, ಪ್ರತಿ ಮಗು ಶಿಕ್ಷಣ ಹೊಂದಿದಾಗ ದೇಶ ಪ್ರಗತಿ ಸಾಧಿಸಲು ಸಾಧ್ಯ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಿಕ್ಷಣದ ಉನ್ನತಿಗಾಗಿ ಹಲವು ಕಾರ್ಯಕ್ರಮ ನೀಡುತ್ತಿವೆ. ಆದರು ಸಹ ಇಂದು ಕೇವಲ 78% ಮಾತ್ರ ಶಿಕ್ಷಣವಂತರಾಗಿದ್ದೇವೆ. ಸ್ವಾತಂತ್ರ್ಯ ನಂತರವೂ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆ. 

ದೇಶದ ಆರ್ಥಿಕ ಭದ್ರತೆ, ಅಭಿವೃದ್ಧಿ, ಗಾಂಧೀಜಿ ಕನಸು ಪರಿಪೂರ್ಣವಾಗಲು, ನೆಮ್ಮದಿ ಬದುಕು ಕಾಣಲು ಪರಿಪೂರ್ಣ ಶಿಕ್ಷಣ ಹೊಂದುವ ಅವಶ್ಯಕತೆ ಇದೆ ಎಂದು ಹೇಳಿದರು.ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಶಾಲೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಅನೇಕ ಹುದ್ದೆ ಅಲಂಕರಿಸಿ ಪ್ರೌಢಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

ಇದೇ ವೇಳೆ ಶಾಲೆಯಲ್ಲಿ ಕಲಿತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರು, ಗ್ರಾಮದ ಸಾಧಕರು, ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಹೋತ್ಸವದ ಬೆಳ್ಳಿ ಬೆಡಗು ಸ್ಮರಣ ಸಂಚಿಕೆಯನ್ನು ಸಚಿವ ಮಂಕಾಳ ವೈದ್ಯ ಬಿಡುಗಡೆಗೊಳಿಸಿದರು.ಗ್ರಾಪಂ ಅಧ್ಯಕ್ಷೆ ಸುನಿತಾ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಸುರೇಶ ನಾಯ್ಕ, ಬಿಇಒ ಜಿ.ಎಸ್. ನಾಯ್ಕ, ಜಿಪಂ ಮಾಜಿ ಅಧ್ಯಕ್ಷ ಆರ್.ಎಸ್. ರಾಯ್ಕರ, ರಜತ ಮಹೋತ್ಸವ ಸಮಿತಿ ಕೋಶಾಧ್ಯಕ್ಷ ಮಂಜುನಾಥ ನಾಯ್ಕ, ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಎನ್. ಭಟ್, ಜಿಪಂ ಮಾಜಿ ಸದಸ್ಯೆ ಪುಷ್ಪಾ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ಮಹಿಮೆ ಗ್ರಾಪಂ ಅಧ್ಯಕ್ಷ ಗಣೇಶ ನಾಯ್ಕ, ಕುದ್ರಿಗಿ ಗ್ರಾಪಂ ಅಧ್ಯಕ್ಷ ಮಹಮ್ಮದ್ ಫೈಸಲ್ ಭಾವಾಪಕ್ಕಿ, ಗ್ರಾಪಂ ಸದಸ್ಯ ಮಹೇಶ ನಾಯ್ಕ ಉಪಸ್ಥಿತರಿದ್ದರು.

 ವಸಂತ ಶೇಟ್ ವರದಿ ವಾಚಿಸಿದರು. ಮುಖ್ಯಾಧ್ಯಾಪಕಿ ಅನ್ನಪೂರ್ಣ ನಾಯಕ ಸ್ವಾಗತಿಸಿದರು. ಯುವಜನ ಕ್ರೀಡಾಧಿಕಾರಿ ಸುಧೀಶ ನಾಯ್ಕ ನಿರ್ವಹಿಸಿದರು. ಸಚಿವರು ಹಾಗೂ ಅತಿಥಿಗಳನ್ನು ಚಂಡೆವಾದನ, ಪೂರ್ಣಕುಂಭದ ಮೂಲಕ ವೇದಿಕೆಗೆ ಸ್ವಾಗತಿಸಲಾಯಿತು.