ಎತ್ತಿನ ಹೊಳೆ: ಉನ್ನತ ಮಟ್ಟದ ಸಭೆ ಕರೆಯಲಿ

| Published : Apr 28 2025, 12:46 AM IST

ಸಾರಾಂಶ

ಎತ್ತಿನಹೊಳೆ ಯೋಜನೆ ಕುರಿತು ಕೇಂದ್ರ ತಂಡ ಗಂಭೀರ ಆಕ್ಷೇಪಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ. ಶಿವಕುಮಾರ್‌ ಅವರು ತಕ್ಷಣ ನೀರಾವರಿ ಮತ್ತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆಯಬೇಕು.

ಕನ್ನಡಪ್ರಭ ವಾರ್ತೆ, ತುಮಕೂರುಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆ ಕುರಿತು ಕೇಂದ್ರ ತಂಡ ಗಂಭೀರ ಆಕ್ಷೇಪಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ. ಶಿವಕುಮಾರ್‌ ಅವರು ತಕ್ಷಣ ನೀರಾವರಿ ಮತ್ತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆಯಬೇಕು. ಆ ಸಭೆಗೆ ಸಂಬಂಧಪಟ್ಟ ಎಲ್ಲ ಜಿಲ್ಲೆಗಳ ಸಚಿವರು ಮತ್ತು ಶಾಸಕರನ್ನು ಆಮಂತ್ರಿಸಬೇಕುʼ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶಗೌಡರು ಆಗ್ರಹಿಸಿದ್ದಾರೆ.ಈ ಯೋಜನೆಗೆ ಕೇಂದ್ರ ತಂಡದ ಗುರುತರ ಆಕ್ಷೇಪ ಕುರಿತು ಮಾಧ್ಯಮಗಳಲ್ಲಿ ಭಾನುವಾರ ವರದಿಯಾದ ಸುದ್ದಿಗಳನ್ನು ಉಲ್ಲೇಖಿಸಿ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೇಂದ್ರ ತಂಡದ ಈ ಆಕ್ಷೇಪದ ಗಂಭೀರತೆಯನ್ನು ಗಮನಿಸಿದರೆ ಇಡೀ ಯೋಜನೆ ನಿಂತು ಹೋಗುವ ಭಯ ಸೃಷ್ಟಿಯಾಗಿದೆ. ಈ ಭಯ ಹೋಗಲಾಡಿಸಲು ನಮ್ಮ ಜಿಲ್ಲೆಯ ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ್‌ ಮತ್ತು ಕೆ.ಎನ್‌. ರಾಜಣ್ಣ ಅವರೂ ಮಧ್ಯ ಪ್ರವೇಶಿಸಿ ಶಿವಕುಮಾರ್‌ ಅವರ ಮೇಲೆ ಪ್ರಭಾವ ಬೀರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೊದಲಿನಿಂದಲೂ ಈ ಯೋಜನೆ ಕುರಿತು ಅನೇಕ ಅನುಮಾನಗಳು ಇದ್ದುವು. ಇದು ಪರಿಸರದ ಮೇಲೆ ಮಾಡಬಹುದಾದ ವ್ಯತಿರಿಕ್ತ ಪರಿಣಾಮಗಳ ಕುರಿತು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು. 