ನೀರಿನ ಅಭಾವ: ಟ್ಯಾಂಕರ್‌ ಮೂಲಕ ಪೂರೈಕೆ

| Published : Apr 28 2025, 12:46 AM IST

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯ 17 ಗ್ರಾಮ ಪಂಚಾಯ್ತಿಗಳ 19 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು 2 ಟ್ಯಾಂಕರ್‌ಗಳಲ್ಲಿ ಸರಕಾರಿ 5 ಟ್ರಿಪ್‌ನಂತೆ 19 ಬಾಡಿಗೆ ಕೊಳವೆಬಾವಿಗಳ ಮೂಲಕ ನೀರೊದಗಿಸಲಾಗುತ್ತಿದೆ. ನಗರ ಪ್ರದೇಶಗಳ 27 ವಾರ್ಡ್ ಗಳಲ್ಲಿ ಈಗಾಗಲೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬೇಸಿಗೆ ಬಂದರೆ ಸಾಕು ನದಿ ನಾಲೆಗಳ ಆಶ್ರಯವಿಲ್ಲದ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಜಾನುವಾರುಗಳು ನೀರಿಗೆ ಪರಿತಪಿಸುವುದು ಸಾಮಾನ್ಯ. ಮಾರ್ಚ್, ಏಪ್ರಿಲ್ ಮತ್ತು ಮೇ ಈ ಮೂರು ತಿಂಗಳ ಕಾಲ ಜಿಲ್ಲಾಡಳಿತ ಜನತೆಗೆ ನೀರು ಒದಗಿಸಲು ಹರಸಾಹಸ ನಡೆಸುವುದು ಜಿಲ್ಲೆಯಲ್ಲಿ ಹೊಸತೇನಲ್ಲ ಎಂಬಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 78ನೇ ವರ್ಷದ ಹೊಸ್ತಿಲಲ್ಲಿದ್ದರೂ ಈವರೆಗೆ ಜಿಲ್ಲೆಗಂತಲೇ ಒಂದೂ ಕೂಡ ಬೃಹತ್ ನೀರಾವರಿ ಯೋಜನೆ ಕಾರ್ಯಗತವಾಗಿಲ್ಲ. ಬಯಲು ಸೀಮೆ ಜಿಲ್ಲೆಗಳಿಗೆಂದು ಘೋಷಣೆಯಾಗಿರುವ ಎತ್ತಿನಹೊಳೆ ಯೋಜನೆಯ ಭೂಮಿ ಪೂಜೆಯಾಗಿ 13 ವರ್ಷ ಕಳೆದರೂ ಜಿಲ್ಲೆಗೆ ನೀರು ಹರಿಯುವ ನಿರೀಕ್ಷೆ ಇಲ್ಲ. ತಲೆಎತ್ತಿದ ನೀರಿನ ಅಭಾವ

2024ರಲ್ಲಿ 736 ಮಿ.ಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಹೆಚ್ಚಾಗಿದ್ದರೂ ಸಹ ಬೇಸಿಗೆಯಲ್ಲಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಂತಹ ಕಡೆ ಖಾಸಗಿ ಕೊಳವೆ ಬಾವಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ನೀರು ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ನೀರಿನ ಅಭಾವವನ್ನು ಒತ್ತಿ ಹೇಳಿದೆ.

ಜಿಲ್ಲೆಯ 17 ಗ್ರಾಮ ಪಂಚಾಯ್ತಿಗಳ 19 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು 2 ಟ್ಯಾಂಕರ್‌ಗಳಲ್ಲಿ ಸರಕಾರಿ 5 ಟ್ರಿಪ್‌ನಂತೆ 19 ಬಾಡಿಗೆ ಕೊಳವೆಬಾವಿಗಳ ಮೂಲಕ ನೀರೊದಗಿಸಲಾಗುತ್ತಿದೆ. ನಗರ ಪ್ರದೇಶಗಳ 27 ವಾರ್ಡ್ ಗಳಲ್ಲಿ ಈಗಾಗಲೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 100 ಗ್ರಾಮ ಪಂಚಾಯ್ತಿಗಳ 281 ಗ್ರಾಮಗಳಲ್ಲಿ ನೀರಿನ ಸಮಸ್ಯೆ ನೀಗಿಸಲು 118 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಒದಗಿಸಲು ಚಿಂತನೆ ಮಾಡಲಾಗಿದೆ.

