ಪ್ರಜ್ವಲ್‌ ಬಂಧನ ಆಗ್ರಹಿಸಿ ಮೇ 30 ರಂದು ಬೃಹತ್‌ ಧರಣಿ: ಜನಪರ ಚಳವಳಿ ಒಕ್ಕೂಟದ ಮುಖಂಡ ಧರ್ಮೇಶ್

| Published : May 25 2024, 12:55 AM IST

ಪ್ರಜ್ವಲ್‌ ಬಂಧನ ಆಗ್ರಹಿಸಿ ಮೇ 30 ರಂದು ಬೃಹತ್‌ ಧರಣಿ: ಜನಪರ ಚಳವಳಿ ಒಕ್ಕೂಟದ ಮುಖಂಡ ಧರ್ಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಪ್ರಜ್ವಲ್‌ ಬಂಧನಕ್ಕೆ ಆಗ್ರಹಿಸಿ ಮೇ ೩೦ ರಂದು ಹಾಸನದಲ್ಲಿ ನಡೆಯುತ್ತಿರುವ ಬೃಹತ್‌ ಪ್ರತಿಭಟನೆಯಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನರು ರಾಜ್ಯದ ವಿವಿಧ ಕಡೆಯಿಂದ ಆಗಮಿಸಲಿದ್ದಾರೆ ಎಂದು ಜನಪರ ಚಳವಳಿ ಒಕ್ಕೂಟದ ಮುಖಂಡ ಧರ್ಮೇಶ್ ತಿಳಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ ವಿವಿಧ ಭಾಗಗಳಿಂದ ೧೦ ಸಾವಿರ ಜನ ಭಾಗಿ ಸಾಧ್ಯತೆ । ಯಾವುದೇ ಕುಟುಂಬ-ರಾಜಕೀಯ ಪಕ್ಷದ ವಿರುದ್ಧ ಹೋರಾಟವಲ್ಲ

ಕನ್ನಡಪ್ರಭ ವಾರ್ತೆ ಹಾಸನ

ಪೆನ್‌ಡ್ರೈವ್‌ ರಾಸಲೀಲೆ ಪ್ರಕರಣದಲ್ಲಿ ಸಿಲುಕಿ ದೇಶ ಬಿಟ್ಟು ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ಬಂಧನಕ್ಕೆ ಆಗ್ರಹಿಸಿ ಮೇ ೩೦ ರಂದು ಹಾಸನದಲ್ಲಿ ನಡೆಯುತ್ತಿರುವ ಬೃಹತ್‌ ಪ್ರತಿಭಟನೆಯಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನರು ರಾಜ್ಯದ ವಿವಿಧ ಕಡೆಯಿಂದ ಆಗಮಿಸಲಿದ್ದಾರೆ. ನಮ್ಮ ಹೋರಾಟ ಯಾವುದೇ ಕುಟುಂಬದ ವಿರುದ್ಧವಾಗಲಿ ಅಥವಾ ರಾಜಕೀಯ ಪಕ್ಷದ ವಿರುದ್ಧವಾಗಲಿ ಅಲ್ಲ. ಇದು ಪ್ರಜ್ವಲ್ ಬಂಧನಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ಜನಪರ ಚಳವಳಿ ಒಕ್ಕೂಟದ ಮುಖಂಡ ಧರ್ಮೇಶ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ‘ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಮೇ ೩೦ ರಂದು ಹಾಸನ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಜನಪರ ಚಳುವಳಿಗಳ ಒಕ್ಕೂಟದಿಂದ ನಡೆಯಲಿರುವ ಹೋರಾಟದ ಹಿನ್ನೆಲೆ ಹೋರಾಟದ ಪೋಸ್ಟರ್ ಅನ್ನು ವಿವಿಧ ಸಂಘಟನೆಯ ಮುಖಂಡರು ಬಿಡುಗಡೆಗೊಳಿಸಿದರು. ಮೇ ೩೦ ರಂದು ಮಹಿಳೆಯರ ಘನತೆ ಉಳಿಸಿ, ಹಾಸನದ ಗೌರವ ಕಾಪಾಡಲು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಪ್ರಗತಿಪರರು ಸೇರಿ ಸಹಸ್ರಾರು ಜನರು ಭಾಗಿಯಾಗಲಿದ್ದಾರೆ. ಪ್ರಜ್ವಲ್ ಬಂಧಿಸಿ ಶಿಕ್ಷೆ ವಿಧಿಸಬೇಕು, ವೀಡಿಯೋ ಹಂಚಿಕೆಯ ಷಡ್ಯಂತ್ರ ಮಾಡಿದವರ ವಿರುದ್ದವು ಕ್ರಮ ಆಗಬೇಕು’ ಎಂದು ಒತ್ತಾಯಿಸಿದರು.

