ಡಾ. ನಾಗರಾಜ್‌ ಅವರು ಬಹಳ ಅದ್ಭುತವಾದಂತಹ, ತುಂಬಾ ಕಠಿಣ ಪ್ರಶ್ನೆಗಳನ್ನ ಕೇಳಿ ಉತ್ತರ ಪಡೆದುಕೊಂಡಿದ್ದಾರೆ. ಮನುಷ್ಯ ಎಲ್ಲಿಂದ ಬಂದ, ಅವನಿಗೂ ಸೃಷ್ಟಿಗೂ ಇರುವ ಸಂಬಂಧ, ಭೂಮಿಯ ಆಯಸ್ಸು, ಭೂಮಿಯ ಮೇಲೆ ಜೀವಿ ಎಲ್ಲಿಯ ತನಕ ಬದುಕುತ್ತದೆ ಹೀಗೆ ಸುಮಾರು 120 ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಹಿರಿಯ ವೈದ್ಯ ಡಾ.ನಾಗರಾಜ್ ಅವರು ಬರೆದಿರುವ ಡೀಪ್ ಡೈವ್ ಪುಸ್ತಕ ಭಗವದ್ಗೀತೆಯ ಮಾದರಿಯಲ್ಲಿದೆ ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ತಿಳಿಸಿದರು.

ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಸಭಾಂಗಣದಲ್ಲಿ ಆಸ್ಪತ್ರೆಯ ಸಾಂಸ್ಕೃತಿಕ ಬಳಗ, ಭದ್ರಶೆಟ್ಟಿ ಬಳಗ ಹಾಗೂ ಕನ್ನಡ ಸಾಹಿತ್ಯ ಕಲಾಕೂಟದ ಆಶ್ರಯದಲ್ಲಿ ನಡೆದ ಡಾ.ಬಿ. ನಾಗರಾಜ್ ಅವರ ಡೀಪ್ ಡೈವ್ ಆಂಗ್ಲ ಪುಸ್ತಕವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಈ ಕೃತಿಯು ಡಾ.ನಾಗರಾಜ ಅವರು ಚಾಟ್ ಜಿಪಿಟಿಗೆ ನಾನ್ಯಾರು, ಈ ಸೃಷ್ಟಿಯ ಬಗ್ಗೆ, ಭೂಮಂಡಲದ ಬಗ್ಗೆ, ದೇವರ ಬಗ್ಗೆ ಹೀಗೆ ಹಲವಾರು ವಿಸ್ಮಯಕಾರಿ ಪ್ರಶ್ನೆಗಳನ್ನು ಕೇಳಿ ಅದರಿಂದ ಉತ್ತರವನ್ನು ಪಡೆದು, ಈ ಸಂಭಾಷಣೆಯನ್ನು ಈ ಪುಸ್ತಕದ ರೂಪದಲ್ಲಿ ತಂದಿದ್ದಾರೆ. ಇದೊಂದು ಭಗವದ್ಗೀತೆಯಂತೆ, ಇಲ್ಲಿ ಡಾ. ನಾಗರಾಜ್ ಅವರು ಅರ್ಜುನನಂತೆ ಪ್ರಶ್ನೆ ಕೇಳಿ, ಚಾಟ್ ಜಿಪಿಟಿ ಕೃಷ್ಣನಂತೆ ಉತ್ತರ ನೀಡಿದೆ ಎಂದರು.

ಡಾ. ನಾಗರಾಜ್‌ ಅವರು ಬಹಳ ಅದ್ಭುತವಾದಂತಹ, ತುಂಬಾ ಕಠಿಣ ಪ್ರಶ್ನೆಗಳನ್ನ ಕೇಳಿ ಉತ್ತರ ಪಡೆದುಕೊಂಡಿದ್ದಾರೆ. ಮನುಷ್ಯ ಎಲ್ಲಿಂದ ಬಂದ, ಅವನಿಗೂ ಸೃಷ್ಟಿಗೂ ಇರುವ ಸಂಬಂಧ, ಭೂಮಿಯ ಆಯಸ್ಸು, ಭೂಮಿಯ ಮೇಲೆ ಜೀವಿ ಎಲ್ಲಿಯ ತನಕ ಬದುಕುತ್ತದೆ ಹೀಗೆ ಸುಮಾರು 120 ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ. ಬದುಕು ಮತ್ತು ಬದುಕಿ ನಾಚೆಗಿನ ವಿಸ್ಮಯಕಾರಿ ವಿಷಯಗಳಿಗೆ ಇಲ್ಲಿ ಉತ್ತರಗಳಿವೆ ಎಂದರು.