24 ಟಿಎಂಸಿ ನೀರು ಲಭಿಸದೇ ಇರಬಹುದು ಎನ್ನುವುದು ಎಲ್ಲರ ಶಂಕೆಯಾಗಿತ್ತು. ಈಗ ನೋಡಿದರೆ ನೀರಾವರಿ ಇಲಾಖೆ ಅಧಿಕಾರಿಗಳು ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ಇದು ಹೊಣೆಗೇಡಿತನದ ಪರಮಾವಧಿ. ಇದಕ್ಕೆ ಕಾರಣರಾದ ಅಧಿಕಾರಿ ಎಷ್ಟೇ ಉನ್ನತ ಮಟ್ಟದಲ್ಲಿ ಕೆಲಸ ಮಾಡುತ್ತಿರಲಿ ಅವರ ವಿರುದ್ಧ ಕ್ರಮ ಜರುಗಿಸಬೇಕುʼ ಎಂದು ಅವರು ಒತ್ತಾಯಿಸಿದ್ದಾರೆ. ಪರಿಸರ ಸೂಕ್ಷ್ಮವಾದ ಪಶ್ಚಿಮ ಘಟ್ಟದ ಎತ್ತಿನ ಹೊಳೆಯಿಂದ ನೀರು ಎತ್ತುವ ಈ ಯೋಜನೆಯ ಅಂದಾಜು ವೆಚ್ಚ ಈಗಾಗಲೇ 23,000 ಕೋಟಿ ರೂಪಾಯಿಗಳಿಗೆ ಏರಿದೆ. ಕೇಂದ್ರ ಸರ್ಕಾರದ ಆಕ್ಷೇಪಗಳ ಕಾರಣವಾಗಿ ಯೋಜನೆಯ ಕಾಮಗಾರಿ ನಿಂತು ಹೋದರೆ ಯೋಜನೆಯ ವೆಚ್ಚ ಹೆಚ್ಚುತ್ತ ಹೋಗುತ್ತದೆ. ಅದಕ್ಕಿಂತ ಹೆಚ್ಚಾಗಿ ಈ ನೀರಿಗಾಗಿ ಚಾತಕ ಪಕ್ಷಿಗಳ ಹಾಗೆ ಕಾಯುತ್ತಿರುವ ಜನತೆಯ ದಾಹ ಇಂಗುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಮಂಜೂರು ಮಾಡಿದ್ದಕ್ಕಿಂತ ಹೆಚ್ಚಿನ ಜಮೀನನ್ನು ಯೋಜನೆಗೆ ಬಳಸಿರುವುದು, ಅವಶೇಷ ಸುರಿಯುವುದಕ್ಕಾಗಿಯೇ 103 ಹೆಕ್ಟೇರ್‌ ಭೂಮಿಯನ್ನು ಬಳಸಿರುವುದು, ಅರಣ್ಯ ಬಳಕೆಗೆ ಇಲಾಖೆ ನೀಡಿದ್ದ ಎಲ್ಲ ಷರತ್ತುಗಳನ್ನು ಉಲ್ಲಂಘಿಸಿರುವುದನ್ನು ನೋಡಿದರೆ ನಮ್ಮ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಇಂಥ ಸೂಕ್ಷ್ಮ ಯೋಜನೆಗಳನ್ನು ನಿರ್ವಹಣೆಯ ಪರಿಣತಿಯೇ ಇಲ್ಲವೇ ಎಂಬ ಅನುಮಾನ ಉಂಟಾಗುತ್ತದೆ ಎಂದು ಶಾಸಕ ಸುರೇಶಗೌಡರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಕುಡಿಯುವ ನೀರಿನ ಯೋಜನೆಯೇ ಅಥವಾ ನೀರಾವರಿ ಯೋಜನೆಯೇ ಎಂಬ ಮಹತ್ವದ ಪ್ರಶ್ನೆಯನ್ನು ಕೇಂದ್ರ ತಂಡ ಎತ್ತಿದೆ. ಈ ಎಲ್ಲ ಅನುಮಾನಗಳನ್ನು ಸಾಧ್ಯವಾದಷ್ಟು ಶೀಘ್ರವಾಗಿ ಬಗೆಹರಿಸುವ ಜವಾಬ್ದಾರಿ ನೀರಾವರಿ ಸಚಿವರ ಮೇಲೆ ಇದೆ. ಮತ್ತು ಸಂಬಂಧ ಪಟ್ಟ ಜಿಲ್ಲೆಗಳ ಸಚಿವರ ಮೇಲೆಯೂ ಇದೆ. ನಾವು ವಿರೋಧ ಪಕ್ಷದಲ್ಲಿ ಇರುವ ಶಾಸಕರು ಈ ಎಲ್ಲ ಅನುಮಾನಗಳನ್ನು ಪರಿಹರಿಸುವ ದಿಸೆಯಲ್ಲಿ ರಾಜ್ಯ ಸರ್ಕಾರದ ಜತೆಗೆ ಸಂಪರ್ಣವವಾಗಿ ಸಹಕರಿಸಲು ಸಿದ್ಧರಿದ್ದೇವೆ. ಆದರೆ, ರಾಜ್ಯ ಸರ್ಕಾರದ ತಾತ್ಸಾರದ ಧೋರಣೆಯನ್ನು ಸಹಿಸಲು ಆಗದು. ಏಕೆಂದರೆ ನಾವು ಈ ಯೋಜನೆಗಳ ಮೇಲೆ ಅವಲಂಬಿತರಾದ ಜನರ ಜತೆಗೆ ನಿಲ್ಲಬೇಕಾಗುತ್ತದೆ. ಅದಕ್ಕೆ ಪೂರಕವಾದ ಹೋರಾಟವನ್ನೂ ರೂಪಿಸಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.