ಬಸಪ್ಪನಪಾಳ್ಯದಲ್ಲಿ ಕಾಮಗಾರಿ ವಿಳಂಬ: ಖಂಡನೆ

| Published : May 23 2024, 01:03 AM IST

ಸಾರಾಂಶ

ತಾಲೂಕಿನ ಬಸಪ್ಪನಪಾಳ್ಯ ಗ್ರಾಮದಲ್ಲಿ ಸಿಮೆಂಟ್ ಚರಂಡಿ, ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಗ್ರಾಮಸ್ಥರು ಕಾಮಗಾರಿ ಸ್ಥಳದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಬಸಪ್ಪನಪಾಳ್ಯ ಗ್ರಾಮದಲ್ಲಿ ಸಿಮೆಂಟ್ ಚರಂಡಿ, ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಗ್ರಾಮಸ್ಥರು ಕಾಮಗಾರಿ ಸ್ಥಳದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷರು, ಗ್ರಾಪಂ ಸದಸ್ಯ ಆರ್.ರೇವಣ್ಣ ಹಾಗೂ ಗ್ರಾಪಂ ಸದಸ್ಯ ಶಶಿರೇಖಾ ಭೋಜರಾಜು ಅವರ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷ, ಗ್ರಾಪಂ ಸದಸ್ಯ ಬಸಪ್ಪನಪಾಳ್ಯ ಆರ್.ರೇವಣ್ಣ ಮಾತನಾಡಿ, ನಮ್ಮ ಗ್ರಾಮದಲ್ಲಿ ನೀರಾವರಿ ಇಲಾಖೆ ಅನುದಾನದಲ್ಲಿ 2 ವರ್ಷಗಳಿಂದ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು 2021-2022 ನೇ ಸಾಲಿನಲ್ಲಿ ಕಾಮಗಾರಿಗೆ ಗುದ್ದಲಿಪೂಜೆ ಮಾಡಲಾಗಿದೆ. ಒಂದು ತಿಂಗಳ ಹಿಂದಷ್ಟೆ ಗುತ್ತಿಗೆದಾರ ಸಿದ್ದಿಕ್ ಜೆಸಿಬಿ ಮೂಲಕ ಚರಂಡಿ, ರಸ್ತೆ ನಿರ್ಮಾಣಕ್ಕಾಗಿ ಕಾಮಗಾರಿ ಪ್ರಾರಂಭಿಸಿದ್ದು, ಚರಂಡಿ ಕಾಮಗಾರಿ ಮಾತ್ರ ಭಾಗಶಃ ಆಗಿದ್ದು ಉಳಿದ ಕಡೆ ಹಳ್ಳತೆಗೆದು ಕಬ್ಬಿಣ ಕಟ್ಟಲಾಗಿದೆ. ಇದರಿಂದ ನೀರಿನ ಸಮಸ್ಯೆಯಾಗಿದ್ದು, ನಿವಾಸಿಗಳು ಒಡಾಡಲು ತುಂಬಾ ತೊಂದರೆ ಅನುಭವಿಸುವಂತಾಗಿ, ಒಂದು ಮಗು ಕೂಡ ಚರಂಡಿ ನಿರ್ಮಾಣಕ್ಕೆ ಕಟ್ಟಿರುವ ಕಬ್ಬಿಣದಿಂದ ಬಿದ್ದು ಗಾಯಗೊಂಡಿದೆ. ಹೀಗಾಗಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಗುತ್ತಿಗೆದಾರ ಚರಂಡಿ ಕಾಮಗಾರಿ ಪೂರ್ಣಗೊಳಿಸದೆ ಅಪೂರ್ಣ ಕಾಮಗಾರಿ ನಡೆಸಿ ಸೆಂಟ್ರಿಂಗ್ ಸಾಮಾಗ್ರಿಗಳನ್ನು ತುಂಬಿಕೊಂಡು ಬೇರೆಡೆ ಕೆಲಸವಿದೆ ಎಂದು ಹೋಗುತ್ತಿದ್ದರು ಅದನ್ನು ಈಗ ತಡೆಯಲಾಗಿದೆ. ಇದೇ ಗುತ್ತಿಗೆದಾರ ಆಲೂರು ಗ್ರಾಪಂ ವ್ಯಾಪ್ತಿಯ ಬಸಪ್ಪನಪಾಳ್ಯ, ಸರಗೂರು ಮೋಳೆ, ಮಲ್ಲೂಪುರ, ಆಲೂರು, ಕರಿಯನಕಟ್ಟೆ ಗ್ರಾಮಗಳಲ್ಲೂ ಕೂಡ ಕಾಮಗಾರಿ ಪೂರ್ಣಗೊಳಿಸಿಲ್ಲ. ಎಲ್ಲಕಡೆ ಅಪೂರ್ಣ ಕಾಮಗಾರಿ ನಡೆಸಿ ಜನರಿಗೆ ತೊಂದರೆ ಕೊಟ್ಟಿದ್ದಾರೆ. ಇಷ್ಟೆಲ್ಲಾ ತೊಂದರೆಯಾಗಿದ್ದರೂ ಯಾವ ಅಧಿಕಾರಿಯು ಇತ್ತ ತಿರುಗಿ ನೋಡಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಸಪ್ಪನಪಾಳ್ಯ ಗ್ರಾಮದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಸದಸ್ಯ ಶಿವಕುಮಾರ್, ಮುಖಂಡರಾದ ಶಿವಪ್ಪ, ನಟರಾಜು, ಮಹೇಶ್, ಹರ್ಷ, ಸೋಮಶೇಖರ್, ಸ್ವಾಮಿ, ರಾಮೇಗೌಡ, ಸೋಮಶೇಖರ, ಪುಷ್ಷಲತಾ, ಉಮಾದೇವಿ, ಶಿವಮ್ಮ ಇತರರು ಭಾಗವಹಿಸಿದ್ದರು.