ಕನ್ನಡಪ್ರಭ ವಾರ್ತೆ ಮೈಸೂರು

ಯಶಸ್ಸು ಎನ್ನುವುದು ಒಂದು ದಿನದಲ್ಲಿ ದೊರೆಯುವ ಸಾಧನೆಯಲ್ಲ. ಸ್ಪಷ್ಟ ಗುರಿ, ನಿರಂತರ ಪರಿಶ್ರಮ, ಶಿಸ್ತು, ಸಮಯದ ಸದ್ಬಳಕೆ ಮತ್ತು ಆತ್ಮವಿಶ್ವಾಸದಿಂದ ಶೈಕ್ಷಣಿಕ ಜೀವನದಲ್ಲಿ ಸಾಧನೆ ಸಾಧ್ಯ ಎಂದು ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ತಿಳಿಸಿದರು.

ನಗರದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದ್ದು ಬೋರ್ಡ್ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ಸರಿಯಾದ ಮಾರ್ಗದರ್ಶನ ಬಹಳ ಮುಖ್ಯ ಎಂದರು.

ಸಾಧಕರಿಂದ ಅವರ ಅಧ್ಯಯನ ವಿಧಾನ, ಸಮಯ ನಿರ್ವಹಣೆ, ಪರೀಕ್ಷಾ ತಯಾರಿ ಹಾಗೂ ಯಶಸ್ಸಿನ ರಹಸ್ಯಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗೆ ದೊರತಿದೆ. ಪ್ರತಿ ವಿದ್ಯಾರ್ಥಿಯಲ್ಲಿಯೂ ಅಪಾರ ಸಾಮರ್ಥ್ಯ ಅಡಗಿದ್ದು ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿ ನಿರಂತರವಾಗಿ ಪ್ರಯತ್ನಿಸಿದರೆ ಯಶಸ್ಸು ಖಂಡಿತ ನಿಮ್ಮದಾಗುತ್ತದೆ ಎಂದು ಅವರು ಹೇಳಿದರು.

ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ. ಏಕಾಗ್ರತೆ, ಸಮಯದ ನಿರ್ವಹಣೆ, ದೇವತಾನುಗ್ರಹ , ತಂದೆ-ತಾಯಿ ಹಾಗೂ ಗುರು ಹಿರಿಯರಲ್ಲಿ ಗೌರವದ ಮನೋಭಾವ ವಿದ್ಯಾರ್ಥಿಗಳಲ್ಲಿ ಅತ್ಯವಶ್ಯಕ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಸಂಸ್ಕೃತಿ, ಶಿಸ್ತು ಮತ್ತು ಶ್ರದ್ಧೆ ಎಂಬ ಬುನಾದಿಯ ಮೇಲೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸರಿಯಾದ ಯೋಚನೆ, ಯೋಜನೆ ಮತ್ತು ವೇಳಾಪಟ್ಟಿಯನ್ನು ತಯಾರಿಸಿ ಅದನ್ನು ಕಾರ್ಯರೂಪಕ್ಕೆ ತರಬೇಕು. ನಿಗದಿತ ಪಠ್ಯಪುಸ್ತಕ ಮತ್ತು ಪರಾಮರ್ಶನ ಪುಸ್ತಕಗಳನ್ನು ಓದಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.


ಈ ಸಂವಾದದಲ್ಲಿ ಸಾಧಕ ವಿದ್ಯಾರ್ಥಿಗಳಾದ ಸಾರಿಕಾ ಕೆ. ಭಾರದ್ವಾಜ್ (595), ಬಿ.ಎಸ್. ಸುದೀಪ್ತಾ (593), ಕೆ.ವಿ. ಅದ್ವೈತ್ (591), ಜನೆಟ್ ಮರಿಯಾ, ಸುರಭಿ ಎಸ್. ಭಟ್, ಆದಿತ್ಯ ಎಸ್. ಉಮಾದಿ (588), ಎಂ.ಎಸ್. ರೀತು (587) ಭಾಗವಹಿಸಿ, ಅಧ್ಯಯನ ವಿಧಾನ, ವೇಳಾಪಟ್ಟಿ ತಯಾರಿ, ಪರೀಕ್ಷೆಗಳ ಸಿದ್ಧತೆ, ಒತ್ತಡ ನಿರ್ವಹಣೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಿದರು.

ವಿದ್ಯಾರ್ಥಿಗಳಾದ ಕವನ ಮತ್ತು ಉತ್ಸಾ ಶ್ರೀನಾಥ್ ಪ್ರಾರ್ಥಿಸಿದರು. ತ್ರಿಶಾ ಸ್ವಾಗತಿಸಿದರು. ಆರ್ಯನ್ ವಂದಿಸಿದರು. ಚಿನ್ಮಯಿ ನಿರೂಪಿಸಿದರು.