ಚನ್ನಪಟ್ಟಣ: ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಚನ್ನಪಟ್ಟಣ-ಕಬ್ಬಾಳು ಮುಖ್ಯರಸ್ತೆಯಲ್ಲಿ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದ ಬಳಿ ರೈತರು ರಸ್ತೆ ತಡೆದು ಅಹೋರಾತ್ರಿ ಪ್ರತಿಭಟನೆ ನಡೆಸಿದರು

ಚನ್ನಪಟ್ಟಣ: ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಚನ್ನಪಟ್ಟಣ-ಕಬ್ಬಾಳು ಮುಖ್ಯರಸ್ತೆಯಲ್ಲಿ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದ ಬಳಿ ರೈತರು ರಸ್ತೆ ತಡೆದು ಅಹೋರಾತ್ರಿ ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ-ಕಬ್ಬಾಳು ರಸ್ತೆಯಲ್ಲಿನ ದೊಡ್ಡ ಸೇತುವೆ ಬಳಿ ಜಮಾಯಿಸಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಕಷ್ಟಪಟ್ಟು, ಸಾಲ ಮಾಡಿ ಬೆಳೆದ ಬೆಳೆಯನ್ನು ಆನೆಗಳು ಕ್ಷಣಾರ್ಧದಲ್ಲಿ ನಾಶ ಮಾಡುತ್ತಿವೆ. ಕಾಡಾನೆ ಹಾವಳಿಯಿಂದ ಪ್ರತಿವರ್ಷ ಲಕ್ಷಾಂತರ ರು. ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.

ಜಮೀನಿಗೆ ಹೋಗಲು ಭಯ: ರೈತರು ರಾತ್ರಿ ವೇಳೆ ಬೆಳೆಗಳಿಗೆ ನೀರುಕಟ್ಟಲು ಜಮೀನಿಗೆ ಹೋಗಲು ಹೆದರಿ ಜೀವ ಕೈಯಲ್ಲಿ ಹಿಡಿದು ಜೀವಿಸುವಂತಾಗಿದೆ. ಈಗಾಗಲೇ ಆನೆಗಳು ಸಾಕಷ್ಟು ರೈತರ ಮೇಲೆ ದಾಳಿ ನಡೆಸಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಮಗಳಿಗೆ ಆನೆಗಳು ನುಗ್ಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಡಾನೆ ದಾಳಿಯಿಂದ ಆದ ನಷ್ಟಕ್ಕೆ ಸರ್ಕಾರ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲದಾಗಿದೆ. ನಮ್ಮ ಜಮೀನನ್ನು ಸರ್ಕಾರವೇ ಇಟ್ಟುಕೊಂಡು ವರ್ಷಕ್ಕೆ ಇಂತಿಷ್ಟು ಪರಿಹಾರ ನೀಡಲಿ. ಆನೆಗೆ ಏನು ಬೇಕೋ ಅದನ್ನೇ ಜಮೀನಿನಲ್ಲಿ ಬೆಳೆದು ನಮಗೆ ಪರಿಹಾರ ನೀಡಲಿ ಎಂದು ಆಗ್ರಹಿಸಿದರು.

ಅರಣ್ಯ ಸಚಿವರು ಬರಬೇಕು:

ಕಾಡಾನೆ ದಾಳಿ ವಿಪರೀತವಾದ ಸಂದರ್ಭದಲ್ಲಿ ಸ್ಥಳಕ್ಕೆ ಬರುವ ಅರಣ್ಯಾಧಿಕಾರಿಗಳು ಒಂದೆರಡು ಆನೆಗಳನ್ನು ಹಿಡಿದು ಸ್ಥಳಾಂತರಿಸುತ್ತಾರೆ. ಆದರೆ ಮತ್ತೆ ಆನೆ ದಾಳಿ ಮುಂದುವರಿಯುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಸಚಿವರು ಆಗಮಿಸಿ ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ರಸ್ತೆ ಬದಿಯಲ್ಲೇ ಅಡುಗೆ:

ಗುರುವಾರ ಬೆಳಗ್ಗೆ ಸುಮಾರು ೧೧ ಗಂಟೆಗೆ ಪ್ರತಿಭಟನೆ ಆರಂಭಿಸಿದ ರೈತರು ರಾತ್ರಿಯಾದರೂ ಪ್ರತಿಭಟನೆ ಮುಂದುವರಿಸಿದ್ದರು. ರಸ್ತೆ ಬದಿಯಲ್ಲೇ ರೈತರಿಗೆ ಅಡುಗೆ ಮಾಡಿ ಊಟದ ವ್ಯವಸ್ಥೆ ಕಲ್ಪಿಸಲಾಯಿತು.

