ಎಕೆ ಎಡಿ ಅಳಿಸಿ ಮೂಲ ಜಾತಿಯ ಹೆಸರು ಬರೆಸಿ

| Published : Apr 28 2025, 12:46 AM IST

ಸಾರಾಂಶ

ದತ್ತಾಂಶ ಗಣತಿಯಲ್ಲಿ ಪ್ರತಿಯೊಬ್ಬರೂ ಅವರ ಮೂಲ ಜಾತಿ ಮಾದಿಗ, ಹೊಲೆಯ, ಕೊರಮ, ಕೊರಚ, ಭೋವಿ, ಲಂಬಾಣಿ, ಅಲೆಮಾರಿ ಹೀಗೆ ಅವರವರ ಮೂಲ ಜಾತಿಯ ಹೆಸರು ಯಾವುದೇ ಹಿಂಜರಿಕೆ ಇಲ್ಲದೆ ಬರೆಸಿ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸತತ ಮೂರು ದಶಕಗಳಿಗೂ ಹೆಚ್ಚು ಕಾಲ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹೋರಾಟಕ್ಕೆ ಫಲ ಸಿಕ್ಕಿ ಆಯೋಗ ರಚನೆಯಾದರೂ ಒಳ ಮೀಸಲಾತಿ ವೈಜ್ಞಾನಿಕ ಹಂಚಿಕೆ ಮಾತ್ರ ಮರೀಚಿಕೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನಮ್ಮ ರಾಜ್ಯ ನಾಗಮೋಹನ್ ದಾಸ್ ಆಯೋಗ ರಚಿಸಿ ಸತ್ಯ ಶೋಧನಾ ಕಾರ್ಯಕ್ಕೆ ದತ್ತಾಂಶ ಗಣತಿ ಮಾಡಲು ಎರಡು ತಿಂಗಳ ಗಡುವು ಪಡೆದುಕೊಂಡಿದೆ. ಈ ವೇಳೆ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಕೆ ಎಡಿ ಅಳಿಸಿ ತಮ್ಮ ಮೂಲ ಜಾತಿಯ ಹೆಸರು ಬರೆಸಿ ದತ್ತಾಂಶ ಸಂಗ್ರಹಕ್ಕೆ ಅನುವು ಮಾಡಲು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಸಂಸ ತಾಲೂಕು ಘಟಕ ಆಯೋಜಿಸಿದ್ದ ಸಭೆಯ ನಂತರ ಜಾಗೃತಿ ವಾಹನಕ್ಕೆ ಚಾಲನೆ ಹಾಗೂ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು ದತ್ತಾಂಶ ಗಣತಿಯಲ್ಲಿ ಪ್ರತಿಯೊಬ್ಬರೂ ಅವರ ಮೂಲ ಜಾತಿ ಮಾದಿಗ, ಹೊಲೆಯ, ಕೊರಮ, ಕೊರಚ, ಭೋವಿ, ಲಂಬಾಣಿ, ಅಲೆಮಾರಿ ಹೀಗೆ ಅವರವರ ಮೂಲ ಜಾತಿಯ ಹೆಸರು ಯಾವುದೇ ಹಿಂಜರಿಕೆ ಇಲ್ಲದೆ ಬರೆಸಿ ಎಂದು ಸಲಹೆ ನೀಡಿದರು.