‘ದಲಿತರು, ಮಹಿಳೆಯರು, ಸಾಹಿತಿಗಳು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಈ ಹೋರಾಟದ ದಿಕ್ಕು ತಪ್ಪಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಬರ್ತಾರೆ. ಇದು ಸರ್ಕಾರಿ ಪ್ರಯೋಜಿತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳುತ್ತಾರೆ. ಇದು ಬೇಜವಾಬ್ದಾರಿ ಹೇಳಿಕೆಯಾಗಿದೆ’ ಎಂದು ಹೇಳಿದರು.

‘ಪ್ರಜ್ವಲ್ ಬಂಧಿಸುವಲ್ಲಿ ಕೇಂದ್ರ ರಾಜ್ಯ ಸರ್ಕಾರ ಎರಡೂ ವಿಫಲವಾಗಿದೆ. ನಾವು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡುತ್ತಿರುವಾಗ ಇದು ಪ್ರಾಯೋಜಿತ ಹೋರಾಟ ಹೇಗೆ ಆಗಲಿದೆ? ಈ ಹೋರಾಟಕ್ಕೆ ಸಾವಿರಾರು ಸಂಖ್ಯೆಯ ಮಹಿಳೆಯರೇ ಬರ್ತಾರೆ. ಏನಾದರೂ ತೊಂದರೆ ಆದರೆ ಅವರೇ ಹೊಣೆಗಾರರಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಈ ಪ್ರಕರಣದಲ್ಲಿ ಯಾರ ಹೆಸರಿದೆ ಅವರನ್ನು ನಾವು ವಿರೋಧಿಸುತ್ತೇವೆ. ದೇವೇಗೌಡರು ಈಗ ಒಂದು ಪತ್ರ ಬರೆದಿದ್ದಾರೆ. ಇದನ್ನು ಅವರು ತಿಂಗಳ ಮೊದಲೇ ಮಾಡಬೇಕಿತ್ತು. ದೇವೇಗೌಡರು ಈ ಜಿಲ್ಲೆಯ ಮತದಾರರನ್ನು ಬಹಿರಂಗವಾಗಿ ಕ್ಷಮೆ ಕೇಳಬೇಕು. ಜತೆಗೆ ರೇವಣ್ಣ ಅವರು ಕೂಡ ಜನರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್ ಮಾತನಾಡಿ, ‘ಭವಾನಿ ರೇವಣ್ಣ ಅವರೇ ಪ್ರಜ್ವಲ್‌ನಿಗೆ ಕೂಡಲೇ ಬರುವುದಕ್ಕೆ ಹೇಳಿ. ನಾವು ಹೋರಾಟ ಮಾಡಲು ತೀರ್ಮಾನ ಮಾಡಿದರೆ ಅವರ ವಿರುದ್ಧ ಇವರ ವಿರುದ್ಧ ಮಾತಾಡಬೇಡಿ ಅಂತಾರೆ. ಸಂತ್ರಸ್ತ ಮಹಿಳೆಯರ ನೋವು ನಿಮಗೆ ಗೊತ್ತಿಲ್ಲವೇ! ಮೇ ೩೦ರಂದು ನಾವು ಶಾಂತಿಯುತ ಹೋರಾಟ ಮಾಡಲಿದ್ದು ಸಾದ್ಯವಾದರೆ ಸಹಕಾರ ಮಾಡಿ, ಇಲ್ಲವೇ ಸುಮ್ಮನೇ ಇರಿ’ ಎಂದು ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಹೆಸರು ಹೇಳದೆ ಒತ್ತಾಯಿಸಿದರು.

ಜನಪರ ಚಳವಳಿ ಮುಖಂಡ ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ, ಕರ್ನಾಟಕ ರಾಜ್ಯ ಜನಪರ ಚಳುವಳಿ ಒಕ್ಕೂಟದ ಎಂ. ಸೋಮಶೇಖರ್, ವಿಜಯಕುಮಾರ್, ರಾಜಶೇಖರ್, ಅಬ್ದೂಲ್ ಸಮಾದ್ ಇದ್ದರು.