ರೈತರ ಪ್ರತಿಭಟನೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು, ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು ಸೇರಿದಂತೆ ಅನೇಕ ಮುಖಂಡರು ಬೆಂಬಲ ನೀಡಿದ್ದಾರೆ.

ಪೊಲೀಸರು ಮೊಕ್ಕಾಂ: ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಡಿಎಫ್‌ಒ ರಾಮಕೃಷ್ಣಪ್ಪ, ಡಿವೈಎಸ್‌ಪಿ ಕೆ.ಸಿ.ಗಿರಿ ಸೇರಿದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಪೊಟೋ೨೩ಸಿಪಿಟಿ6:

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಚನ್ನಪಟ್ಟಣ-ಕಬ್ಬಾಳು ಮುಖ್ಯರಸ್ತೆಯಲ್ಲಿ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದ ಬಳಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಬಾಕ್ಸ್.........

ರೈತನ ಮೇಲೆ ವನ್ಯಜೀವಿ ದಾಳಿ

ಚನ್ನಪಟ್ಟಣ: ಜಮೀನಿಗೆ ಹೋಗಿದ್ದ ರೈತನ ಮೇಲೆ ವನ್ಯಜೀವಿಯೊಂದು ದಾಳಿ ನಡೆಸಿ, ರೈತನ ಮುಖ ಹಾಗೂ ಎಡಗೈಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಸಣ್ಣಪ್ಪ(೬೫) ವನ್ಯಜೀವಿ ದಾಳಿಗೆ ಒಳಗಾದವರು. ಗುರುವಾರ ಬೆಳಗೆ ಅವರು ಜಾನುವಾರುಗಳಿಗೆ ಮೇವು ತರಲು ತೋಟಕ್ಕೆ ಹೋಗಿದ್ದ ವೇಳೆ ಏಕಾಏಕಿ ಇವರ ಮೇಲೆ ದಾಳಿ ನಡೆಸಿದ್ದು, ರೈತನ ಚೀರಾಟ ಕೇಳಿ ಅಲ್ಲಿಂದ ಪರಾರಿಯಾಗಿದೆ. ವನ್ಯಜೀವಿ ದಾಳಿಯಿಂದ ರೈತ ಪ್ರಜ್ಞೆ ತಪ್ಪಿದ್ದು, ಯಾವ ಪ್ರಾಣಿ ದಾಳಿ ನಡೆಸಿತು ಎಂಬುದು ರೈತನಿಗೂ ಗೊತ್ತಿಲ್ಲ ಎಂಬ ಮಾಹಿತಿ ಅರಣ್ಯ ಇಲಾಖೆ ತಿಳಿಸಿದೆ.

ವನ್ಯಜೀವಿಯಿಂದ ಗಾಯಗೊಂಡ ರೈತನಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಾಕ್ಸ್.............

ಕಾಡಾನೆ ದಾಳಿಗೆ ಅಡಕೆ, ತೆಂಗು ನಾಶ

ಚನ್ನಪಟ್ಟಣ: ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಕಾಡಾನೆ ಹಾವಳಿಗೆ ಅಡಕೆ, ತೆಂಗು ಬೆಳೆ ನಾಶವಾಗಿದೆ. ಗ್ರಾಮದ ದೊಡ್ಡೇಗೌಡ, ನಂದೀಶ್ ಜಮೀನಿಗೆ ನಗ್ಗಿರುವ ಕಾಡಾಣೆಗಳು ಅಡಿಕೆ, ತೆಂಗು ಬೆಳೆಯನ್ನು ನಾಶಪಡಿಸಿದೆ. ಕಾಡಾನೆ ಹಾವಳಿ ತಡೆಯದ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶಗೊಂಡಿದ್ದು, ಚನ್ನಪಟ್ಟಣ-ಕಬ್ಬಾಳು ಮುಖ್ಯ ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.