ಮೀಸಲಾತಿ ಎಂಬುದು ಕೆಲವರ ಪಾಲಾಗಿ ಕೆಲ ಪರಿಶಿಷ್ಟ ಜಾತಿಗೆ ಮಾತ್ರ ದೊರೆಯುವ ಕಾರಣ ಎಲ್ಲಾ 101 ಜಾತಿಗಳಿಗೂ ಮೀಸಲು ವೈಜ್ಞಾನಿಕವಾಗಿ ಜನಸಂಖ್ಯೆ ಆಧಾರವಾಗಿ ವಿತರಣೆಯಾಗಲಿ ಎಂಬುದು ದಲಿತ ಸಂಘರ್ಷ ಸಮಿತಿಯ ಉದ್ದೇಶವಾಗಿದೆ. ಒಳ ಜಾತಿ ಹೆಸರು ಹೇಳಲು ಹಿಂಜರಿಕೆ ಪಡುವ ಮಂದಿ ಇಂದಿಗೂ ಇದ್ದಾರೆ. ಹಾಗಾಗಿ ಎಕೆ ಎಡಿ ಎಂದು ಬರೆಸಿ ನಿಖರ ಜಾತಿ ಹೆಸರು ಉಲ್ಲೇಖವಾಗಿಲ್ಲ. ಬೆಂಗಳೂರು ಮೈಸೂರು ಭಾಗದಲ್ಲಿ ಬೇರೆ ರೀತಿ ಗುರುತಿಸಿಕೊಳ್ಳುವ ಒಳಪಂಗಡಗಳು ಮೀಸಲಾತಿ ನಿರ್ಣಯಕ್ಕೆ ಪೆಟ್ಟು ನೀಡಿದೆ ಎಂದು ಹೇಳಿದರು. ದಸಂಸ ಜಿಲ್ಲಾ ಸಂಚಾಲಕ ಕುಂದೂರು ಮುರುಳಿ ಮಾತನಾಡಿ ನಗರ ಪ್ರದೇಶದಲ್ಲಿ ಜಾತಿಯ ಹೆಸರು ಹೇಳಲು ಹಿಂಜರಿಕೆ ಕಾಣುತ್ತದೆ. ಅಲ್ಲಿನ ನಮ್ಮ ಪರಿಶಿಷ್ಟ ಜಾತಿಯ ಬಂಧುಗಳು ಅವರ ಮೂಲ ಜಾತಿಯ ಹೆಸರು ನಮೂದಿಸಿ ಸಹಕರಿಸಿ. ಗ್ರಾಮೀಣ ಪ್ರದೇಶದಲ್ಲಿ ಒಂದೆಡೆ ಸಿಗುವ ಪರಿಶಿಷ್ಟ ಜಾತಿಯ ಮಂದಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಜಿಲ್ಲೆಯಲ್ಲಿ ಚಾಲನೆ ದೊರಕಿದೆ. ಅವರವರ ಮೂಲ ಜಾತಿಯ ಹೆಸರು ಗಣತಿದಾರರಿಗೆ ನೀಡಿ ಜೊತೆಗೆ ತಮ್ಮ ಕುಟುಂಬ ಸದಸ್ಯರ ಹೆಸರು, ಶಿಕ್ಷಣ, ಉದ್ಯೋಗ, ಆರ್ಥಿಕ ಪರಿಸ್ಥಿತಿ ಎಲ್ಲವೂ ನೀಡಬೇಕಿದೆ ಎಂದರು. ದಸಂಸ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿದರು. ನಂತರ ಜಾಗೃತಿ ವಾಹನಕ್ಕೆ ಚಾಲನೆ ನೀಡಲಾಯಿತು. ಸಭೆಯಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಕೆ.ಎಚ್.ರಂಗನಾಥ್, ಲಕ್ಕೇನಹಳ್ಳಿ ನರಸಿಯಪ್ಪ, ತಾಲೂಕು ಸಮಿತಿಯ ಹೊಸಕೆರೆ ನರಸಿಂಹಮೂರ್ತಿ, ಬಸವರಾಜು, ಫಣೀಂದ್ರ, ಪಾತರಾಜು, ನಂಜುಂಡಯ್ಯ, ಬಿ.ಎಚ್.ಕಾವಲ್ ಶಿವಮ್ಮ, ಮಾದೇನಹಳ್ಳಿ ದೊಡ್ಡಮ್ಮ, ಅನ್ನಪೂರ್ಣ ಇತರರು ಇದ್ದರು.