ಸಾರಾಂಶ
ಕಾರಟಗಿ: ಇಲ್ಲಿನ ನವಲಿ ವೃತ್ತದ ಹಳೆಯ ತಹಸೀಲ್ದಾರ್ ಕಚೇರಿ ಆವರಣ ಸುತ್ತಲು ಮುಖ್ಯರಸ್ತೆ ಬದಿಯಲ್ಲಿರುವ ಗೂಡಂಗಡಿಗಳು ಮತ್ತು ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಹೇಳಿದರು.
ನವಲಿ ವೃತ್ತದಲ್ಲಿ ನೂತನ ಬಸ್ ನಿಲ್ದಾಣದ ಎದುರು ಇರುವ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ವೇಳೆ ಈ ವಿಷಯ ತಿಳಿಸಿದರು. ಹಳೇ ತಹಸೀಲ್ ಕಚೇರಿ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸರ್ವೇ ಮಾಡಿದ ಅಧಿಕಾರಿಗಳ ತಂಡ ಆನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನೂತನ ಬಸ್ ನಿಲ್ದಾಣದ ಎದುರು ಈ ಮೊದಲಿದ್ದ ಹಳೇ ಬಸ್ ಶೆಲ್ಟರ್ (ಬೂದಗುಂಪಾ ರಸ್ತೆಯಿಂದ ಆರಂಭಿಸಿ) ಹಳೇ ತೆಹಸೀಲ್ ಕಚೇರಿಯೊಳಗೆ ಹೋಗುವ ಗೇಟ್ ವರೆಗೆ ಮತ್ತು ಅಲ್ಲಿಂದ ಈಡಿಗೇರ ಯಮನಪ್ಪನವರ ಬಿಲ್ಡಿಂಗ್ ವರೆಗೂ ರಸ್ತೆ ಬದಿಯಲ್ಲಿರುವ ಎಲ್ಲ ಗೂಡಂಗಡಿಗಳನ್ನು, ಶೆಡ್‌ಗಳನ್ನು, ತಳ್ಳು ಬಂಡಿಗಳನ್ನು ಸಂಪೂರ್ಣ ತೆರವುಗೊಳಿಸಲಾಗುವುದು ಎಂದರು.ಅಲ್ಲಿನ ವ್ಯಾಪಾರಿಗಳಿಗೆ, ಮಾಲೀಕರಿಗೆ ಈಗಾಗಲೇ ಮೌಖಿಕ ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಿ ತೆರವು ಕಾರ್ಯ ಆರಂಭಿಸಲಾಗುವುದು. ನೂತನ ಬಸ್ ನಿಲ್ದಾಣ ಪ್ರಾರಂಭವಾದಾಗಿನಿಂದ ಮುಖ್ಯ ರಸ್ತೆಯಲ್ಲಿ ಜನಸಂದಣಿ ಹೆಚ್ಚಿದ್ದು, ಇದರಿಂದ ವಾಹನಗಳ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ ಎನ್ನುವ ದೂರುಗಳು ಇವೆ. ಜಿಲ್ಲಾಡಳಿತದ ಆದೇಶದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕೂಡಾ ಈ ಗೂಡಂಗಡಿಗಳ ತೆರವು ಕಾರ್ಯಾಚರಣೆಯನ್ನು ಯೋಜಿಸಲಾಗಿದೆ. ಈ ಮೊದಲು ನೂತನ ಬಸ್ ನಿಲ್ದಾಣದ ಪಕ್ಕದ ಕರೆಯಪ್ಪ ತಾತನ ದೇವಸ್ಥಾನದ ಬಳಿ ಇಂದಿರಾ ಕ್ಯಾಂಟೀನ್‌ಗೆ ಸ್ಥಳ ನಿಗದಿಪಡಿಸಲಾಗಿತ್ತು. ಆ ಸ್ಥಳ ಕಿರಿದಾಗುವ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟು ಸಚಿವರ ಆದೇಶದನ್ವಯ ಹಳೆ ತಹಸೀಲ್ ಕಚೇರಿಯ ಆವರಣದ ಸ್ಥಳ ನಿಗದಿ ಮಾಡಿ ಸರ್ವೇ ಕೂಡ ನಡೆಸಲಾಗಿದೆ. ಶೀಘ್ರದಲ್ಲಿಯೇ ಕಟ್ಟಡದ ನೀಲನಕ್ಷೆ ಸಿದ್ಧಪಡಿಸಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.