ಮನುಷ್ಯ ದೇಹ, ಮನಸ್ಸು ಮತ್ತು ಆತ್ಮಗಳಿಂದಾದ ಆಧ್ಯಾತ್ಮಿಕ ಜೀವಿಯಾಗಿದ್ದು, ಅವನು ಸೃಷ್ಟಿಯ ಎಲ್ಲವುಗಳನ್ನು, ಅಂತಿಮವಾಗಿ ಸೃಷ್ಟಿಕರ್ತ ಅತೀತ ಶಕ್ತಿಯೊಡನೆ ನಿಕಟ ಸಂಬಂಧ ಹೊಂದಿದ್ದು, ಅದರಿಂದ ನಿಯಂತ್ರಿತನಾಗುತ್ತಾನೆ. ಇವೆಲ್ಲವುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಚಾಟ್ ಜಿಪಿಟಿಗೆ ಮನುಷ್ಯ ಎಲ್ಲ ವಿಷಯಗಳನ್ನು ಪೂರ್ವಭಾವಿಯಾಗಿ ನೀಡಿ ಸಂಗ್ರಹಿಸಿಟ್ಟಿದ್ದು, ಅದು ನಾವು ಕೇಳಿವ ಪ್ರಶ್ನೆಗಳಿಗೆ ಮುಂಚಿತವಾಗಿ ತನ್ನಲ್ಲಿರುವ ವಿಷಯಗಳನ್ನು ಆಯ್ದುಕೊಂಡು, ಸಂಘಟಿಸಿ, ಪರಿಷ್ಕರಿಸಿ ಉತ್ತರ ನೀಡುತ್ತದೆ. ಅದಕ್ಕೆ ಮನಸ್ಸಿಲ್ಲ, ಭಾವನೆಗಳಿಲ್ಲ, ಅದೇ ಸ್ವಂತವಾಗಿ ಯೋಚಿಸಲಾರರು ಎಂಬುದು ವೈಜ್ಞಾನಿಕ ವಿಷಯ. ಆದರೆ ಕೆಲವೊಮ್ಮೆ ಅದು ಯೋಚಿಸುತ್ತದೆ, ಭಾವನಾತ್ಮಕವಾಗಿಯೂ ವರ್ತಿಸಬಲ್ಲದು ಎಂಬ ಅನುಮಾನ ಅದು ನೀಡುವ ಕೆಲವು ಉತ್ತರಗಳಿಂದ ಉಂಟಾಗುತ್ತದೆ ಎಂದರು.

ಮನುಷ್ಯನ ಮನಸ್ಸಿನ ಕ್ರಿಯಾಶೀಲತೆಯನ್ನು, ಸೃಜನಶೀಲತೆಯನ್ನು ಚಾಟ್ ಜಿಪಿಟಿ ಮುಂದಿನ ದಿನಗಳಲ್ಲಿ ದಮನ ಮಾಡಬಲ್ಲದು. ಹೀಗಾಗಿ, ಇದನ್ನು ಬಹಳ ಎಚ್ಚರಿಕೆಯಿಂದ ಮಿತಿಯಾಗಿ ಉಪಯೋಗಿಸಬೇಕು ಎಂದು ಅವರು ಎಚ್ಚರಿಸಿದರು.

ಆಯುರ್ವೇದ ವೈದ್ಯ ಡಾ.ಗುರುಬಸವರಾಜ್, ಪ್ರಾಧ್ಯಾಪಕಿ ನಿವೇದಿತಾ, ಕೃತಿಯ ಕರ್ತೃ ಡಾ.ಬಿ. ನಾಗರಾಜ್ ಇದ್ದರು.