ಜಲಜೀವನ್ ಮಿಷನ್ ಯೋಜನೆ

ನಗರ ಪ್ರದೇಶದ 27 ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ. ಅಂತಹ ಸ್ಥಳಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅವಕಾಶ ಕಲ್ಪಿಸಿಕೊಂಡು ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಅಥವಾ ಖಾಸಗಿ ಕೊಳವೆ ಬಾವಿ ಮಾಲಿಕರ ಸಹಕಾರ ಪಡೆದು ನೀರು ಪೂರೈಸುವ ವ್ಯವಸ್ಥೆ ಆಗಬೇಕು. ಈಗಾಗಲೇ ನೀರು ಪೂರೈಸುತ್ತಿರುವವರಿಗೆ ನಿಯಮಿತವಾಗಿ ಹಣ ಸಂದಾಯವಾಗುವಂತೆ ನಿಗಾ ವಹಿಸಲು ಕೂಡ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ಪಂಚಾಯಿತಿಯ ಬುಡುಗನೂರು, ಆವಲಗುರ್ಕಿ ೪ ಪಂಚಾಯಿತಿಯ ಕವರ್ನಹಳ್ಳಿ,ಪೆರೇಸಂದ್ರ ಪಂಚಾಯಿತಿಯ ಪೆರೇಸಂದ್ರದಲ್ಲಿ, ಅರೂರು- ಪಂಚಾಯಿತಿಯ ಪೆರೇಸಂದ್ರ ಕ್ರಾಸ್ ಒಟ್ಟು 4 ಗ್ರಾಮ ಪಂಚಾಯಿತಿಯ 4 ಗ್ರಾಮಗಳಲ್ಲಿ ನೀರಿಗೆ ಸಮಸ್ಯೆಯಿದ್ದು ಈ ಗ್ರಾಮಗಳಿಗೆ 4 ಖಾಸಗಿ ಕೊಳವೆಬಾವಿಗಳಿಂದ ನೀರನ್ನು ಖರೀದಿಸಿ ಒದಗಿಸಲಾಗುತ್ತಿದೆ.

ಖಾಸಗಿ ಬೋರ್‌ವೆಲ್‌ ಬಳಕೆ

ಶಿಡ್ಲಘಟ್ಟ ತಾಲೂಕಿನ 5 ಗ್ರಾಮ ಪಂಚಾಯಿತಿಗಳಲ್ಲಿ ನೀರಿಗೆ ಸಮಸ್ಯೆಯಿದ್ದು 6 ಖಾಸಗಿ ಬೋರ್‌ವೆಲ್‌ಗಳಿಂದ, 1 ಟ್ಯಾಂಕರ್‌ನಿಂದ ದಿನಕ್ಕೆ 3 ಬಾರಿಯಂತೆ ನೀರು ಸರಬರಾಜು ಮಾಡಲಾಗುತ್ತಿದೆ. ಚಿಂತಾಮಣಿ ತಾಲೂಕು 5 ಗ್ರಾ.ಪಂನಲ್ಲಿ ಸಮಸ್ಯೆಯಿದ್ದು 4 ಕೊಳವೆಬಾವಿಗಳಿಂದ ಖರೀದಿ ಮಾಡಿ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಬಾಗೇಪಲ್ಲಿ ತಾಲೂಕಿನಲ್ಲಿ 4 ಗ್ರಾಮ ಪಂಚಾಯಿತಿಗಳಲ್ಲಿ ಸಮಸ್ಯೆಯಿದ್ದು 2 ಖಾಸಗಿ ಕೊಳವೆಬಾವಿ, 1 ಟ್ಯಾಂಕರ್ ಮೂಲಕ ದಿನಕ್ಕೆ ಎರಡು ಬಾರಿ ನೀರು ಒದಗಿಸಲಗುತ್ತಿದೆ. ಜಿಲ್ಲೆಯಲ್ಲಿ ಹಾಲಿ ಶಿಡ್ಲಘಟ್ಟ ನಗರದ 17 ವಾರ್ಡುಗಳಲ್ಲಿ ನೀರಿನ ಸಮಸ್ಯೆಯಿದ್ದು 11 ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಗೌರಿಬಿದನೂರು ನಗರದ 4 ವಾರ್ಡ್‌ಗಳಲ್ಲಿ 5 ಕೊಳವೆಬಾವಿಗಳಿಂದ ನೀರು ಪೂರೈಕೆಗೆ ಕ್ರಮ, ಚಿಂತಾಮಣಿ ನಗರದಲ್ಲಿ 4 ವಾರ್ಡುಗಳಿಗೆ 1 ಬಾಡಿಗೆ ಕೊಳವೆಬಾವಿ ಮೂಲಕ ನೀರು ಹರಿಸಲಾಗುತ್ತಿದೆ.

ಮುಂದೆ 27 ವಾರ್ಡ್‌ಗಳಿಗೆ ಸಮಸ್ಯೆ

ಭವಿಷ್ಯದಲ್ಲಿ ಗೌರಿಬಿದನೂರು-4 ವಾರ್ಡು, ಗುಡಿಬಂಡೆ-3, ಬಾಗೇಪಲ್ಲಿ-10, ಶಿಡ್ಲಘಟ್ಟ-5 ಚಿಂತಾಮಣಿ-5 ಹೀಗೆ ನಗರಸಭೆ ಪಟ್ಟಣ ಪಂಚಾಯಿತಿ ಪುರಸಭೆಗಳ ೨೭ ವಾರ್ಡುಗಳಲ್ಲಿ ನೀರಿಗೆ ಸಮಸ್ಯೆ ಎದುರಾಗಬಹುದು. ಇದನ್ನು ಪರಿಹರಿಸಲು ಜಿಲ್ಲಾಡಳಿತ ಕ್ರಮವಹಿಸಿದೆ.ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಾಗಿಯೇ ಮಳೆಯಾಗಿದೆ. ಆದರೂ ಕೆಲವು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಈ ಸಂಬಂಧ ಈಗಾಗಲೇ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳ ಸಭೆ ಮಾಡಿದ್ದು ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮವಹಿಸಲು ಸೂಚನೆ ನೀಡಲಾಗಿದೆ..